ಕೈಗಾ ನೂತನ ಯೋಜನೆಯ ಮೆಕಾನ್ ವರದಿ ರದ್ದುಗೊಳಿಸಬೇಕು; ಸ್ವರ್ಣವಲ್ಲೀ ಶ್ರೀ

ಶಿರಸಿ: ಕೈಗಾ 5-6ನೇ ಘಟಕ ಯೋಜನೆಯ ಮೆಕಾನ್ ಪರಿಸರ ವರದಿಯನ್ನು ರದ್ದುಗೊಳಿಸಬೇಕು. ಸರ್ಕಾರ ತನ್ನ ಯೋಜನೆಗೆ ಸರ್ಕಾರದ್ದೇ ಪರಿಸರ ವರದಿ ಯೋಜನೆ ಎಂದರೆ ಅದು ಏಕಪಕ್ಷೀಯ. ಈ ಭಾಗದ ಜನತೆಗೆ ಕ್ಯಾನ್ಸರ್ ಬಂದಿಲ್ಲ ಎಂದು ವರದಿ ನೀಡಬಹುದು. ಸರ್ಕಾರ ನಡೆಸುವ ಅಹವಾಲು ಸಭೆಯಲ್ಲಿ ಪಾಲ್ಗೊಂಡು ವೈಜ್ಞಾನಿಕವಾಗಿ ವಿರೋಧಿಸಬೇಕು ಎಂದು ಶ್ರೀ ಗಂಗಾಧರೇಂದ್ರ ಮಹಾ ಸ್ವಾಮೀಜಿ ಕರೆ ನೀಡಿದರು.

ಅವರು ಸೋಂದಾ ಸ್ವರ್ಣವಲ್ಲೀ ಸುಧರ್ಮಾ ಸಭಾಂಗಣದಲ್ಲಿ ಗುರುವಾರ ನಡೆದ ಪರಿಸರ ಸಂಘಟನೆಗಳ ಸಾನಿಧ್ಯ ವಹಿಸಿ ಈ ಭಾಗದ ತಂಬಾಕು ತಿನ್ನದ ಯುವ ವಯಸ್ಸಿನ ಹಳ್ಳಿಗರು ವ್ಯಾಪಕವಾಗಿ ಈ ರೋಗದಿಂದ ಸತ್ತಿದ್ದಾರೆ. ಯಲ್ಲಾಪುರ ಮುಕ್ತಚರ್ಚೆಯಲ್ಲಿ ಕೈಗಾದವರ ತಂತ್ರಗಾರಿಕೆ ನೋಡಿದ್ದೇವೆ. ಜಿಲ್ಲೆಯ ಜನತೆ ಆಲೋಚನೆ ಮಾಡಬೇಕೇ ಹೊರತೂ ಆಮಿಷಕ್ಕೆ ಒಳಗಾಗಬಾರದು. ಡಾ|| ಶಿವರಾಮ ಕಾರಂತ, ಪೇಜಾವರ ಸ್ವಾಮೀಜಿ ಅವರೆಲ್ಲ ಕೈಗಾದ ಆರಂಭದಲ್ಲೇ ವಿರೋಧ ಮಾಡಿದ್ದರು. ಕೈಗಾ ಅಣುಸ್ಥಾವರ 5-6 ನೇ ಘಟಕ ಸ್ಥಾಪನೆಗೆ ನಮ್ಮ ಒಪ್ಪಿಗೆ ಖಂಡಿತಾ ಇಲ್ಲ. ಜನಪ್ರತಿನಿಧಿಗಳೂ ಇದಕ್ಕೆ ಬೆಂಬಲ ನೀಡಬೇಕು ಎಂದು ನುಡಿದರು.

