ಹಳ್ಳಿಯ ಪ್ರತಿಭೆ ರಾಷ್ಟ್ರಮಟ್ಟದಲ್ಲಿ ಮಿಂಚಬೇಕು: ಪ್ರಮೀಳಾ ನಾಯ್ಕ


ಕಾರವಾರ: ಕವ್ವಾಲಿ, ಕೋಲಾಟ, ಯಕ್ಷಗಾನ,ಚಿತ್ರಕಲೆ, ಮಿಮಿಕ್ರಿ, ಕಂಠಪಾಠ, ರಸಪ್ರಶ್ನೆ, ಆಶುಭಾಶಣ, ಭಕ್ತಿಗೀತೆ, ಛದ್ಮವೇಶ, ಜಾನಪದ ಹೀಗೆ ಹತ್ತು ಹಲವು ತಮ್ಮಲ್ಲೆ ಅಡಗಿರುವ ಕಲೆ ಮತ್ತು ಪ್ರತಿಭೆಯನ್ನು ಚಿಣ್ಣರು ಪ್ರದರ್ಶಿಸಿ ಚಪ್ಪಾಳೆಯೊಂದಿಗೆ ಬಹುಮಾನಗಳನ್ನು ಗಿಟ್ಟಿಸಿಕೊಂಡರು.
ಶುಕ್ರವಾರ ನಗರದ ಹಿಂದೂ ಪ್ರೌಢಶಾಲೆ ಮತ್ತು ಬಾಲಮಂದಿರ ಪ್ರೌಢಶಾಲೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರವಾರ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದಲ್ಲಿ ವಿವಿಧ ಶಾಲಾ ಮಕ್ಕಳು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡು ತಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಹೊರಹೊಮ್ಮಿಸಿದರು.
ಹಿರಿಯರ ಮತ್ತು ಕಿರಿಯರ ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಚಿಣ್ಣರಛದ್ಮವೇಶದಲ್ಲಿ ಐತಿಹಾಸಿಕ ಹಿನ್ನಲೆಯ ಶಿವಾಜಿ ಮಹಾರಾಜ, ಕಿತ್ತೂರುಚೆನ್ನಮ್ಮ, ಜಾನ್ಸಿರಾಣಿ ಲಕ್ಷ್ಮಿಬಾಯಿ, ಪೌರಾಣಿಕತೆಯ ಹನುಮಂತ, ನಾಗದೇವರು, ಅರ್ಧನಾರೇಶ್ವರ, ತಿರುಪತಿ ವೇಂಕಟೇಶ್ವರ, ಕಾಳಿಕಾದೇವಿ, ಲಕ್ಷ್ಮೀ, ಬಾಲ ಕೃಷ್ಣ ಶಿವತಾಂಡವರು ಕಂಡು ಬಂದರು. ಬಾಲಕಿಯರ ಯಕ್ಷಗಾನ ಮತ್ತು ಕೋಲಾಟ ಗಮನ ಸೆಳೆದವು. ಹಿಂದಿ, ಇಂಗ್ಲೀಷ, ಮರಾಠಿ, ಕನ್ನಡ, ಸಂಸ್ಕೃತ ಭಾಷೆಗಳ ಕಂಠಪಾಠ ಸ್ಪರ್ಧೆಗಳಲ್ಲಿ ಮಕ್ಕಳು ಉತ್ಸಾಹ ತೋರಿದರು. ಭಕ್ತಿಗೀತೆ ಮತ್ತು ಜಾನಪದ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡಿ ನಿರ್ಣಾಯಕರು ಕೂಡಾ ತಲೆ ದೂಗುವಂತೆ ಮಾಡಿದರು. ಪಾಲಕರು ಮತ್ತು ಶಿಕ್ಷಕರು ಮಕ್ಕಳ ಕಲಾ ಪ್ರದರ್ಶನಕ್ಕೆ ಸಹಕಾರ ನೀಡಿ ಪ್ರೋತ್ಸಾಹಿಸಿದರು.
ಹಳ್ಳಿಯ ಪ್ರತಿಭೆ ರಾಷ್ಟ್ರಮಟ್ಟದಲ್ಲಿ ಮಿಂಚಬೇಕು: ಕಾರ್ಯಕ್ರಮ ಉದ್ಘಾಟಿಸಿದ ತಾಲೂಕು ಪಂಚಾಯತ್ ಅಧ್ಯಕ್ಷೆ ಪ್ರಮೀಳಾ ನಾಯ್ಕ ಮಾತನಾಡಿ ಕಲೆ ಮತ್ತು ಪ್ರತಿಭೆಗಳನ್ನು ಗುರುತಿಸುವ ಕಾರ್ಯವಾಗಬೇಕು. ಹಳ್ಳಿಯಿಂದ ಹಿಡಿದು ದಿಲ್ಲಿಯವರೆಗೂ ಮಕ್ಕಳಲ್ಲಿ ಒಂದಿಲ್ಲೊಂದು ಪ್ರತಿಭೆ ಅಡಗಿರುತ್ತದೆ. ತಾಲೂಕಿನ ಹಳ್ಳಿಯ ಪ್ರತಿಭೆಗಳು ರಾಷ್ಟ್ರಮಟ್ಟದಲ್ಲಿ ಮಿಂಚಬೇಕು ಎಂಬುದು ನಮ್ಮ ಆಶಯವಾಗಿದೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ತಾಲೂಕು ಪಂಚಾಯತ್ ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಮಾತನಾಡಿ ಮಕ್ಕಳ ಆಸಕ್ತಿ ಅನುಸಾರ ಪಾಲಕರು ಮತ್ತು ಶಿಕ್ಷಕರು ಪ್ರೋತ್ಸಾಯಿಸಬೇಕು ಎಂದು ತಿಳಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ನಾಯಕ ಸ್ವಾಗತಿಸಿದರು. ಜಿಲ್ಲಾ ಪಂಚಾಯತ್ ಸದಸ್ಯರಾದ ಚೈತ್ರಾ ಕೋಠಾರಕರ, ಶಾಂತಾ ಬಾಂದೇಕರ ಸೇರಿದಂತೆ ಇತರರು ಉಪಸ್ಥಿತರಿದ್ದರು

Categories: ಜಿಲ್ಲಾ ಸುದ್ದಿ

Leave A Reply

Your email address will not be published.