ದೇವಿಮನೆ ಘಟ್ಟದ ಹೆದ್ದಾರಿ ಅಗಲೀಕರಣವಾದಲ್ಲಿ ಔಷಧ ಸಸ್ಯಗಳು ಸಂಪೂರ್ಣ ನಾಶ: ಸ್ವರ್ಣವಲ್ಲೀ ಶ್ರೀ


ಶಿರಸಿ: ದೇವಿಮನೆ ಘಟ್ಟ ಪ್ರದೇಶ ಔಷಧ ಸಸ್ಯಗಳ ಖನಿಜವಾಗಿದ್ದು, ಹೆದ್ದಾರಿ ಅಗಲೀಕರಣವಾದಲ್ಲಿ ಅವುಗಳು ಸಂಪೂರ್ಣ ನಾಶವಾಗಲಿದೆ ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಜಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ‌

ಇಲ್ಲಿನ ತೋಟಗಾರಿಕಾ ಕಲ್ಯಾಣ ಮಂಟಪದಲ್ಲಿ ಬುಧವಾರ ಸಂಜೆ ನಡೆದ ಪಾರಂಪಕರಿಕ ವೈದ್ಯರ ಪರಿವೇಷದ ಸಮಾರೋಪ ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವದಿಸಿದ ಅವರು, ದೇವಿಮನೆ ಕಾಡು ಪ್ರದೇಶದಲ್ಲಿ ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಅಲ್ಲಿನ ಔಷಧೀಯ ಸಸಿಗಳಿಗೆ ಹಾನಿಯಾಗಿದ್ದು, ಹೆದ್ದಾರಿ ಅಗಲೀಕರಣ ಯೋಜನೆ ಅನುಷ್ಠಾನವಾದಲ್ಲಿ ಅಳಿದುಳಿದವೂ ಸಹ ನಾಶವಾಗಲಿದೆ. ಆದ್ದರಿಂದ ಯೋಜನೆಯ ಬಗ್ಗೆ ಚಿಂತನೆ ಮಾಡಬೇಕಾದ ಅಗತ್ಯವಿದೆ ಎಂದರು.

ಪಾರಂಪರಿಕ ಔಷಧಗಳು ವ್ಯಾಪಾರೀಕಣ ಆಗುತ್ತಿದೆ. ಹಿಂದಿನ ‌ಕಾಲದಲ್ಲಿ ಸಂಪಾದನೆ ದೃಷ್ಟಿ ಇರಲಿಲ್ಲ. ಆಗ ರೋಗಗಳನ್ನು ಗುಣ ಮುಖ ಮಾಡುವ ಶಕ್ತಿ ಹೆಚ್ಚಿರುತ್ತಿತ್ತು. ಈಗ ವ್ಯಾಪಾರೀಕರಣ ಆಗುತ್ತಿರುವ ಕಾರಣ ಔಷಧ ಕೊಡುವವರ ಹಾಗೂ ತೆಗೆದುಕೊಳ್ಳುವವರ ದೃಷ್ಟಿ ಬೇರೆಡೆಗೆ ಇರುತ್ತದೆ. ಆಗ ನಿಜವಾದ ಸತ್ವ ಕಳೆದುಕೊಳ್ಳುತ್ತದೆ. ಆದ್ದರಿಂದ ವನಸ್ಪತಿ ಔಷಧಗಳು ವ್ಯಾಪಾರೀಕರಣ ಆಗದಂತೆ ನೋಡಿಕೊಳ್ಳಬೇಕು ಎಂದರು.