‘ಕೈಗಾ ಕಿಸೆಯಲ್ಲಿನ ಬೆಂಕಿ ಕೆಂಡ’ ಮನುಷ್ಯನ ಮೇಲೆ ಮಾಡುವ ಅಣುವಿಕಿರಣ ದುಷ್ಪರಿಣಾಮ, ಅಪಾರವಾಗಿದ್ದು ಎಂದು ವಿಜ್ಞಾನಿಗಳು ಎಚ್ಚರಿಸುತ್ತಲೇ ಇದ್ದಾರೆ. ಜೊತೆಗೆ ಕೃಷಿ, ತೋಟಗಾರಿಕೆ, ಅರಣ್ಯ-ಜಲ ವನ್ಯ ಜೀವಿ, ಜಾನುವಾರು ಮೇಲೆ ಸಹಾ ಅಷ್ಟೇ ಭಾರೀ ಮಾರಕ ಪರಿಣಾಮ ಬೀರುತ್ತವೆ, ಅದಕ್ಕಾಗೇ ಕೈಗಾವರ ಜೊತೆ 2 ಬಾರಿ ಮುಕ್ತ ಸಂವಾದ ನಡೆಸಿದ್ದೇವೆ. ಕೈಗಾ ಕಣಿವೆಗೆ, ಸ್ಥಳ ಭೇಟಿ ಮಾಡಿದ್ದೇವೆ. ವಜ್ರಳ್ಳಿಯಲ್ಲಿ 2012 ರಲ್ಲಿ ಸಮಾವೇಶ ನಡೆಸಿದ್ದೇವೆ. ಆರೋಗ್ಯ ಸಮೀಕ್ಷೆಗೆ ಆಗ್ರಹ ಮಾಡಿದ್ದೇವೆ. 2017 ರ ಮೇ ನಲ್ಲಿ ಯಲ್ಲಾಪುರದಲ್ಲಿ ಜಿಲ್ಲೆಯ ಜನತೆ, ತಜ್ಞರು, ಜನ ಪ್ರತಿನಿಧಿಗಳ ಜೊತೆ ಬೃಹತ್ ಸಮಾವೇಶ ನಡೆಸಿದ್ದೇವೆ. ಕೈಗಾ ನೂತನ ಘಟಕ ಬೇಡವೇ ಬೇಡ ಎಂದು ಜಿಲ್ಲೆಯ ಜನತೆ ಒಕ್ಕೊರಲಿನಿಂದ ಆಗ್ರಹ ಮಾಡಿದೆ. ಪ್ರಧಾನ ಮಂತ್ರಿಗಳಿಗೆ 2017 ರ ಜುಲೈ ತಿಂಗಳಲ್ಲೆ ವಿವರ ಪತ್ರ ಬರೆದು ಕೈಗಾ 5-6 ನೇ ಘಟಕ ಸ್ಥಾಪನೆ ಬೇಡ ಎಂದು ಒತ್ತಾಯ ಮಾಡಿದ್ದೇವೆ. ಇದೀಗ ಕೈಗಾ ಬಗ್ಗೆ ಸರ್ಕಾರ ಡಿ. 15 ಕರೆದ ಅಹವಾಲು ಸಭೆ ಹೆಸರಿಗೆ ಮಾತ್ರ. ಪರಿಸರ ವರದಿ ಪ್ರಕಟಿಸಿದ್ದಾರೆ.

ಕೈಗಾ ಪರಿಸರ ವರದಿ ಸುಳ್ಳಿನಿಂದ, ತಪ್ಪು ಮಾಹಿತಿಗಳಿಂದ ಕೂಡಿದೆ ಎಂದು ತಜ್ಞರು ಹೇಳಿದ್ದಾರೆ. ಈ ವರದಿ ರದ್ದು ಮಾಡಬೇಕು ಎಂದು ಹೇಳಿದ್ದಾರೆ. 2017 ರಲ್ಲೇ ನಮ್ಮ ಜಿಲ್ಲೆಯ ಪಂಚಾಯತ, ಜಿಲ್ಲಾಪಂಚಾಯತಗಳು, ಕೈಗಾ 5-6ನೇ ಘಟಕ ಸ್ಥಾಪನೆ ಬೇಡ ಎಂದು ನಿರ್ಣಯ ಕೈಗೊಂಡಿತ್ತು, ಸರ್ಕಾರದ ಡಿ. 15 ರಂದು ಕೈಗಾದಲ್ಲಿ ನಡೆಸುವ ಅಹವಾಲು ಸಭೆಗೆ ಜಿಲ್ಲೆಯ ಜನತೆ, ಸಂಘ-ಸಂಸ್ಥೆಗಳು ಹಾಜರಾಗಿ ತಮ್ಮ ಲಿಖಿತ ಅಭಿಪ್ರಾಯ ನೀಡಬೇಕು. ಕೈಗಾ 5-6 ನೇ ಘಟಕ ನಿರ್ಮಾಣ ಬೇಡ ಎಂದು ಏಕ/ದ್ವನಿಯಿಂದ ತಜ್ಞರು, ಜನ ಪ್ರತಿನಿಧಿಗಳು, ಸಂಸ್ಥೆಗಳು, ರೈತರು, ಮಹಿಳೆಯರು ಪ್ರಜ್ಞಾವಂತ ನಾಗರಿಕರು ಒತ್ತಾಯ ಮಾಡಬೇಕು. ಕೈಗಾ ಸುತ್ತಲಿನ ಹಳ್ಳಿಗಳ ಜನರು ಇತ್ತೀಚೆಗೆ ಕೈಗಾದಲ್ಲಿ ಬೃಹತ್ ಪಾದಯಾತ್ರೆ ಸಮಾವೇಶ, ನಡೆಸುವ ಕುರಿತು ಜಿಲ್ಲಾಡಳಿತಕ್ಕೆ ಮನವಿ ನೀಡಿದ್ದಾರೆ. ಈ ನಿರ್ಧಾರವನ್ನು ಶ್ಲಾಘಿಸುತ್ತೇವೆ. ವಿಶೇಷವಾಗಿ ಯಲ್ಲಾಪುರ, ಕಾರವಾರ, ಅಂಕೋಲಾ, ಜೋಯಿಡಾ, ಶಿರಸಿಯ ನಾಗರಿಕರು ಕೈಗಾದ ಡಿ. 15ರ ಅಹವಾಲು ಸಭೆಯಲ್ಲಿ ಪಾಲ್ಗೊಳ್ಳುವದು ಅಪೇಕ್ಷಣೀಯ. ಎಂದು ಶ್ರೀ ಸ್ವರ್ಣವಲ್ಲೀ ಸ್ವಾಮೀಜಿ ಕರೆ ನೀಡಿದರು.

