ಅ.29ಕ್ಕೆ ಶಿರಸಿಯಲ್ಲಿ ದಿವ್ಯಾಂಗರಿಗೆ ಉಚಿತ ಸಲಕರಣೆ ವಿತರಣಾ ಕಾರ್ಯಕ್ರಮ

ಶಿರಸಿ: ತಾಲೂಕಿನ ವಿಕಾಸಾಶ್ರಮ ಮೈದಾನದಲ್ಲಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆಯವರ ವಿಶೇಷ ಪ್ರಯತ್ನದಿಂದ ದಿವ್ಯಾಂಗರಿಗೆ ಉಚಿತವಾಗಿ ಸಾಧನ ಸಲಕರಣೆ ನೀಡುವ ಬೃಹತ್ ಶಿಬಿರವನ್ನು ಅ.29 ಸೋಮವಾರ ಬೆಳಿಗ್ಗೆ 11.30 ಘಂಟೆಗೆ ಏರ್ಪಡಿಸಲಾಗಿದೆ.

ಕಳೆದ ಅಗಸ್ಟ್ ತಿಂಗಳಿನಲ್ಲಿ ಅಲಿಮ್‍ಕೊ ಸಂಸ್ಥೆಯವರು ಗುರುತಿಸಿದ ಅರ್ಹ ದಿವ್ಯಾಂಗರಿಗೆ ಮತ್ತು ಅಸಹಾಯಕ ವೃದ್ಧರಿಗೆ ಅಗತ್ಯವಾದ ಸಹಾಯಕ ಸಲಕರಣೆಗಳನ್ನು ನೀಡಲಾಗುವುದು. ಅಂಗವೈಕಲ್ಯಕ್ಕೆ ಹೊಂದಿ ಊರುಗೋಲು, ವಾಕರ್‍ಗಳು, ಗಾಲಿಕುರ್ಚಿ, ಶ್ರವಣ ಸಾಧನ, ಕೃತಕ ದಂತ, ಕನ್ನಡಕಗಳು ಹೀಗೆ ಅನೇಕ ರೀತಿಯ ಸಾಧನಗಳನ್ನು ವಿತರಿಸಲಾಗುವುದು.
ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ 2017ರಲ್ಲಿ ಆರಂಭಿಸಿದ ರಾಷ್ಟ್ರೀಯ ವಯೋಶ್ರೀ ಯೋಜನೆ ಮತ್ತು ದಿವ್ಯಾಂಗರಿಗೆ ಅನುಕೂಲ ಸಾಧನಗಳನ್ನು ನೀಡುವ (ADIP & RVY) ಎಂಬ ಯೋಜನೆಯ ಅಡಿಯಲ್ಲಿ ಕೇಂದ್ರ ಸರಕಾರದ ಸಹಭಾಗಿತ್ವದ ಅಲಿಮ್‍ಕೊ ಎನ್ನುವ ಸಾರ್ವಜನಿಕ ಕ್ಷೇತ್ರದ ಕಂಪನಿಯ ತಯಾರಿಕೆಯ ಉತ್ತಮ ಗುಣಮಟ್ಟದ ಸಾಧನಗಳನ್ನು ವಿತರಿಸಲಾಗುವುದು. ಕೇಂದ್ರ ಸರಕಾರದ ಸಾಮಾಜಿಕ ನ್ಯಾಯ ಹಾಗೂ ಸಶಕ್ತೀಕರಣ ಖಾತೆಯ ಯೋಜನೆಯಡಿ ಜಿಲ್ಲಾ ಆಡಳಿತ ಈ ಶಿಬಿರವನ್ನು ಆಯೋಜಿಸಿದೆ.
ಈ ಕಾರ್ಯಕ್ರಮಕ್ಕೆ ಕೇಂದ್ರ ಸರಕಾರದ ಸಾಮಾಜಿಕ ನ್ಯಾಯ ಹಾಗೂ ಸಶಕ್ತೀಕರಣ ಖಾತೆಯ ರಾಜ್ಯ ಸಚಿವ ಕೃಷ್ಣಪಾಲ ಗುರ್ಜರ ಹಾಗೂ ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ಅನಂತಕಕುಮಾರ ಹೆಗಡೆಯವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಅರ್ಹ ದಿವ್ಯಾಂಗರಿಗೆ ಅಗತ್ಯ ಸಲಕರಣೆಗಳನ್ನು ವಿತರಿಸಲಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.