ಸಂಜೆ ಸ್ನಾಕ್ಸ್ ಗೆ ಬ್ರೆಡ್ ಉಪ್ಪಿಟ್ಟು


ಅಡುಗೆ ಮನೆ: ಬ್ರೆಡ್ ಉಪ್ಪಿಟ್ಟು ಬೆಳಗ್ಗೆ ತಿಂಡಿಗೆ ಅಥವಾ ಸಂಜೆ ಸ್ನಾಕ್ಸ್ ಗೆ ಎರಡಕ್ಕೂ ಚೆನ್ನಾಗಿರುತ್ತದೆ. ಮಾಡುವುದು ಕೂಡ ಬಹಳ ಸುಲಭ.
ಬೇಕಾಗುವ ಸಾಮಗ್ರಿ: 6 ಬ್ರೆಡ್ ಸ್ಲೈಸ್, 3 ಚಮಚ ಎಣ್ಣೆ, ಅರ್ಧ ಚಮಚ ಸಾಸಿವೆ, ಕರಿಬೇವು, ಅರ್ಧ ಈರುಳ್ಳಿ, ಒಂದು ಹಸಿಮೆಣಸಿನಕಾಯಿ, ಅರ್ಧ ಚಮಚ ಶುಂಠಿ ಪೇಸ್ಟ್, ಎರಡು ಟೊಮೆಟೋ, ಅರ್ಧ ಚಮಚ ಅರಿಶಿನ ಪುಡಿ, ಒಂದು ಚಮಚ ಅಚ್ಚಖಾರದ ಪುಡಿ, ಅರ್ಧ ಚಮಚ ಸಕ್ಕರೆ, ಉಪ್ಪು, ಅರ್ಧ ಕ್ಯಾಪ್ಸಿಕಂ, 2 ಚಮಚ ನೀರು, ಮೂರು ಚಮಚದಷ್ಟು ಹೆಚ್ಚಿದ ಕೊತ್ತಂಬರಿ ಸೊಪ್ಪು.
ಮಾಡುವ ವಿಧಾನ: ಬ್ರೆಡ್ ಅನ್ನು ತವಾ ಅಥವಾ ರೋಸ್ಟರ್ ನಲ್ಲಿ ಹೊಂಬಣ್ಣ ಬರುವವರೆಗೆ ರೋಸ್ಟ್ ಮಾಡಿಕೊಳ್ಳಿ. ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿ ಅದನ್ನು ಪಕ್ಕಕ್ಕಿಡಿ. ಬಾಣಲೆಯನ್ನು ತೆಗೆದುಕೊಂಡು ಎಣ್ಣೆಯನ್ನು ಬಿಸಿ ಮಾಡಿ. ಅದಕ್ಕೆ ಸಾಸಿವೆ ಮತ್ತು ಕರಿಬೇವು ಹಾಕಿ. ಒಗ್ಗರಣೆ ಚಟಪಟ ಎಂದ ಬಳಿಕ ಹೆಚ್ಚಿದ ಈರುಳ್ಳಿ, ಶುಂಠಿ ಪೇಸ್ಟ್ ಮತ್ತು ಹಸಿಮೆಣಸಿನಕಾಯಿ ಹಾಕಿ. ಅದು ಸ್ವಲ್ಪ ಹುರಿದ ಬಳಿಕ ಟೊಮೆಟೋ ಹಾಕಿ. ಟೊಮೆಟೋ ಮೆತ್ತಗಾಗುವವರೆಗೆ ಹುರಿಯಿರಿ. ನಂತರ ಅರಿಶಿನ, ಅಚ್ಚಖಾರದಪುಡಿ, ಸಕ್ಕರೆ, ರುಚಿಗೆ ತಕ್ಕಷ್ಟು ಉಪ್ಪನ್ನು ಬೆರೆಸಿ. ನಂತರ ಹೆಚ್ಚಿದ ಕ್ಯಾಪ್ಸಿಕಂ ಹಾಕಿ. ಕ್ಯಾಪ್ಸಿಕಂ ಅನ್ನು ಅತಿಯಾಗಿ ಬೇಯಿಸಬೇಡಿ. 2 ಚಮಚದಷ್ಟು ನೀರು ಹಾಕಿ ಎಲ್ಲವನ್ನೂ ಮತ್ತೊಮ್ಮೆ ಮಿಕ್ಸ್ ಮಾಡಿ. ನಂತರ ರೋಸ್ಟ್ ಮಾಡಿಟ್ಟ ಬ್ರೆಡ್ ತುಣುಕುಗಳನ್ನು ಹಾಕಿ ನಿಧಾನವಾಗಿ ಕೈಯ್ಯಾಡಿಸಿ. ಸಣ್ಣ ಉರಿಯಲ್ಲಿ 2-3 ನಿಮಿಷ ಬೇಯಿಸಿ ಅದಕ್ಕೆ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಬಿಸಿಬಿಸಿಯಾಗಿ ಸರ್ವ್ ಮಾಡಿದರೆ ಬ್ರೆಡ್ ಉಪ್ಪಟ್ಟು ರೆಡಿ.

Categories: ಅಡುಗೆ ಮನೆ

Leave A Reply

Your email address will not be published.