ಜಿಲ್ಲೆಯಲ್ಲಿ ಮರಳು ದರ ದುಬಾರಿ; ಸಿವಿಲ್ ಗುತ್ತಿಗೆದಾರರಿಂದ ಜಿಲ್ಲಾಡಳಿತಕ್ಕೆ ಮನವಿ

ಶಿರಸಿ: ಜಿಲ್ಲೆಯಲ್ಲಿ ಮರಳು ಗಣಿಗಾರಿಕೆ ನಡೆಸಲು ಪರವಾನಗಿ ಪಡೆದವರು ಮನಸೋ ಇಚ್ಛೆ ದರ ನಿಗದಿ ಪಡಿಸಿ ಮಾರಾಟ ಮಾಡುತ್ತಿದ್ದಾರೆಂದು ಆರೋಪಿಸಿ ಜಿಲ್ಲಾ ಗುತ್ತಿಗೆದಾರರ ಸಂಘವು ಇದರ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿಗಳಿಗೆ ಆಗ್ರಹಿಸಿದೆ.

ಗಂಗಾವಳಿ, ಅಘನಾಶಿನಿ ಹಾಗೂ ಶರಾವತಿ ನದಿಗಳಲ್ಲಿ ಒಟ್ಟು 8 ಮರಳು ಪಟ್ಟಿಗಳಿಂದ 89 ಪರವಾನಿಗೆದಾರರಿಗೆ ಮರಳನ್ನು ಮತ್ತು ಸಾಗಣೆ ಮಾಡಲು ಅನುಮತಿ ನೀಡಲಾಗಿದೆ. ಮರಳು ತೆಗೆದು ವಾಹನಕ್ಕೆ ಲೋಡ್ ಮಾಡುವುದು ಮತ್ತು ರಾಜಧನ ಸೇರಿ ಪ್ರತಿ ಲೋಡಿಗೆ ರೂ. 5500 ಮತ್ತು ಸಾಗಣಿಕೆ ವೆಚ್ಚ ಪ್ರತಿ ಕಿ.ಮೀಗೆ ರೂ. 60 ರಂತೆ ನಿಗದಿ ಪಡಿಸಿ ಜಿಲ್ಲಾಡಳಿತ ಅನುಮತಿ ನೀಡಿದೆ. ಇದೇ ದರದಲ್ಲಿ ಜಿಲ್ಲಾಡಳಿತವು ಶಿರಸಿ ಮತ್ತು ಹಳಿಯಾಳಗಳಲ್ಲಿ ದಾಸ್ತಾನು ಮಾಡಿದೆ. ಆದರೆ ಈಗ ಪರವಾನಿಗೆ ಪಡೆದವರು ಈ ಮೇಲಿನ ದರಕ್ಕೆ ಮರಳನ್ನು ನೀಡದೇ ಪ್ರತಿ ಲೋಡಿಗೆ ರೂ. 12,000 ದಿಂದ ರೂ. 15,000 ದವರೆಗೆ ಮಾರುತ್ತಿದ್ದು ಸಾಗಣೆ ವೆಚ್ಚವನ್ನು ಮನ ಬಂದ ರೀತಿಯಲ್ಲಿ ಹೇಳುತ್ತಿರುವುದು ಜಿಲ್ಲೆಯ ಜನರ ಮತ್ತು ಗುತ್ತಿಗೆದಾರರ ಆಕ್ರೋಶಕ್ಕೆ ಕಾರಣವಾಗಿದೆ.

ಎಸ್.ಆರ್‌ನಲ್ಲಿ ಮರಳಿನ ದರವನ್ನು ಪ್ರತಿ ಕ್ಯೂಬಿಕ್ ಮೀಟರ್‍ಗೆ ರೂ. 1700 ಎಂದು ನಿಗದಿ ಪಡಿಸಲಾಗಿದೆ. ಆದರೆ ಈಗ ಜಿಲ್ಲೆಯಲ್ಲಿ ಸಿಗುವ ಈ ಹೆಚ್ಚಿನ ದರದ ಮರಳನ್ನು ಖರೀದಿಸಿದರೆ ಪ್ರತಿ ಕ್ಯೂಬಿಕ್ ಮೀಟರ್‍ಗೆ ರೂ. 2600 ರಿಂದ ರೂ. 3500 ರವರೆಗೆ ಆಗುತ್ತಿದ್ದು ಎಲ್ಲಾ ಗುತ್ತಿಗೆದಾರರಿಗೆ ಹೊರೆಯಾಗಿ ಪರಿಣಮಿಸಿದೆ. ಅಲ್ಲದೇ ಸ್ವಂತ ಮನೆ ಕಟ್ಟುವವರಿಗೆ, ಸಂಘ ಸಂಸ್ಥೆಗಳಿಗೆ ಎಲ್ಲರಿಗೆ ಸಮಸ್ಯೆಯಾಗಿದ್ದು ಜಿಲ್ಲಾಡಳಿತವು ಕೂಡಲೇ ದರ ಸರಿಪಡಿಸಲು ಮತ್ತು ಪರವಾನಿಗೆದಾರರ ಮೇಲೆ ನಿಗಾ ಇಡಲು ಜಿಲ್ಲಾ ಗುತ್ತಿಗೆದಾರರ ಸಂಘವು ಒತ್ತಾಯಿಸಿದೆ.

