ತಾಳಮದ್ದಲೆ ಶ್ರವಣದಿಂದ ಪುರಾಣಗಳ ಶ್ರವಣದ ಫಲ ದೊರಕುತ್ತದೆ: ವಿದ್ವಾನ ಕೃಷ್ಣ ಭಟ್ಟ


ಯಲ್ಲಾಪುರ: ಯಕ್ಷಗಾನ ತಾಳಮದ್ದಲೆಯ ಶ್ರವಣದಿಂದ ವೇದ ಪಾರಾಯಣ ಭಾಗವತ ಪುರಾಣಗಳ ಶ್ರವಣ ಮಾಡಿದ ಫಲ ದೊರಕುತ್ತದೆ ಎಂದು ವಿದ್ವಾನ ಕೃಷ್ಣ ಭಟ್ಟ ಗಿಡಗಾರಿ ಹೇಳಿದರು.
ಅವರು ತಾಲೂಕಿನ ತೇಲಂಗಾರದಲ್ಲಿ ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಆಡಳಿತ ಸಮಿತಿ ಮತ್ತು ಗೋಪಾಲಕೃಷ್ಣ ಯಕ್ಷಗಾನ ಬಳಗ ತೇಲಂಗಾರ ಇವರ ಸಂಯುಕ್ತಾಶ್ರಯದಲ್ಲಿ ತೇಲಂಗಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವಾರದಲ್ಲಿ ಹಮ್ಮಿಕೊಂಡಿದ್ದ ತಾಳಮದ್ದಲೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಜ್ರಳ್ಳಿ ಗ್ರಾ.ಪಂ. ಅಧ್ಯಕ್ಷ ಗಜಾನನ ಭಟ್ಟ ಅಧ್ಯಕ್ಷತೆ ವಹಿಸಿ ಮಾತನಾಡಿ, ಟಿವಿ ಮೊಬೈಲ್ ಮಾಧ್ಯಮ ಆಕರ್ಷಣೆಗಳಿಂದಾಗಿ ತಾಳಮದ್ದಲೆ ಕಾರ್ಯಕ್ರಮಗಳು ಕಡಿಮೆಯಾಗುತ್ತಿವೆ. ಈ ದುಬಾರಿ ಕಾಲದಲ್ಲಿ ದಕ್ಷಿಣೋತ್ತರ ಕನ್ನಡ ಜಿಲ್ಲೆಗಳ ಕಲಾವಿದರನ್ನು ಕರೆಯಿಸಿ ಸರಕಾರದ ಆರ್ಥಿಕ ನೆರವು ಪಡೆಯದೇ ಸಮಾನ ಮನಸ್ಕರು ಸೇರಿ ತಾಳಮದ್ದಲೆ ಯಕ್ಷಗಾನ ಏರ್ಪಡಿಸಿರುವ ಸಂಘಟನೆಯ ಕಾರ್ಯ ಶ್ಲಾಘನೀಯ ಎಂದರು.
ಗ್ರಾ.ಪಂ. ಸದಸ್ಯ ಜಿ.ಆರ್.ಭಾಗ್ವತ, ನೌಕರ ಸಂಘದ ಅಧ್ಯಕ್ಷ ಪ್ರಕಾಶ ನಾಯಕ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷ ನಾರಾಯಣ ನಾಯಕ, ತಾಲೂಕಾ ಅಧ್ಯಕ್ಷ ಆರ್.ಆರ್. ಭಟ್ಟ, ಪ್ರಮುಖರಾದ ಸಂತೋಷ ಕೊಳಗೇರಿ, ಲಕ್ಷೀ ಅನಂತ ಗಾಂವ್ಕರ, ನಾಗೇಂದ್ರ ಭಟ್ಟ ಉಪಸ್ಥಿತರಿದ್ದರು.
ಸಂಘಟಕರಾದ ಎಂ. .ಆರ್. ಭಟ್ಟ ಹಾಗೂ ಮಂಜುನಾಥ ಗಾಂವ್ಕರ ಕಲ್ಮನೆಯವರು ಗೌರವಾರ್ಪಣೆ ಮಾಡಿದರು. ಶಿಕ್ಷಕರಾದ ವಿ.ಕೆ. ಗಾಂವ್ಕಾರ ಸ್ವಾಗತಿಸಿದರು. ನಾಗರಾಜ ಹೆಗಡೆ ವಂದಿಸಿದರು. ಸಿ.ಆರ್.ಪಿ ವಿ.ಎಸ್.ಭಟ್ಟ ನಿರೂಪಿಸಿದರು. ನಂತರ ಪ್ರಸಿದ್ದ ಕಲಾವಿದರಿಂದ ಕೃಷ್ಣಾರ್ಜುನ ತಾಳಮದ್ದಲೆ ನೆಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಅನಂತ ಹೆಗಡೆ ದಂತಳಿಗೆ, ಮದ್ದಲೆ ವಾದಕರಾಗಿ ನರಸಿಂಹ ಹಂಡ್ರಮನೆ ಕಾರ್ಯನಿರ್ವಹಿಸಿದರು. ಅರ್ಥದಾರಿಗಳಾಗಿ ಕೃಷ್ಣನಾಗಿ ವಾಸುದೇವ ರಂಗ ಭಟ್ಟ, ಅರ್ಜುನನಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್ಟ, ಸುಭದ್ರೆಯಾಗಿ ಗಣಪತಿ ಭಟ್ಟ ಸಂಕದಗುಂಡಿ, ನಾರದನಾಗಿ ಡಾ.ದತ್ತಾತ್ರಯ ಗಾಂವ್ಕರ, ಅಭಿಮನ್ಯುವಾಗಿ ಪ್ರಸನ್ನ ಭಟ್ಟ ಮಾಗೋಡರವರು ಪಾತ್ರ ಚಿತ್ರಣ ನೀಡಿದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.