ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗೆ ಹೊಡೆದ ಆರೋಪ; ಶಿಕ್ಷಕಿಯ ವಿರುದ್ಧ ತನಿಖೆಯ ಆಗ್ರಹ


ಕುಮಟಾ: ವಿದ್ಯಾರ್ಥಿಗೆ ಕ್ಷುಲ್ಲಕ ಕಾರಣಕ್ಕಾಗಿ ಶಿಕ್ಷಕಿಯೊಬ್ಬಳು ಕಾಲಿಗೆ ಬಾಸುಂಡೆ ಬರುವಂತೆ ಹಾಗು ಹಲ್ಲು ಮುರಿಯುವಂತೆ ಹೊಡೆದಿರುವ ಘಟನೆ ಇತ್ತೀಚಿಗೆ ಇಲ್ಲಿನ ಶಶಿಹಿತ್ತಲ್ ಐಡಿಯಲ್ ಸ್ಕೂಲ್‍ನಲ್ಲಿ ನಡೆದಿತ್ತು. ಈ ಸಂಬಂಧ ಪಾಲಕರು ಪೊಲೀಸ್ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಾಗೂ ಶಾಲೆಯ ಆಡಳಿತ ಮಂಡಳಿಗೆ ದೂರು ಸಲ್ಲಿಸಿದ್ದರು. ಆದರೆ ಸಂಬಂಧ ಪಟ್ಟವರು ಯಾವುದೇ ಕ್ರಮಕೈಗೊಳ್ಳಲಿಲ್ಲ. ಈ ಬಗ್ಗೆ ಶೀಘ್ರ ತನಿಖೆಯಾಗದಿದ್ದರೆ ಮುಂದಾಗುವ ಅನಾಹುತಕ್ಕೆ ನೀವೇ ಜವಾಬ್ದಾರಿಯಾಗಬೇಕಾಗುತ್ತದೆ ಎಂದು ಇಮಾಮ್ ಗನಿ ಎಚ್ಚರಿಸಿದರು.

