ಅತಿಕ್ರಮಣದಾರರ ಸಮಸ್ಯೆ ಪರಿಹಾರಕ್ಕೆ ಮಲೆನಾಡು ಸಂಸದರು ಕೇಂದ್ರದ ಮೇಲೆ ಒತ್ತಡ ಹೇರಲು ವಿಫಲರಾಗಿದ್ದಾರೆ: ಕಾಗೋಡು ತಿಮ್ಮಪ್ಪ


ಶಿರಸಿ: ಮುಂಬರುವ ದಿನಗಳಲ್ಲಿ ಸರ್ವೋಚ್ಛ ನ್ಯಾಯಾಲಯದ ಆದೇಶದಿಂದ ಅರಣ್ಯ ಹಕ್ಕು ಕಾಯಿದೆ ಅಡಿ ತಿರಸ್ಕೃತಗೊಂಡ ಅರಣ್ಯ ಅತಿಕ್ರಮಣದಾರರಿಗೆ ಅರಣ್ಯಭೂಮಿ ಸಾಗುವಳಿಗೆ ಆತಂಕವಾಗುವ ಹಿನ್ನೆಲೆಯಲ್ಲಿ ಅರಣ್ಯ ಅತಿಕ್ರಮಣದಾರರ ಪರವಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರವು ಸಾಮಾಜಿಕ ನ್ಯಾಯದ ಅಡಿಯಲ್ಲಿ ಬದ್ಧತೆ ಪ್ರಕಟಿಸುವ ಅವಶ್ಯಕತೆ ಇದ್ದು ನಿರ್ದಿಷ್ಟ ಕಾಲಮಿತಿಯ ಒಳಗೆ ವಸತಿ ಮತ್ತು ಭೂ ಹೀನರಿಗೆ ಕಾನೂನಾತ್ಮಕ ಹಕ್ಕನ್ನು ಕೊಡಿಸಲು ಸರ್ಕಾರದ ಗಮನಕ್ಕೆ ತರಲಾಗುವುದೆಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.

ಜಿಲ್ಲಾ ಅರಣ್ಯ ಅತಿಕ್ರಮಣದಾರ ಹೋರಾಟಗಾರರ ವೇದಿಕೆ ಅಧ್ಯಕ್ಷ ಎ.ರವೀಂದ್ರ ನಾಯ್ಕರ ನೇತೃತ್ವದಲ್ಲಿ ಅ.27ರಂದು ಸಾಗರದ ಸ್ವಗೃಹದಲ್ಲಿ ರಾಜ್ಯದ ಅರಣ್ಯವಾಸಿಗಳ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಮಂಜೂರಿ ಪ್ರಕ್ರಿಯೆ ಕುರಿತು ಚರ್ಚಿಸುವ ಸಂದರ್ಭದಲ್ಲಿ ಹೇಳಿದರು.

ರಾಜ್ಯದಲ್ಲಿ 2,81,000 ಜನರು ಅರಣ್ಯ ಹಕ್ಕು ಕಾಯಿದೆ ಅಡಿ ಅರ್ಜಿ ಸಲ್ಲಿಸಿದ್ದು, ಅವುಗಳಲ್ಲಿ 1,80,000 ಅರ್ಜಿಗಳು ತಿರಸ್ಕೃತವಾಗಿದ್ದು ಬಂದಂತಹ ಅರ್ಜಿಗಳಲ್ಲಿ ಈಗಾಗಲೇ ಶೇ. 64 ರಷ್ಟು ಅರ್ಜಿದಾರರ ಅರ್ಜಿಗಳು ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಸರ್ವೋಚ್ಛ ನ್ಯಾಯಾಲಯ ಕಟ್ಟು ನಿಟ್ಟಿನ ಆದೇಶ ನೀಡಿದ್ದಲ್ಲಿ ಒಕ್ಕಲೆಬ್ಬಿಸುವ ಭೀತಿಯಲ್ಲಿ ಅತಿಕ್ರಮಣದಾರರು ಇರುವುದರಿಂದ ಶೀಘ್ರದಲ್ಲಿ ಸರ್ಕಾರ ಪರ್ಯಾಯ ವ್ಯವಸ್ಥೆ ಕುರಿತು ಚಿಂತಿಸುವ ಅವಶ್ಯಕತೆ ಇದೆ ಎಂದು ನಿಯೋಗವು ಕಾಗೋಡು ತಿಮ್ಮಪ್ಪ ಅವರಿಗೆ ಚರ್ಚೆಯ ಸಂದರ್ಭದಲ್ಲಿ ತಿಳಿಸಿತು.

