ದೀಪಾವಳಿ ಹಬ್ಬಕ್ಕೆ ಸ್ಪೆಷಲ್ ಕೊಬ್ಬರಿ ಹೋಳಿಗೆ


ಅಡುಗೆ ಮನೆ: ಹಬ್ಬ ಬಂತೆಂದರೆ ಏನಾದರೂ ಒಂದು ಸ್ಪೆಷಲ್ ತಿನಿಸು ಇರಲೇ ಬೇಕು. ಇಲ್ಲವಾದರೆ ಆ ಹಬ್ಬಕ್ಕೊಂದು ಮೆರಗು ಇರದು. ಅದರಲ್ಲೂ ದೀಪಾವಳಿ ಹಬ್ಬಕ್ಕಂತೂ ಹೋಳಿಗೆ ಇಲ್ಲದೇ ಹೋದರೆ ಹಬ್ಬದ ಸಂಭ್ರಮವೇ ಇರುವುದಿಲ್ಲ. ಇಂತಹ ಶುಭ ಸಂದರ್ಭಗಳಲ್ಲಿ, ವಿಶೇಷವಾದ ಸಿಹಿತಿನಿಸನ್ನು ಮಾಡಿ ದೇವರಿಗೆ ಅರ್ಪಿಸಿ ಬಂಧುಬಳಗದವರಿಗೂ ಪ್ರಸಾದದ ರೂಪವಾಗಿ ಕೊಡುತ್ತಾರೆ. ಹಾಗಾಗಿ ನಾವು ಮಾಡುವ ಸಿಹಿ ತಿನಿಸು ಕೂಡ ವಿಶೇಷವಾಗಿರಬೇಕೆಂದು, ತುಪ್ಪದ ಕೊಬ್ಬರಿ ಹೋಳಿಗೆಯ ರೆಸಿಪಿಯ ಬಗ್ಗೆ ತಿಳಿಯೋಣ.
ಬೇಕಾಗುವ ಸಾಮಗ್ರಿಗಳು: ಮೈದಾ ಹಿಟ್ಟು : 2 ಕಪ್, ಚಿರೋಟಿ ರವೆ : 1 ಕಪ್, ಒಣಕೊಬ್ಬರಿ : 1 ಬಟ್ಟಲು, ಸಕ್ಕರೆ : 1 ಬಟ್ಟಲು, ಎಲಕ್ಕಿ ಪುಡಿ : ಸ್ವಲ್ಪ, ತುಪ್ಪ : 1 ಬಟ್ಟಲು, ಹಾಲು : 1 ಬಟ್ಟಲು.
ಮಾಡುವ ವಿಧಾನ: ಮೊದಲಿಗೆ ಒಂದು ಬೌಲ್ ನಲ್ಲಿ ಮೈದಾ ಹಿಟ್ಟು ಮತ್ತು ಚಿರೋಟಿ ರವೆಯನ್ನು ಹಾಕಿ ಮಿಕ್ಸ್ ಮಾಡಬೇಕು. ನಂತರ 3 ಚಮಚ ತುಪ್ಪವನ್ನು ಹಾಕಿ ಕೈಯಾಡಿಸಬೇಕು. ನಂತರ ನೀರನ್ನು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಿಸಿಕೊಳ್ಳಬೇಕು. ಕಣಕವನ್ನು ಮುಚ್ಚಿಟ್ಟು ಅರ್ಧ ಗಂಟೆಯ ಕಾಲ ನೆನೆಯಲು ಬಿಡಬೇಕು.
ಹೂರಣ ಮಾಡುವ ವಿಧಾನ: ಹೆರದಿಟ್ಟುಕೊಂಡ ಒಣಕೊಬ್ಬರಿಯನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ರುಬ್ಬಿಕೊಂಡು ಅದಕ್ಕೆ ಮೊದಲೇ ಪುಡಿ ಮಾಡಿಟ್ಟುಕೊಂಡ ಬೂರ ಸಕ್ಕರೆಯನ್ನು ಹಾಕಿ ಮಿಶ್ರಣ ಮಾಡಿಕೊಳ್ಳಬೇಕು. ಅದಕ್ಕೆ ಸ್ವಲ್ಪ ಏಲಕ್ಕಿ ಪುಡಿಯನ್ನು ಸೇರಿಸಬೇಕು. ಈ ಮಿಶ್ರಣಕ್ಕೆ ಸ್ವಲ್ಪ ಸ್ವಲ್ಪವೇ ಹಾಲನ್ನು ಸೇರಿಸಿ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿಕೊಳ್ಳಬೇಕು.
ಅರ್ಧ ಗಂಟೆ ನೆಂದ ಕಣಕವನ್ನು ತೆಗೆದುಕೊಂಡು ದುಂಡಾಕಾರದಲ್ಲಿ ಲಟ್ಟಿಸಿ, ಅದರ ಮಧ್ಯೆ ಹೂರಣದ ಉಂಡೆಗಳನ್ನು ಇಟ್ಟು ಮಡಿಸಿ, ಪುನಃ ಒಂದು ಬಾಳೆ ಎಲೆಯ ಮೇಲೆ ಅಥವಾ ಬಟರ್ ಪೇಪರ್ ಮೇಲೇ ತುಪ್ಪವನ್ನು ಕೈಗೆ ಸವರಿಕೊಂಡು ದುಂಡಾಕಾರವಾಗಿ ತಟ್ಟಬೇಕು. ನಂತರ ಕಾಯ್ದ ತವದ ಮೇಲೇ ಹಾಕಿ ಎರಡೂ ಬದಿಯಲ್ಲಿ ಬೇಯಿಸಬೇಕು. ಹೀಗೆ ಮಾಡಿದ್ದಲ್ಲಿ ಬಿಸಿಬಿಸಿಯಾದ, ರುಚಿರುಚಿಯಾದ ತುಪ್ಪದ ಕೊಬ್ಬರಿ ಹೋಳಿಗೆ ಸಿದ್ಧವಾಗುತ್ತದೆ. ತುಪ್ಪವನ್ನು ಇಷ್ಟ ಪಡುವವರು ತುಪ್ಪದಲ್ಲಿ ಡಿಪ್ ಮಾಡಿ ಕೂಡ ತಿನ್ನಬಹುದು. ಬಿಸಿಬಿಸಿಯಾಗಿ ಇದ್ದಾಗ ತಿಂದರೆ ಇದರ ರುಚಿ ಮತ್ತಷ್ಟು ಹೆಚ್ಚುತ್ತದೆ.

 

Categories: ಅಡುಗೆ ಮನೆ

Leave A Reply

Your email address will not be published.