ಹಬ್ಬದ ಸಂಭ್ರಮಕ್ಕೆ ಜಹಾಂಗೀರ್ ಸಿಹಿ ಮಾಡಿ ಸಂಭ್ರಮಿಸಿ

ಅಡುಗೆ ಮನೆ: ಹಬ್ಬದ ಸಂಭ್ರಮಕ್ಕೆ ಏನಾದರೂ ಹೊಸ ರುಚಿ ಮಾಡಿ ನೋಡಬೇಕೆನಿಸಿರುತ್ತೆ. ಈ ಬಾರಿಯ ದೀಪಾವಳಿ ಖುಷಿ ಹೆಚ್ಚಿಸಲು ಜಹಾಂಗೀರ್ ಮಾಡಿ ಸಂಭ್ರಮಿಸಿ. ಈ ತಿಂಡಿಗೆ ಜಾಂಗ್ರಿ ಎಂದೂ ಕರೆಯುತ್ತಾರೆ. ತಮಿಳುನಾಡಿನಲ್ಲಿ ಈ ತಿಂಡಿ ಹೆಚ್ಚು ಜನಪ್ರಿಯವಾಗಿದ್ದು ಈಗ ಭಾರತದೆಲ್ಲೆಡೆ ಜನಪ್ರಿಯತೆ ಗಳಿಸುತ್ತಿದೆ.

ಅಗತ್ಯವಿರುವ ಸಾಮಾಗ್ರಿಗಳು: ಉದ್ದಿನ ಬೇಳೆ – 2 ಕಪ್, ಜೋಳದ ಹಿಟ್ಟು (cornflour) – 1/2 ಕಪ್, ಸಕ್ಕರೆ – 3 ಕಪ್, ಕೆಂಪು ಬಣ್ಣ- 1 ರಿಂದ 2 ತೊಟ್ಟು, ಅಕ್ಕಿ ಹಿಟ್ಟು- 1/2 ಕಪ್, ಏಲಕ್ಕಿ – 1 ರಿಂದ 2, ಪೈಪಿಂಗ್ ಬ್ಯಾಗ್- (ಅಥವಾ ಮೂಲೆಯನ್ನು ಚಿಕ್ಕದಾಗಿ ಕತ್ತರಿಸಿರುವ ಪ್ಲಾಸ್ಟಿಕ್ ಪೊಟ್ಟಣ) , ಎಣ್ಣೆ- ಹುರಿಯಲು ಅಗತ್ಯವಿದ್ದಷ್ಟು.
ವಿಧಾನ: ಉದ್ದಿನ ಬೇಳೆಯನ್ನು ಚೆನ್ನಾಗಿ ತೊಳೆದು ನಾಲ್ಕರಿಂದ ಐದು ಘಂಟೆಗಳ ಕಾಲ ನೆನೆಸಿಡಿ. ಬಳಿಕ ನೀರನ್ನು ಸೋಸಿ ಮಿಕ್ಸಿಯ ಚಿಕ್ಕ ಜಾರ್ ನಲ್ಲಿ ನುಣ್ಣಗಾಗುವಂತೆ ರುಬ್ಬಿ, ಈ ಸಮಯದಲ್ಲಿ ಕೇವಲ ಅರ್ಧ ಕಪ್ ನೀರು ಮಾತ್ರ ಸೇರಿಸಿ. ಹೆಚ್ಚು ನೀರು ಸೇರಿಸಿದರೆ ಶ್ಯಾವಿಗೆ ಉದುರುದುರಿ ಹೋಗುತ್ತದೆ.  ಒಂದು ಪಾತ್ರೆಯಲ್ಲಿ ಕೊಂಚ ನೀರು ಬಿಸಿಮಾಡಿ ಸಕ್ಕರೆ ಸೇರಿಸಿ. ಎಷ್ಟು ನೀರು ಅಂದರೆ ಸಕ್ಕರೆ ಮುಳುಗುವಷ್ಟು ಮಾತ್ರ. ಇದಕ್ಕೆ ಏಲಕ್ಕಿ ಪುಡಿ ಹಾಕಿ ಕಲಕಿ. ಸಕ್ಕರೆ ಕರಗಿ ಪಾಕದಂತಾಗಲಿ. ಬಳಿಕ ಈ ಪಾತ್ರೆಯನ್ನು ಪಕ್ಕದಲ್ಲಿಡಿ. ಒಂದು ಪಾತ್ರೆಯಲ್ಲಿ ಜೋಳದ ಹಿಟ್ಟು ಅಕ್ಕಿ ಹಿಟ್ಟು ಮತ್ತು ಕೆಂಪು ಬಣ್ಣ ಸೇರಿಸಿ ಇದಕ್ಕೆ ಕಡೆದ ಉದ್ದಿನ ಬೇಳೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಪೈಪಿಂಗ್ ಬ್ಯಾಗ್ ಗೆ ಹಾಕಿ ಎಣ್ಣೆಯಲ್ಲಿ ಹಾಕಲು ಸಿದ್ಧವಾಗಿರಿ. ಈಗ ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿಮಾಡಿ. ಎಣ್ಣೆಯಿಂದ ಕೊಂಚ ಹೊಗೆಬರಲು ಪ್ರಾರಂಭಿಸುತ್ತಿದ್ದಂತೆಯೇ ಉರಿಯನ್ನು ತಗ್ಗಿಸಿ. ಈಗ ಪೈಪಿಂಗ್ ಬ್ಯಾಗ್ ನಿಂದ ಕೊಂಚವೇ ಒತ್ತಡ ಹಾಕಿ ಹಿಟ್ಟು ಎಣ್ಣೆಯಲ್ಲಿ ಬೀಳುವಂತೆ ಮಾಡಿ, ಬೀಳುವಾಗ ಕಲಾತ್ಮಕವಾಗಿ ವೃತ್ತಾಕಾರದಲ್ಲಿ ತಿರುಗಿಸುತ್ತಾ ಜಹಾಂಗೀರ್ ನ ರೂಪ ನೀಡಿ. ನಡು ನಡುವೆ ತಿರುವುತ್ತಾ ಹುರಿಯಿರಿ. ಎರಡೂ ಬದಿ ಹುರಿದಿದೆ ಎನ್ನಿಸಿದ ಬಳಿಕ ಇದನ್ನು ಹೊರತೆಗೆದು ಎಣ್ಣೆ ಸೋರಿಹೋಗುವಂತೆ ಮಾಡಿ. ನಂತರ ಸಕ್ಕರೆ ಪಾಕದಲ್ಲಿ ಇದನ್ನು ಅದ್ದಿ ಹೊರತೆಗೆದು ಒಂದು ತಟ್ಟೆಯಲ್ಲಿ ಹರಡಿ. ಹಬ್ಬದ ಸಂದರ್ಭದಲ್ಲಿ ಈ ಸಿಹಿ ಪದಾರ್ಥವನ್ನು ಮಾಡಿ ಹಬ್ಬದ ಸಂಭ್ರಮ ಆಚರಿಸಿ.

Categories: ಅಡುಗೆ ಮನೆ

Leave A Reply

Your email address will not be published.