ಅತಿಕ್ರಮಣದಾರರ ಸಮಸ್ಯೆ ಈಡೇರಿಸುವ ದಿಶೆಯಲ್ಲಿ ಮಲೆನಾಡಿನ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ವಿಫಲರಾಗಿದ್ದು ಅರಣ್ಯ ಅತಿಕ್ರಮಣದಾರರ ಭೂಮಿ ಹಕ್ಕಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರವು ಕ್ರಿಯಾತ್ಮಕ ಜಂಟಿ ಕಾರ್ಯಯೋಜನೆಯನ್ನು ರೂಪಿಸಲು ಸಾರ್ವತ್ರಿಕವಾಗಿ ಅರಣ್ಯ ಅತಿಕ್ರಮಣದಾರರ ಪರವಾದ ಹೋರಾಟದ ಧ್ವನಿ ನಿರಂತರವಾಗಿರಬೇಕೆಂದು ಕಾಗೋಡ ತಿಮ್ಮಪ್ಪ ಹೇಳಿದರು.

ಹೋರಾಟಕ್ಕೆ ಸಿದ್ದ ಎಂದ ಕಾಗೋಡು ತಿಮ್ಮಪ್ಪ: ಅರಣ್ಯ ಹಕ್ಕು ಕಾಯಿದೆ ಅನುಷ್ಠಾನದಲ್ಲಿ ಕಾನೂನಾತ್ಮಕ ಅಂಶವನ್ನು ಅರಿತುಕೊಳ್ಳದೇ ಕಾನೂನು ಅನುಷ್ಠಾನದಲ್ಲಿ ವೈಫಲ್ಯತೆಗೆ ಶಾಸಕರ ಪೂರ್ಣ ಪ್ರಮಾಣದ ಸ್ಪಂದನೆ ಇಲ್ಲದಿರುವುದೇ ಒಂದು ಕಾರಣವಾಗಿದ್ದು ಅತಿಕ್ರಮಣದಾರರ ಮತ ಪಡೆಯುವಲ್ಲಿ ಇರುವ ಆಸಕ್ತಿ, ವಿಧಾನಸಭಾ ಅಧಿವೇಶನದ ಚರ್ಚೆಯಲ್ಲಿ ಅರಣ್ಯ ಅತಿಕ್ರಮಣದಾರರ ಕುರಿತು ಹೆಚ್ಚಿನ ಆಸಕ್ತಿ ಇಲ್ಲದಿರುವುದು ವಿಷಾದಕರ ಎಂದು ಕಾಗೋಡ ತಿಮ್ಮಪ್ಪ ಹೇಳಿದರು. ಕಳೆದ 6-7 ದಶಕದಿಂದ ಸಾಮಾಜಿಕ ಮತ್ತು ಭೂಮಿ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಹಿನ್ನೆಲೆಯಲ್ಲಿ ನನ್ನ ಕೊನೆ ಉಸಿರು ಇರುವವರೆಗೂ ಅರಣ್ಯವಾಸಿಗಳ ಮತ್ತು ಬಗರ್ ಹುಕ್ಕುಂ ಸಾಗುವಳಿದಾರರ ಭೂಮಿ ಹಕ್ಕಿಗಾಗಿ ಹೋರಾಡಲು ಸಿದ್ಧವಾಗಿರುತ್ತೇನೆಂದು ಹೇಳಿದರು.

Categories: ಜಿಲ್ಲಾ ಸುದ್ದಿ

1 Comment

  1. ಅವರೇ ಮಂತ್ರಿ ಆಗಿದ್ದಾಗ ಈ ವಿಚಾರ ಏಕೆ ಬಲ ಪಡೆದು ಕೊಂಡಿಲ್ಲ? ರವಿ ನಾಯ್ಕ್ ಹೋರಾಟ ಫಲಪ್ರದವಾಗಲಿ .

    Reply

Leave A Reply

Your email address will not be published.