ಸ್ಕೂಟರ್‌ನಲ್ಲೇ ತಾಯಿಯನ್ನು ತೀರ್ಥಯಾತ್ರೆ ಸುತ್ತಿಸುತ್ತಿರುವ ಡಿ.ಕೃಷ್ಣಕುಮಾರ


ಗೋಕರ್ಣ: ಹೆತ್ತು ಸಾಕಿ ಸಲುಹಿ ವಿದ್ಯಾಭ್ಯಾಸ ಕೊಡಿಸಿ ಉನ್ನತ ಉದ್ಯೋಗಕ್ಕೆ ಹೋದ ನಂತರ ಹೆತ್ತ ತಂದೆ ತಾಯಿಯನ್ನೇ ದೂರಮಾಡುವ ಮಕ್ಕಳಿರುವ ಇಂದಿನ ದಿನಗಳಲ್ಲಿ ತಾಯಿಗೋಸ್ಕರವೇ ಉದ್ಯೋಗವನ್ನು ತೊರೆದು ತೀರ್ಥಕ್ಷೇತ್ರ ಯಾತ್ರೆ ಕೈಗೊಳ್ಳುತ್ತಿರುವ ಅಪರೂಪದ ಮೈಸೂರಿನ ವ್ಯಕ್ತಿಯೊಬ್ಬರು ಸಾಕ್ಷಿಯಾಗಿದ್ದಾರೆ.

ಪುರಾಣದಲ್ಲಿ ಶ್ರವಣಕುಮಾರ ತನ್ನ ತಂದೆ ತಾಯಿಯನ್ನು ಬುಟ್ಟಿಯಲ್ಲಿ ಹೊತ್ತು ತೀರ್ಥ ಯಾತ್ರೆ ಮಾಡಿಸಿದಂತೆ ಇಲ್ಲೊಬ್ಬ ಆಧುನಿಕ ಶ್ರವಣಕುಮಾರ ತನ್ನ ತಾಯಿಯನ್ನು ಹಳೆ ಸ್ಕೂಟರ್‌ನಲ್ಲಿ ಕೂರಿಸಿಕೊಂಡು ಆರೇಳು ರಾಜ್ಯಗಳ ಸುತ್ತುತಾ, ಪುಣ್ಯಕ್ಷೇತ್ರವನ್ನು ದರ್ಶನ ಮಾಡಿಸುತ್ತಾ ಹೊಸ ದಾಖಲೆ ನಿರ್ಮಿಸುತ್ತಿದ್ದಾರೆ. ಇದು ಮೈಸೂರಿನ ಮಾನಸ ಗಂಗೂತ್ರಿ ನಿವಾಸಿ ಡಿ.ಕೃಷ್ಣಕುಮಾರ ಅವರ ತಾಯಿ ಚೂಡಾ ರತ್ನಾರವರನ್ನು ಕರೆದುಕೊಂಡು ಹೋಗುತ್ತಿರುವ ಸಾಹಸಗಾಥೆ.

