ಡಿ.28 ರಿಂದ ಬೆಂಗಳೂರಿನಲ್ಲಿ ವಿಶ್ವಹವ್ಯಕ ಸಮ್ಮೇಳನ


ಶಿರಸಿ: ಹವ್ಯಕರ ಸಂಘಟನೆ, ಹವ್ಯಕ ಸಂಸ್ಕೃತಿ ಮುಂದುವರಿಕೆಯ ಉದ್ದೇಶದಿಂದ ಹವ್ಯಕ ಮಹಾಸಭಾ ಅದ್ಧೂರಿಯಾಗಿ ಡಿ.28ರಿಂದ ಮೂರು ದಿನಗಲಕ ಕಾಲ ಬೆಂಗಳೂರಿನಲ್ಲಿ ಅಮೃತ ಮಹೋತ್ಸವ ಮತ್ತು ದ್ವಿತೀಯ ವಿಶ್ವಹವ್ಯಕ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.

ಈ ಕುರಿತು ಹವ್ಯಕ ಮಹಾಸಭಾದ ಅಧ್ಯಕ್ಷ ಗಿರಿಧರ ಕಜೆ ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ, ಹವ್ಯಕರ ಸಂಘಟನೆ, ಸಂಸ್ಕೃತಿ ಮುಂದುವರಿಕೆಯ ಉದ್ದೇಶದಿಂದ ಮಹಾಸಭಾ ಹುಟ್ಟಿ 75 ವರ್ಷವಾಗಿದೆ. ಈ ಹಿನ್ನೆಲೆಯಲ್ಲಿ ಸಮುದಾಯವನ್ನು ಇನ್ನಷ್ಟು ಗಟ್ಟಿಗೊಳಿಸುವ ದಿಶೆಯಲ್ಲಿ ಡಿ.28 ರಿಂದ 3 ದಿನಗಳ ಕಾಲ ಹಮ್ಮಿಕೊಂಡ ಅಮೃತ ಮಹೋತ್ಸವದ ಮೂಲಕ ಪುನರ್ ಚಾಲನೆ ನೀಡಲಾಗುವುದು‌. ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯುವ ಸಮ್ಮೇಳನದಲ್ಲಿ ಹವ್ಯಕರ ಸಂಘಟನೆ, ಇತಿಹಾಸ, ಬೆಳವಣಿಗೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ತಜ್ಞರಿಂದ ಗೋಷ್ಟಿ ನಡೆಯಲಿದೆ. 9 ಗೋಷ್ಟಿ, 24 ವಿಷಯಗಳ ಚಿಂತನ, ಮಂಥನ, ಅಮೃತವರ್ಷಿಣಿ ಸ್ಮರಣ ಸಂಚಿಕೆ ಲೋಕಾರ್ಪಣೆ, 75 ಪುಸ್ತಕಗಳ ಲೋಕಾರ್ಪಣೆ, ಸಾಹಿತಿಗಳಿಗೆ ಸನ್ಮಾನ, 75 ಶ್ರೇಷ್ಠ ಸಾಧಕರಿಗೆ ಸಾಧಕ ರತ್ನ ಪ್ರಶಸ್ತಿ, 75 ಕೃಷಿಕರಿಗೆ ಹವ್ಯಕ ಕೃಷಿ ರತ್ನ ಪ್ರಶಸ್ತಿ, 75 ವೈದಿಕರಿಗೆ ಹವ್ಯಕ ವೇದರತ್ನ ಸನ್ಮಾನ, 75 ಯೋಧರಿಗೆ ಹವ್ಯಕ ದೇಶರತ್ನ ಸನ್ಮಾನ, 75 ವಿದ್ಯಾರ್ಥಿಗಳಿಗೆ ಹವ್ಯಕ ವಿದ್ಯಾರತ್ನ ಪುರಸ್ಕಾರ ನೀಡಲಾಗುವುದು. ಜೊತೆಗೆ 75 ದೇಶೀ ಗೋವುಗಳ ದಾನ ನೀಡಲಾಗುವುದು ಎಂದರು.

ಉದ್ಘಾಟನೆ: ಹವ್ಯಕ ಮಹಾಸಭಾದ ಅಮೃತ ಮಹೋತ್ಸವವನ್ನು ರಾಮಚಂದ್ರರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹಾಗೂ ಎರಡನೇ ವಿಶ್ವ ಹವ್ಯಕ ಸಮ್ಮೇಳನವನ್ನು ಸ್ವರ್ಣವಲ್ಲೀಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಉದ್ಘಾಟನೆ ಮಾಡಲಿದ್ದಾರೆ.

