ದೇವಳಮಕ್ಕಿ ಪಿಡಿಓ ಬದಲಾವಣೆಗೆ ಆಗ್ರಹಿಸಿ ಗ್ರಾಮಸ್ಥರ ಪ್ರತಿಭನೆ

ಕಾರವಾರ: ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಓ) ಬದಲಾವಣೆಗೆ ಆಗ್ರಹಿಸಿ ಮತ್ತು ಮನೆಗಳಿಗೆ ಹೆಚ್ಚುವರಿ ತೆರಿಗೆ ವಿಧಿಸುತ್ತಿರುವುದನ್ನು ವಿರೋಧಿಸಿ ನೂರಾರು ಗ್ರಾಮಸ್ಥರು ಪಂಚಾಯತ್ ಎದುರು ಬೃಹತ್ ಪ್ರತಿಭಟನೆ ನಡೆಸಿದ ಘಟನೆ ಕಾರವಾರ ತಾಲೂಕಿನ ದೇವಳಮಕ್ಕಿಯಲ್ಲಿ ನಡೆಯಿತು.
ದೇವಳಮಕ್ಕಿ ಪಂಚಾಯತ್ ಎದುರು ಜಮಾವಣೆಗೊಂಡಿದ್ದ ನೂರಾರು ಗ್ರಾಮಸ್ಥರು ಪಿಡಿಓ ಮತ್ತು ಮನೆ ಕರ ಹೆಚ್ಚು ಮಾಡಿರುವುದರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಪಂ ವ್ಯಾಪ್ತಿಯಲ್ಲಿ ಸಾಕಷ್ಟು ಮನೆಗಳಿವೆ. ಕುಡಿಯುವ ನೀರು, ರಸ್ತೆ, ವಿದ್ಯುತ್ ಸೇರಿದಂತೆ ಸಾಕಷ್ಟು ಸಮಸ್ಯೆಗಳಿದೆ. ಆದರೆ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಸರಿಯಾಗಿ ಸ್ಪಂದಿಸುತ್ತಿಲ್ಲ. ದೂರಗಳನ್ನು ನೀಡಿದರೆ ಅವುಗಳ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ದೂರಿದರು. ಇನ್ನು ಈ ಬಗ್ಗೆ ಮಾತನಾಡಿದ ಉಲ್ಲಾಸ್ ನಾಯ್ಕ, ಗ್ರಾಮ ಪಂಚಾಯಿತಿ ಪಿಡಿಓ ಅರುಣಾ ನಾಯ್ಕ ತಮ್ಮ ಇಷ್ಟಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿದ್ದಾರೆ.
ಗ್ರಾಮಸ್ಥರು ಸಮಸ್ಯೆಗಳ ಬಗ್ಗೆ ದೂರು ನೀಡಿದಲ್ಲಿ ಸ್ಪಂದಿಸುತ್ತಿಲ್ಲ. ಆದರೆ ತಮಗೆ ಹತ್ತಿರ ಇರುವ ಇಲ್ಲವೇ ಜನಪ್ರತಿನಿಧಿಗಳ ಕಡೆಯವರು ಹೇಳಿದರೆ ಬೇಗ ಕೆಲಸ ಮಾಡುತ್ತಾರೆ. ಹೀಗೆ ತಾರತಮ್ಯ ಮಾಡುವ ಅಧಿಕಾರಿಗಳು ನಮಗೆ ಬೇಡ ಕೂಡಲೇ ಅವರನ್ನು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು. ಹಿಂದಿನ ದಿನಗಳಿಗೆ ಹೊಲಿಸಿದರೆ ಈ ಭಾರಿ ಮನೆ ತೆರಿಗೆಯನ್ನು ಶೇ. 200 ರಷ್ಟು ಹೆಚ್ಚಿಗೆ ಮಾಡಲಾಗಿದೆ. ಮೊದಲು 30 ರೂ ಇದ್ದ ತೆರಿಗೆಯನ್ನು 450 ರೂ ಗೆ ಏರಿಸಲಾಗಿದೆ. ಅಲ್ಲದೆ ಲೈಬ್ರರಿ, ಬೀದಿ ದೀಪ ಹೀಗೆ ಅನೇಕ ರೀತಿಯ ತೆರಿಗೆ ವಿಧಿಸಿದ್ದಾರೆ. ಆದರೆ ಇದಾವ ಸೌಲಭ್ಯವು ನಮಗೆ ಸಿಗುತ್ತಿಲ್ಲ. ಹೀಗಿದ್ದಾಗ ನಾವು ಯಾಕೇ ಅಷ್ಟೊಂದು ಹಣ ಕಟ್ಟಬೇಕು. ನಮ್ಮಿಂದ ಆ ಪ್ರಮಾಣದಲ್ಲಿ ಹಣ ಕಟ್ಟಲು ಸಾಧ್ಯವಿಲ್ಲ. ಕೂಡಲೇ ತೆರಿಗೆಯನ್ನು ಇಳಿಸುವಂತೆ ಆಗ್ರಹಿಸಿದರು.
ಬಳಿಕ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ಕಾರವಾರ ತಾಪಂ ಸಿಇಓ ಪ್ರತಿಭಟನಾಕಾರರ ಮನವಿ ಆಲಿಸಿ ಪ್ರತಿಭಟನೆಯನ್ನು ಕೈ ಬಿಡುವಂತೆ ತಿಳಿಸಿದರು. ಪಿಡಿಓ ವರ್ಗಾವಣೆ ಬಗ್ಗೆ ಗ್ರಾಮಸ್ಥರ ಮನವಿಯನ್ನು ಮೇಲಾಧಿಕಾರಿಗಳಿಗೆ ಸಲ್ಲಿಸಲಾಗುವುದು ಎಂದು ಹೇಳಿದರು. ಬಳಿಕ ಗ್ರಾಮಸ್ಥರು ಪ್ರತಿಭಟನೆಯನ್ನು ಕೈ ಬಿಟ್ಟಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.