ಬುಧವಾರ ಇಲ್ಲಿನ ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗೋಷ್ಠಿ ಹಮ್ಮಿಕೊಂಡು ಮಾತನಾಡಿದ ಅವರು, ಕಳೆದ ಬಾರಿ ಚಂದಾವರಾದಿಂದ ಬರುವ ಶಾಲಾ ವಾಹನ ಚಾಲಕ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ. ಈ ಬಗ್ಗೆ ಆಡಳಿತ ಮಂಡಳಿಯವರಿಗೆ ತಿಳಿಸಿದಾಗ ಅದರ ಬಗ್ಗೆ ನಮಗೆ ಯಾವುದೇ ಜವಾಬ್ದಾರಿಯಿಲ್ಲ ಎಂಬ ಉದ್ಧಟತನದ ಉತ್ತರ ನೀಡುತ್ತಾರೆ. ಆ ಚಾಲಕನನ್ನು ತೆಗೆದುಹಾಕಿ ಎಂದು ಹೇಳಿದರೂ ಇನ್ನುವರೆಗೆ ಅವನ ಮೇಲೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದರು. ಇನ್ನೂ ಸಂಸ್ಥೆಯ ಹಳೆಯ ವಾಹನದಲ್ಲಿ ಮಕ್ಕಳನ್ನು ಕರೆದುಕೊಂಡು ಬರುತ್ತಿದ್ದಾರೆ ಅದರ ಬಗ್ಗೆ ಆಡಳಿತ ಮಂಡಳಿಯವರಿಗೆ ತಿಳಿಸಿದ್ದೇವು, ಪೋಲಿಸ್ ಇಲಾಖೆಗೆ ಹಾಗೂ ಆರ್‍ಟಿಒಗೆ ಮಾಹಿತಿ ನೀಡಿದ್ದೇವು. ಆದರೆ ಇನ್ನೂ ಯಾವುದೇ ಕ್ರಮಕೈಗೊಂಡಿಲ್ಲ. ಈ ಬಗ್ಗೆ ಶೀಘ್ರ ತನಿಖೆ ನಡೆಯದಿದ್ದರೆ ಮುಂದಾಗುವ ಅನಾಹುತಕ್ಕೆ ಸಂಬಂಧಪಟ್ಟ ಇಲಾಖೆ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ನಂತರ ಅಜಗರ್ ಅಲಿ ಅಬ್ದುಲ್ ಮಾತನಾಡಿ, ನನ್ನ ಮಗನಿಗೆ ಹಲ್ಲು ಮುರಿಯುವಂತೆ ಶಿಕ್ಷಕಿ ಹೊಡೆದಿದ್ದಾಳೆ. ಈ ಬಗ್ಗೆ ಶಾಲಾ ಆಡಳಿತ ಮಂಡಳಿಯವರ ಗಮನಕ್ಕೆ ತಂದಿದ್ದೆ. ಆಡಳಿತ ಮಂಡಳಿಯವರು ಶನಿವಾರ ಶಾಲೆಗೆ ಬನ್ನಿ ಈ ವಿಷಯದ ಬಗ್ಗೆ ವಿಚಾರಣೆ ನಡೆಸೋಣ ಎಂದಿದ್ದರು. ನಾನು ಶನಿವಾರ ಶಾಲೆಗೆ ಬಂದರೂ ಕೂಡಾ ಆಡಳಿತ ಮಂಡಳಿಯವರು ಬಂದಿಲ್ಲ. ಅವರಿಗೆ ದೂರವಾಣಿ ಕರೆ ಮಾಡಿದರೆ, ನಾನು ಶಾಲೆಯಿಂದ ಮನೆಗೆ ಬಂದಿದ್ದೇನೆ ಈಗ ಮತ್ತೋಮ್ಮೆ ಶಾಲೆಗೆ ಬರಲಾಗುವುದಿಲ್ಲ ಎಂಬ ಉದ್ಧಟತನದ ಮಾತುಗಳನ್ನಾಡಿದರು. ಈವರೆಗೂ ಶಿಕ್ಷಕಿಯ ಮೇಲೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಆಡಳಿತ ಮಂಡಳಿಯವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ವೈ ಸಿಖಂದರ್, ಮಹಮದ್ ಅರ್ಖಾನ್ ಗನಿ, ಮುದರಸ್ ಗನಿ, ಇಮ್ರಾನ್ ಗನಿ, ಅಫ್ರೋಸ್ ಹುಲ್ಕೋಲ್, ಅಮ್ಜದ್‍ಖಾನ್, ಎಜಾ ಶೇಖ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮಕ್ಕಳ ಮೇಲೆ ಹಲ್ಲೆಯಾಗಿದೆ ಎಂದು ನಮಗೆ ಪಾಲಕರಿಂದ ದೂರು ಬಂದಿದೆ. ಈ ಬಗ್ಗೆ ಇಲಾಖೆಯ ಪರವಾಗಿ ಶಾಲೆಗೆ ಭೇಟಿ ನೀಡಿ, ವಿಚಾರಣೆ ನಡೆಸಿದ್ದೇನೆ. ಮುಖ್ಯ ಶಿಕ್ಷಕರು ನೀಡಿರುವ ಹೇಳಿಕೆಯನ್ನು ಮೇಲಾಧಿಕಾರಿಗೆ ಸಲ್ಲಿಸುತ್ತೇನೆ. ತದನಂತರಲ್ಲಿ ಮೇಲಾಧಿಕಾರಿಗಳು ಈ ಬಗ್ಗೆ ಸೂಕ್ತ ಬಕ್ರಮ ಕೈಗೊಳ್ಳುತ್ತಾರೆ.

ಎ.ಜಿ. ಮುಲ್ಲಾ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕುಮಟಾ

Categories: ಜಿಲ್ಲಾ ಸುದ್ದಿ

Leave A Reply

Your email address will not be published.