ಅವರು ಈ ಯಾತ್ರೆಯ ನಿಮಿತ್ತ ಶುಕ್ರವಾರ ಇಲ್ಲಿನ ಪುರಾಣ ಪ್ರಸಿದ್ದ ಮಹಾಬಲೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಆತ್ಮಲಿಂಗ ದರ್ಶನ ಪಡೆದು ನಂತರ ಪತ್ರಿಕೆಯೊಂದಿಗೆ ಮಾತನಾಡಿ ತನ್ನ ತಾಯಿಗೋಸ್ಕರ ಮಾತೃ ಸೇವಾ ಸಂಕಲ್ಪಯಾತ್ರೆ ಹಮ್ಮಿಕೊಂಡಿದ್ದೇನೆ. 67 ವರ್ಷ ಜೀವನವನ್ನು ತಂದೆ ಮಕ್ಕಳ ಪಾಲನೆಯೊಂದಿಗೆ ಅಡುಗೆ, ಮನೆಗೆಲಸಲ್ಲಿ ಕಾಲಕಳೆದಿದ್ದಾರೆ. 67 ವರ್ಷಗಳಲ್ಲಿ ಆದ ಕೊರತೆಯನ್ನು ಮಗನಾಗಿ ತಾನು ಪ್ರಮಾಣಿಕವಾಗಿ ತುಂಬಿಕೊಡುವ ಪ್ರಯತ್ನಮಾಡುತ್ತಿದ್ದೇನೆ ಎಂದರು. ಇಷ್ಷು ವರ್ಷ ಅವರಿಗೆ ಎಲ್ಲೂ ತಿರುಗಾಡಲು ಆಗಲಿಲ್ಲ ನಮ್ಮ ಸೇವೆಯಲ್ಲೆ ನಿರತಳಾಗಿದ್ದರು ಎಂದು ಭಾವುಕವಾಗಿ ಹೇಳಿದರು. ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದೆ ನಂತರ ತಾಯಿಗೋಸ್ಕರ ಉದ್ಯೋಗಕ್ಕೆ ರಾಜೀನಾಮೆ ನೀಡಿ ಬಂದಿರುವುದಾಗಿ ತಿಳಿಸಿದರು. ವಯಸ್ಸಾದ ತಂದೆ ತಾಯಿಯನ್ನು ವೃದ್ದಾಶ್ರಮಕ್ಕೆ ಸೇರಿಸುತ್ತಿರುವ ಇಂದಿನ ದಿನದಲ್ಲಿ ತಾಯಿಯಯ ಆಸೆ ಈಡೇರಿಸುತ್ತಿರುವುದು ಇಂದಿನ ಯುವ ಸಮುದಾಯಕ್ಕೆ ಮಾದರಿ.
ಮಾತೃ ಸೇವಾ ಸಂಕಲ್ಪ ಯಾತ್ರೆ ಹೊರಟಿದ್ದು ಹೀಗೆ ಜನವರಿ ತಿಂಗಳ 16 ರಿಂದ ಪ್ರಾರಂಭವಾದ ಯಾತ್ರೆ ನಂಜನಗೂಡು, ಬಂಡೀಪುರ ಮಾರ್ಗವಾಗಿ ಊಟಿ ನಂತರ ಕೇರಳ, ತಮಿಳುನಾಡು ಮಹಾರಾಷ್ಟ್ರ, ಗೋವಾದಿಂದ ಗೋಕರ್ಣಕ್ಕೆ ಬಂದಿರುವ ಇವರು ಓಟ್ಟು 27100 ಕಿ.ಮಿ.ಬೈಕನಲ್ಲೇ ಕ್ರಮಿಸಿದ್ದಾರೆ. ಮುಂದೆ ಮುರುಡೇಶ್ವರ, ಉಡುಪಿ, ದಕ್ಷಿಣ ಕನ್ನಡದ ವಿವಿಧ ಪುಣ್ಯಕ್ಷೇತ್ರಗಳಿಗೆ ತೆರಳಿ ಅಲ್ಲಿಂದ ಮೈಸೂರಿಗೆ ಮರಳಲಿದ್ದಾರೆ.
20 ವರ್ಷದ ಸ್ಕೂಟರ್ ಮತ್ತು 70 ವರ್ಷದ ತಾಯಿ: ಇವರು ಪ್ರಯಾಣಿಸುತ್ತಿರುವ ಬಜಾಜ ಚೇತಕ ಸ್ಕೂಟರ್‌ಗೆ 20 ವರ್ಷ ಸಂದಿದೆ. ಇದನ್ನು ಅವರ ತಂದೆಯವರು ಕೊಡಿಸಿದ್ದರಂತೆ ಆದರೆ ಈಗ ತಂದೆ ಇಲ್ಲ. ಆದರೆ ಸ್ಕೂಟರ್ ಇದೆ ಇದು ನನಗೆ ತಂದೆ ಇದ್ದಂತೆ . ತಾಯಿ ಜೊತೆ ನಾವು ಮೂವರು ಪ್ರಯಾಣಿಸುತ್ತೇವೆ ಅಲ್ಲದೇ ಅಷ್ಷು ಹಳೆಯದಾದ ಗಾಡಿಯಾದರು ಪ್ರಯಾಣದಲ್ಲಿ ಎಲ್ಲೂ ಕೆಟ್ಟು ನಿಂತಿಲ್ಲ ಎನ್ನುತ್ತಾರೆ ಕೃಷ್ಣಕುಮಾರ. ಇನ್ನೂ ಈ ಸ್ಕೂಟರ್‌ನಲ್ಲಿ 70 ವರ್ಷದ ಹಿರಿಯ ಜೀವ 27100 ಕಿ.ಮಿ. ಕ್ರಮಿಸಿದ್ದು ಮತ್ತೊಂದು ಸಾಹಸ. ಈ ಬಗ್ಗೆ ತಾಯಿಯವರನ್ನು ಕೇಳಿದಾಗ ನನ್ನ ಮಗನ ಪ್ರೀತಿ ವಾತ್ಸಲ್ಯ ಪ್ರಯಾಣದ ಎಲ್ಲಾ ಆಯಾಸವನ್ನು ಮರೆಸಿದೆ. ಅದೇ ನನ್ನ ಆರೋಗ್ಯವನ್ನು ನೋಡಿಕೊಂಡಿದೆ ಎಂದು ಸಂತಸದಿಂದ ನುಡಿದಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.