ನೌಕಾನೆಲೆ ಭದ್ರತಾ ಸಿಬ್ಬಂದಿಗಳ ಮರು ನೇಮಕಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ

ಕಾರವಾರ: ನೌಕಾನೆಲೆಯಲ್ಲಿ ಗುತ್ತಿಗೆ ಆಧಾರದಲ್ಲಿ 80ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದವರಿಗೆ ಏಕಾಏಕಿ ಕೆಲಸದಿಂದ ತೆಗೆದು ಹಾಕಲಾಗಿದೆ. ಕೂಡಲೇ ಅವರನ್ನು ಮರು ನೇಮಕ ಮಾಡಿಕೊಡಬೇಕು ಎಂದು ಆಗ್ರಹಿಸಿ ಶ್ರೀಮಹಾದೇವ ಸ್ಥಳೀಯ ಮತ್ತು ಸೀಬರ್ಡ್ ನಿರಾಶ್ರಿತ ಕೂಲಿ ಕಾರ್ಮಿಕರ ಯೂನಿಯನ್ ಪದಾಧಿಕಾರಿಗಳು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಖಾಸಗಿ ಸೆಕ್ಯುರಿಟಿ ಸಂಸ್ಥೆಯೊಂದರ ಮೂಲಕ ಹೊರ ಗುತ್ತಿಗೆ ಆಧಾರದಲ್ಲಿ ಗಾರ್ಡ್‌ಗಳನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಇವರಲ್ಲಿ ಹೆಚ್ಚಿನವರು ಸ್ಥಳೀಯ ನಿವಾಸಿಗಳಾದ ಮೀನುಗಾರರು ಹಾಗೂ ಕೃಷಿಕರು ಸೀಬರ್ಡ್ ಯೋಜನೆಗಾಗಿ ತಾವು ವಾಸ ಮಾಡುತ್ತಿದ್ದ ಹಾಗೂ ಉದ್ಯೋಗ ನೀಡುತ್ತಿದ್ದ ಭೂಮಿಯನ್ನು ಬಿಟ್ಟುಕೊಟ್ಟು ನಿರಾಶ್ರಿತರಾದರು. ಒಂದು ನಿರಾಶ್ರಿತ ಕುಟುಂಬಕ್ಕೆ ಒಂದು ಉದ್ಯೋಗ ನೀಡುವುದಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಸಮಯದಲ್ಲಿ ನೌಕಾನೆಲೆಯ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ, ಯಾವುದೇ ಬೇಡಿಕೆ ಈಡೇರಿಸಿಲ್ಲ ಎಂದು ಆರೋಪಿಸಿದ್ದರು.
ಕಳೆದ 20 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಭದ್ರತಾ ಸಿಬ್ಬಂದಿಯಾಗಿ ಸೀಬರ್ಡ್ ನೌಕಾನೆಲೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದರು. ಸುಮಾರು 80 ರಿಂದ 90 ನಿರಾಶ್ರಿತರು ಸೀಬರ್ಡ್ ನೌಕಾನೆಲೆಯಲ್ಲಿ ಕೆಲಸ ಮಾಡುತ್ತಿದ್ದರು. ಆದರೀಗ ಅವರ ಅಭಿಪ್ರಾಯ ಪಡೆಯದೇ, ಪರ್ಯಾಯ ವ್ಯವಸ್ಥೆಯನ್ನೂ ಮಾಡದೇ ಪ್ರವೇಶ ಪಾಸ್‍ಗಳನ್ನು ಪಡೆದುಕೊಂಡು ಕೆಲಸಕ್ಕೆ ಬಾರದಂತೆ ಅಧಿಕಾರಿಗಳು ತಿಳಿಸಿದ್ದಾರೆ ಎಂದು ದೂರಿದರು.
ಗುತ್ತಿಗೆದಾರರು ಹಾಗೂ ನೌಕಾಸೇನೆಯ ಅಧಿಕಾರಿಗಳ ಈ ನಡೆಯಿಂದಾಗಿ ನಿರಾಶ್ರಿತರ ಕುಟುಂಬಗಳು ಬೀದಿ ಪಾಲಾಗುವಂತಾಗಿವೆ. ಬಹುತೇಕರು ಇದೇ ಉದ್ಯೋಗದ ಮೇಲೆ ಅವಲಂಬಿತರಾಗಿದ್ದರು. ಭದ್ರತಾ ಸಿಬ್ಬಂದಿಯ ಪೂರೈಕೆಗೆ ಗುತ್ತಿಗೆ ಪಡೆದ ಸಂಸ್ಥೆ ಹಾಗೂ ನೌಕಾಸೇನೆಯ ಅಧಿಕಾರಿಗಳು ಭೂಮಿ ಕಳೆದುಕೊಂಡವರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದರು.
ಒಂದು ವೇಳೆ ಭದ್ರತಾ ಸಿಬ್ಬಂದಿಯ ಹುದ್ದೆಯನ್ನು ಮುಂದುವರಿಸುವದಿದ್ದರೆ, ನೌಕಾನೆಲೆಯ ಪ್ರವೇಶ ದ್ವಾರದ ಮುಂದೆ ಧರಣಿ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಮನವಿ ಮೂಲಕ ಎಚ್ಚರಿಸಿದ್ದಾರೆ. ಮನವಿ ನೀಡುವ ವೇಳೆ ಸೀಬರ್ಡ್ ನಿರಾಶ್ರಿತ ಕೂಲಿಕಾರ್ಮಿಕರ ಯೂನಿಯನ್‍ನ ಅಧ್ಯಕ್ಷ ದೀಪಕ್ ನಾಯ್ಕ, ಗೌರವ ಅಧ್ಯಕ್ಷ ಸುನೀಲ್ ನಾಯ್ಕ, ಸಂತೋಷ್, ಶೇಖರ್, ಉದಯ್ ಹಾಗೂ 80 ಕ್ಕೂ ಹೆಚ್ಚು ಕಾರ್ಮಿಕರು ಇದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.