ಕುಮಟಾದ ಎಪಿಎಂಸಿ ಸಭಾಭವನದಲ್ಲಿ ಡಿ.3 ರಂದು ಜಿಲ್ಲಾ ಗುತ್ತಿಗೆದಾರರ ಸಂಘದ ಕಾರ್ಯಕಾರಿ ಸಮಿತಿ ಸಭೆ ನಡೆಸಿ ಈ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಸಮಸ್ಯೆಗಳನ್ನು ಕೂಡಲೇ ಬಗೆಹರಿಸದಿದ್ದರೆ ಜಿಲ್ಲೆಯಾದ್ಯಂತ ಗುತ್ತಿಗೆದಾರರು ಹೋರಾಟ ಮಾಡುವುದು ಅನಿವಾರ್ಯ ಮತ್ತು ಎಲ್ಲಾ ಇಲಾಖೆಯ ಟೆಂಡರ್‍ಗಳನ್ನು ಬಹಿಷ್ಕರಿಸಬೇಕಾಗುತ್ತದೆ ಎಂದು ಜಿಲ್ಲಾ ಸಿವಿಲ್ ಗುತ್ತಿಗಾದಾರರ ಸಂಘವು ಆಗ್ರಹ ಪಡಿಸಿದೆ.
1. ಜಿಲ್ಲೆಯಲ್ಲಿ ಮರಳಿಗೆ ಜಿಲ್ಲಾಡಳಿತ ದರ ನಿಗದಿ ಪಡಿಸಿದ್ದು ಅದೇ ದರದಲ್ಲಿ ಎಲ್ಲಾ ಗುತ್ತಿಗೆದಾರರಿಗೆ ಸಿಗುವಂತಾಗಬೇಕು.

2. ಕೇವಲ ನಿರ್ಮಿತಿ ಕೇಂದ್ರ ಮತ್ತು ಕೆಆರ್‍ಐಡಿಎಲ್ (KRIDL) ನವರು ನಿರ್ವಹಿಸುವ ಕಾಮಗಾರಿಗಳು ಮಾತ್ರ ಸರ್ಕಾರಿ ಕೆಲಸವಲ್ಲ, ಇಲಾಖೆಯಿಂದ ಟೆಂಡರ್ ಪಡೆದ ಸಿವಿಲ್ ಗುತ್ತಿಗೆದಾರರು ನಿರ್ವಹಿಸುವ ಕಾಮಗಾರಿಯೂ ಸರ್ಕಾರದ ಕೆಲಸ ಎಂದು ಜಿಲ್ಲಾಧಿಕಾರಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕೆಂದು ಸಂಘ ಒತ್ತಾಯಿಸಿದೆ.

3. ಶಿರಸಿ ಹಾಗೂ ಹಳಿಯಾಳದಲ್ಲಿ ಮರಳು ದಾಸ್ತಾನು ಮಾಡಿದಂತೆ ಜಿಲ್ಲೆಯ ಪ್ರತಿ ತಾಲೂಕು ಕೇಂದ್ರದಲ್ಲಿ ದಾಸ್ತಾನು ಮಾಡಿ ಗುತ್ತಿಗೆದಾರರಿಗೆ ಹಾಗೂ ಜನಸಾಮಾನ್ಯರಿಗೆ ಮರಳು ಯೋಗ್ಯ ದರದಲ್ಲಿ ಸಿಗುವಂತಾಗಬೇಕು ಎಂದು ಒತ್ತಾಯಿಸುತ್ತೇವೆ.

4. ಸಾಗಾಣಿಕೆ ಸಮಯದಲ್ಲಿ ಪೊಲೀಸ್ ಅಧಿಕಾರಿಗಳಿಂದ ಹಾಗೂ ಅರಣ್ಯ ಅಧಿಕಾರಿಗಳಿಂದ ಕಿರುಕುಳ ಆಗುತ್ತಿದ್ದು ಇದನ್ನು ಬಗೆಹರಿಸಬೇಕು.

5. ಜಿಲ್ಲೆಯ ಕಾಳಿ ನದಿಯಿಂದಲೂ ಮರಳನ್ನು ತೆಗೆಯಲು ಕೂಡಲೇ ಅನುಮತಿ ನೀಡಬೇಕು.

6. ಜಿಲ್ಲೆಯಲ್ಲಿ ಸರ್ಕಾರಿ, ಅರೆ ಸರ್ಕಾರಿ ಮತ್ತು ಖಾಸಗಿ ಕೆಲಸಗಳು ನಡೆಯುತ್ತಿದ್ದು ಯಾವುದೇ ಕಾರಣಕ್ಕೆ ಮರಳಿನ ಅಭಾವ ಆಗದಂತೆ ಜಿಲ್ಲಾಳಿತವು ಕ್ರಮ ಕೈಗೊಳ್ಳಲು ಒತ್ತಾಯಿಸಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.