ವಿಶೇಷತೆಗಳು: ಕರಕುಶಲ ವಸ್ತು ಪ್ರದರ್ಶನ, ಸ್ಪರ್ಧೆ ಹಾಗೂ ಮಾರಾಟ, ಹವ್ಯಕ ಪಾರಂಪರಿಕ ವಸ್ತು ಪ್ರದರ್ಶನ, ಸ್ಪರ್ಧೆ, ಹವ್ಯಕ ಸಂಸ್ಕೃತಿಯ ಛಾಯಾಚಿತ್ರ ಪ್ರದರ್ಶನ ಮತ್ತು ಸ್ಪರ್ಧೆ, ರಂಗೋಲಿ ಕಲಾ ಸ್ಪರ್ಧೆ, ಹವ್ಯಕ ಸಂಪ್ರದಾಯದ ಚಿತ್ರಕಲಾ ಸ್ಪರ್ಧೆ, ಹೂಕುಂಡ ಕಲಾ ಸ್ಪರ್ಧೆ, ಮಕ್ಕಳಿಗಾಗಿ ಹವ್ಯಕ ಸಂಸ್ಕೃತಿಯ ಚಿತ್ರ ಸ್ಪರ್ಧೆ ಹಾಗೂ 75 ಆಕರ್ಷಕ ಬಹುಮಾನ ವಿತರಿಸಲಾಗುವುದು. 75 ಕಲಾವಿದರೊಂದಿಗೆ ಯಜ್ಞಧಾರಿಣಿ ರಾಮಕಥಾ ಪ್ರಸ್ತುತಿ, 75 ಯಜ್ಞ ಮಂಟಪ ದರ್ಶನ, ಯಾಗ ಮಂಡಲ ಕಲಾ ಪ್ರದರ್ಶನ, ಸ್ಪರ್ಧೆ, ವಾಣಿಜ್ಯ ಮಳಿಗೆಗಳಿರಲಿವೆ. ಮನರಂಜನೆಗೆ ಕುದುರೆ, ಒಂಟೆ ಸವಾರಿ, ಮನಸ್ಸಿಗೆ ಮುದ ನೀಡುವ ಗೊಂಬೆಗಳು, ಕಬ್ಬಿನ ಆಲೇಮನೆ ನಡೆಯಲಿದೆ. 30 ದೇಶೀ ತಳಿ ಗೋ ದರ್ಶನ, ಅಡಕೆ ಕೃಷಿಯ ಸಮಗ್ರ ಪ್ರದರ್ಶನ, ಹವಿಗನ್ನಡದ ಅಮೋಘ ಸಾಹಿತ್ಯ ಪ್ರದರ್ಶನ, ಹವ್ಯಕ ಪಾಕೋತ್ಸವ- ಆಹಾರ ಮೇಳ, ಸಾಮೂಹಿಕ ಭಗವದ್ಗೀತಾ ಪಠಣ, ಗೀತ ನಾಟ್ಯ ವೈಭವ, ಕಲಾವಿದರಿಂದ ಯಕ್ಷಗಾನ ನೃತ್ಯೋತ್ಸವ, ಕಲಾವಿದರ ಅಭಿನಯರಂಗ ನಡೆಯಲಿದೆ ಎಂದು ತಿಳಿಸಿದರು.

ಮಹಾಸಭಾದ ಉಪಾಧ್ಯಕ್ಷ ಶ್ರೀಧರ ಭಟ್ಟ ಪ್ರಾಸ್ತಾವಿಕ ಮಾತನಾಡಿ, ಅಖಿಲ ಹವ್ಯಕ ಮಹಾಸಭಾ ಹವ್ಯಕರ ಪ್ರಾತಿನಿಧಿಕ ಸಂಸ್ಥೆಯಾಗಿದೆ. ಪ್ರಸ್ತುತ 23 ಸಾವಿರ ಸದಸ್ಯರು ನೊಂದಾವಣೆಯಾಗಿದ್ದು, 59 ಸಾವಿರ ಸದಸ್ಯರ ನೊಂದಣಿ ಮಾಡಲು ಶ್ರಮಿಸಲಾಗುತ್ತಿದೆ. ಯಾವುದೇ ಬೇಡಿಕೆ ಈಡೇರಿಕೆಗೆ ಜನಸಂಖ್ಯೆಯೂ ಮುಖ್ಯವಾಗುವ ಉದ್ದೇಶದಿಂದ ಅದರ ಬಲಪ್ರದರ್ಶನ ಆಗಬೇಕು ಎಂದರು. ಈ ಮೊದಲು ಇಲ್ಲಿನ ಸಿದ್ದಾಪುರ ಟಿಎಮ್ಎಸ್ ನಲ್ಲಿ ಸಮ್ಮೇಳನದ ಪೂರ್ವ ಭಾವಿ ಸಭೆಯನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಪ್ರಮುಖರಾದ ಶ್ರೀಧರ ಭಟ್ ಕೆಕ್ಕಾರ, ಆರ್.ಎಮ್.ಹೆಗಡೆ ಬಾಳೇಸರ್ , ಜಿ.ವಿ.ಹೆಗಡೆ, ವೇಣು ವಿಘ್ನೇಶ ಸಂಪ, ಪ್ರಶಾಂತ ಭಟ್ ಮುಂತಾದವರು ಇದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.