ಮುಖ್ಯ ಅತಿಥಿ ಇಂಧನ ತಜ್ಞ ಡಾ|| ಶಂಕರ ಶರ್ಮಾ ಸೂಕ್ಷ್ಮ ಪರಿಸರ ಪ್ರದೇಶದ ವ್ಯಾಪ್ತಿಯಲ್ಲಿ ಅಣುಸ್ಥಾವರ ಹೇಗೆ ನಿರ್ಮಿಸುತ್ತೀರಿ ಎಂದು ಸರ್ಕಾರವನ್ನು ಪ್ರಶ್ನಿಸಿದರು. ಅಣು ಅಪಘಾತವಾದರೆ ದುರ್ಗಮ ಕಾಡಿನ ಪ್ರದೇಶದಲ್ಲಿ ಜನರ ರಕ್ಷಣೆ ಹೇಗೆ ಸಾಧ್ಯ” ಎಂದರು. ಪಶ್ಚಿಮ ಬಂಗಾಲದಿಂದ ಬಂದ ಪರಿಸರ ಕಾಯಿದೆ ತಜ್ಞ ದೇಬಾಯ್ ಗುಪ್ತಾ ಸಾರ್ವಜನಿಕ ಅಹವಾಲು ಸಭೆಯಲ್ಲಿ ಎಲ್ಲರಿಗೆ ಮಾತನಾಡಲು ಸಾಕಷ್ಟು ಸಮಯ ನೀಡುವದು ಕಡ್ಡಾಯ. ಪರಿಸರ ಕಾಯಿದೆ ಪಾಲಿಸಲೇ ಬೇಕು ಎಂದರು.

ಪರಿಸರ ಕಾನೂನು ಅಧ್ಯಯನ ಕೇಂದ್ರದ ಡಾ| ಮಹಾಬಲೇಶ್ವರ್ ಇ.ಐ.ಎ. ಮತ್ತು ಅಹವಾಲು ಸಭೆ ಕುರಿತ ಕಾಯಿದೆ ವಿಷಯ ತಿಳಿಸಿದರು. ಕೈಗಾ ಮಲ್ಲಾಪುರದಿಂದ ಬಂದ ಗುರುದತ್ತ ಫಾಯದೆ, ಮಲ್ಲಾಪುರ ಹಾಗೂ ಕದ್ರಾ ಗ್ರಾಮ ಪಂಚಾಯತ ಕೈಗಾ 5-6 ಘಟಕ ವಿರೋಧಿಸಿ ನಿರ್ಣಯ ಕೈಗೊಂಡಿವೆ” ಎಂದು ತಿಳಿಸಿದರು. ಆರಂಭದಲ್ಲಿ ಪರಿಸರ ಹೋರಾಟಗಾರ ಅನಂತ ಹೆಗಡೆ ಅಶೀಸರ “2017 ರ ಯಲ್ಲಾಪುರ ಸಮಾವೇಶದಿಂದ ಈ ವರೆಗಿನ ಬೆಳವಣಿಗೆ ತಿಳಿಸಿದರು.

ವನವಾಸಿ ಮುಖಂಡ ಶಾಂತಾರಾಂ ಸಿದ್ದಿ ನಿರ್ಣಯ ಮಂಡಿಸಿದರು. ಉಮೇಶ ಭಾಗ್ವತ್ ಶಿವಾನಂದ ಧೀಕ್ಷಿತ, ಶೈಲಜಾ ಗೊರ್ನಮನೆ, ಈಶಣ್ಣ ನೀರ್ನಳ್ಳಿ, ಸಾಗರದ ವೆಂಕಟೇಶ, ಕಳಸದ ಗಜೇಂದ್ರ, ದೊಂಡು ಪಾಟೀಲ, ಟಿ.ಆರ್. ಹೆಗಡೆ, ನಾರಾಯಣ ಗಡಿಕೈ, ಮುಂತಾದವರು ಮಾತನಾಡಿದರು. ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ, ಉ.ಕ. ಜಿಲ್ಲಾ ಪರಿಸರ ಸಂರಕ್ಷಣಾ ಸಮಿತಿ ಪರಿಸರ ಸಂಘಟನೆಗಳ ವಿಶೇಷ ಸಭೆಯನ್ನು ಏರ್ಪಡಿಸಿದ್ದವು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.