ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಸಂಪುಟ ಸಭೆಯ ಮಂಜೂರಿ: ಮಾಜಿ ಶಾಸಕ ಸತೀಶ ಸೈಲ್

ಕಾರವಾರ: ತಾಲೂಕಿನ ಚಿತ್ತಾಕುಲಾ ಗ್ರಾಪಂ ವ್ಯಾಪ್ತಿಯ ಸಾವರಪೈ ಪ್ರದೇಶದ 11 ಎಕರೆ ಸರಕಾರಿ ಜಮೀನಿನಲ್ಲಿ ಕರ್ನಾಟಕ ರಾಜ್ಯ ಕ್ರಿಕೇಟ್ ಅಕಾಡೆಮಿ ನಿರ್ಮಿಸಲಿರುವ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಬುಧವಾರ ನಡೆದ ರಾಜ್ಯ ಸರಕಾರದ ಸಂಪುಟ ಸಭೆಯಲ್ಲಿ ಅಂತಿಮ ಮಂಜೂರಾತಿ ನೀಡಲಾಗಿದೆ ಎಂದು ಮಾಜಿ ಶಾಸಕ ಸತೀಶ್ ಸೈಲ್ ತಿಳಿಸಿದ್ದಾರೆ.

ತನ್ನ ಆಡಳಿತದ ಅವಧಿಯಲ್ಲಿ ಒಂದು ವರ್ಷದ ಹಿಂದೆ ಕಾರವಾರಕ್ಕೆ ಸುಸಜ್ಜಿತ ಅಂತರಾಷ್ಟ್ರೀಯ ಕ್ರಿಕೇಟ್ ಕ್ರೀಡಾಂಗಣದ ಅವಶ್ಯಕತೆ ಇದೆ ಎಂದು ತಿಳಿದು ರಾಜ್ಯ ಕ್ರಿಕೇಟ್ ಸಂಸ್ಥೆಯೊಡನೆ ಸಮಾಲೋಚಿಸಿ ಅವರ ಮನವೊಲಿಸಲಾಗಿತ್ತು. ಜೊತೆಗೆ ಜಿಲ್ಲಾಧಿಕಾರಿಗಳೊಡನೆ ಸಮಾಲೋಚಿಸಿ ಚಿತ್ತಾಕುಲಾ ಗ್ರಾಮದ ಸಾವರಪೈ ಪ್ರದೇಶದಲ್ಲಿ ಲಭ್ಯವಿದ್ದ ಸರಕಾರಿ ಜಾಗದಲ್ಲಿ ಅಂತರಾಷ್ಟ್ರೀಯ ಕ್ರಿಕೇಟ್ ಕ್ರೀಡಾಂಗಣವನ್ನು ನಿರ್ಮಿಸಲು ಜಿಲ್ಲಾಡಳಿತವು ಒಪ್ಪಿಗೆ ನೀಡುವಂತೆ ಶ್ರಮವಹಿಸಲಾಗಿತ್ತು ಎಂದು ಸತೀಶ ಸೈಲ್ ತಿಳಿಸಿದ್ದಾರೆ.

ರಾಜ್ಯ ಕ್ರಿಕೇಟ್ ಅಕೆಡೆಮಿ ಸಂಸ್ಥೆ ವತಿಯಿಂದ ಉನ್ನತ ಪದಾಧಿಕಾರಿಗಳು ಆಗಮಿಸಿ ಸರಕಾರಿ ಜಾಗೆಯನ್ನು ಪರಿಶೀಲಿಸಿ ಅವಶ್ಯಕವಾದ 11 ಎಕರೆ ಜಮೀನನ್ನು ಗುರುತಿಸಿಕೊಂಡು ಜಿಲ್ಲಾಡಳಿತಕ್ಕೆ ತಿಳಿಸಿದ್ದರು. ಆ ಪ್ರಕಾರ ಮುಂದಿನ ಕಾರ್ಯಸೂಚಿಯ ಪ್ರಕಾರ ರಾಜ್ಯ ಕಂದಾಯ ಇಲಾಖೆಯಿಂದ ಈ ಸಾವರಪೈ ಪ್ರದೇಶದ 11 ಎಕರೆ ಜಾಗವನ್ನು ರಾಜ್ಯ ಕ್ರಿಕೆಟ್ ಸಂಸ್ಥೆಗೆ ವಾರ್ಷಿಕ ಬಾಡಿಗೆಯ ಮೇಲೆ ಲಾಗಣಿ ನೀಡುವಲ್ಲಿ ತಾನು ಪ್ರಮುಖ ಪಾತ್ರ ವಹಿಸಿದ್ದೆ. ಜಿಲ್ಲಾಡಳಿತ ಈ 11 ಎಕರೆ ಜಾಗವನ್ನು ಕೆ.ಎಸ್.ಸಿ.ಎ. ಗೆ ಲಾಗಣಿ ನೀಡುವ ಬಗ್ಗೆ ಸೂಕ್ತ ಕರಾರು ಪತ್ರವನ್ನು ತಯಾರಿಸಿ ಅನುಮೋದನೆಗಾಗಿ ರಾಜ್ಯ ಸರಕಾರಕ್ಕೆ ಕಳುಹಿಸಿತ್ತು. ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಸಾಧ್ಯತೆ ಬಾಧ್ಯತೆಗಳನ್ನು ಗಣನೆಗೆ ತೆಗೆದುಕೊಂಡು ಜಿಲ್ಲಾಡಳಿತ ಕಳುಹಿಸಿರುವ ಪ್ರಸ್ತಾವನೆಗೆ ಅಂತಿಮ ಅನುಮೋದನೆಯನ್ನು ನೀಡಿ ಕಾರವಾರದ ಅಂತರಾಷ್ಟ್ರೀಯ ಕ್ರಿಕೇಟ್ ಕ್ರೀಡಾಂಗಣ ನಿರ್ಮಿಸಲು ಹಸಿರು ನಿಶಾನೆ ದೊರಕಿರುವುದು ನನ್ನ ಹಾಗೂ ಕ್ಷೇತ್ರದ ಯುವಜನರ ಕನಸು ನನಸಾಗಿದೆ ಎಂದು ಮಾಜಿ ಶಾಸಕ ಸತೀಶ ಸೈಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.