ವನಸ್ಪತಿ ಔಷಧಗಳಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಇರುವುದಿಲ್ಲ. ಇದರ ಜೊತೆಗೆ ನಮಗೆ ದೀರ್ಘಾಯುಶ್ಯ ಸಿಗುತ್ತದೆ. ಔಷಧಗಳಿಂದ ಅಡ್ಡ ಪರಿಣಾಮ ಇಲ್ಲದಾಗ ಹೆಚ್ಚು ಬಾಳಲು ಸಾಧ್ಯವಾಗುತ್ತದೆ. ಆದ್ದರಿಂದ ನಾವು ಪಾರಂಪರಿಕ ವೈದ್ಯ ಪದ್ಧತಿಯನ್ನು ಉಳಿಸಬೇಕು ಮತ್ತು ಬೆಳೆಸಬೇಕು ಎಂದ ಅವರು, ನಮ್ಮ ಹಳೆಯ ಪದ್ಧತಿಗಳ ಸತ್ವ, ತತ್ವಗಳ ಕಡೆಗೆ ನಮ್ಮ ಗಮನ ಇರಬೇಕು. ಅದು ಕಳೆದು ಹೋಗದಂತೆ ನೋಡಿಕೊಳ್ಳಬೇಕು. ವಿಶೇಷವಾಗಿ ಮಂತ್ರ, ಔಷಧಗಳ ವಿಚಾರದಲ್ಲಿ ಹಿಂದಿನಿಂದ ನಡೆದುಕೊಂಡು ಬಂದ ಪದ್ಧತಿ ಯನ್ನು ಅನುಸರಿಸಬೇಕು ಎಂದರು.‌

ಎಲ್ಲಾ ಗಿಡಗಳು ಒಂದಲ್ಲಾ ಒಂದು ರೀತಿಯ ಔಷಧ ಗುಣವನ್ನು ಹೊಂದಿರುತ್ತದೆ. ಅದನ್ನು ತಿಳಿದುಕೊಂಡು ಸಂಯೋಜನೆ ಮಾಡಬೇಕು ಅಷ್ಟೆ. ಆದರೆ ಅದನ್ನು ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿದೆ. ಈ ರೀತಿಯ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಪಾರಂಪರೀಕ ವೈದ್ಯ ವೃತ್ತಿಯನ್ನು ಉಜ್ಜೀವನ ಗೊಳಿಸುವ ಕೆಲಸ ನಡೆಯುತ್ತಿರುವುದು ಸಂತೋಷ ಎಂದರು. ಈ ವೇಳೆ ಪ್ರಮುಖರಾದ ವಿ.ನಾಗೇಂದ್ರ ಭಟ್, ಶ್ರೀಪಾದ ಹೆಗಡೆ, ನರಸಿಂಹ ಭಟ್ ಹಾಗೂ ವಿಶ್ವನಾಥ ಕಡಬಾಳ ಇದ್ದರು.

Categories: ಜಿಲ್ಲಾ ಸುದ್ದಿ

1 Comment

  1. Anant Hegde, Balegadde

    ನಮ್ಮ ಸ್ವನ೯ವಲ್ಲಿ ಶ್ರೀಗಳ ಆತಂಕ ಶಿರಸಿ-ಕುಮಟಾ ರಸ್ತೆ ಅಗಲೀ ಕರಣ ವಿಚಾರದಲ್ಲಿ ಔಷಧಿ ಸಸ್ಯಗಳು ನಾಶವಾಗಿ ಪರಿಸರ ನಾಶಕ್ಕೆ ಕಾರಣ ಅನ್ನುವ ಸಮಸ್ಯೆ ಗಂಭೀರ .ದೇವೀಮನೆ ಘಟ್ಟ ಪ್ರದೇಶದಲ್ಲಿ ಔಷಧಿ ಸಸ್ಯಗಳು ಅಪಾರ ಅಂದಿದ್ದಾರೆ. ಸಂಚಾರ ದಟ್ಟಣೆ ಸರಿತೂಗಿಸಿ ,ಸಸ್ಯನಾಶ ತಪ್ಪಿಸಲು ಬದಲೀ ಆಲೋಚನೆ ಅಗತ್ಯವಿದೆ .ಮೇಲ್ಸೇತುವೆ ,ಸ್ಥಳೀಯ ಸಾಗಾಟ ಕೆಳರಸ್ತೆ ,ತೂಗುಸೇತುವೆ ಮುಂತಾದ ಪರಿಹಾರ ಗಳಿವೆ .

    Reply

Leave A Reply

Your email address will not be published.