ಸುವಿಚಾರ

ಅತಿದಾನಾದ್ಬಲಿರ್ಬದ್ಧೋ ಹ್ಯತಿಮಾನಾತ್ಸುಯೋಧನಃ |

ವಿನಷ್ಟೋ ರಾವಣೋ ಲೌಲ್ಯಾದತಿಸರ್ವತ್ರ ವರ್ಜಯೇತ್ ||

ತೀರಾ ಅತಿಯೆನ್ನಿಸುವಂಥದು ಯಾವ ಬಗೆಯಲ್ಲೇ ನಮ್ಮಲ್ಲಿದ್ದರೂ ಸರಿ, ಅದನ್ನು ತೊರೆಯಲೇ ಬೇಕು. ದಾನ ಎಂಬುದೊಂದು ಒಳ್ಳೆಯ ಶೀಲ, ಲೋಕವು ಮೆಚ್ಚುವಂಥಾ ಸದ್ಗುಣ ಅದು. ದಾತಾ ಭವತಿ ವಾ ನ ವಾ ಅಂತ ಸುಭಾಷಿತವೇ ದಾನಿಯನ್ನು ಪ್ರಶಂಸೆ ಮಾಡುತ್ತದೆ. ಆದರೂ ಅತಿಯಾದ ದಾನದಿಂದಾಗಿ ಬಲಿ ಚಕ್ರವರ್ತಿ ಪಾತಾಳಕ್ಕೆ ತಳ್ಳಲ್ಪಟ್ಟ. ಸ್ವಾಭಿಮಾನ- ಅದೂ ಒಳ್ಳೆಯದೇ. ಕ್ಷತ್ರಿಯನಿಗಂತೂ ಒಂದಂಗುಲ ಹೆಚ್ಚೇ ಇದ್ದರೂ ಶೋಭೆಯೇ ಆ ಗುಣ. ಆದರೆ ಮಿತಿ ಮೀರಿದರೆ ಅದೂ ಕೂಡ ವಿನಾಶಕಾರಿ, ಉದಾಹರಣೆಗೆ ದುರ್ಯೋಧನ ನಮ್ಮ ಕಣ್ಣೆದುರಿದ್ದಾನೆ. ದ್ರೌಪದಿ ನಕ್ಕಳೆಂದ ಮಾತ್ರಕ್ಕೆ ಆಕೆಯ ಸೆರಗು ಹಿಡಿದೆಳೆಯುವ ’ಅತಿ’ಗೆ ಆತ ಹೋಗಬಾರದಿತ್ತು. ಇನ್ನು ರಾವಣನ ಉದಾಹರಣೆಯಂತೂ ಅತಿಯಾದ ಸುಖಲೋಲುಪತೆಗೆ ಒದಗುವಂಥದು. ತೆಳು ಹೊಟ್ಟೆಯ ಸುಂದರಿ, ಪರಮ ಪತಿವ್ರತೆ ಮಂಡೋದರಿಯಂಥಾ ಹೆಂಡತಿಯಿದ್ದೂ ಕೆಂಡದಂಥಾ ಸೀತೆಯನ್ನು ಬಯಸಿದ ಅತಿವರ್ತನೆಯಿಂದಾಗಿ ಕೊನೆಯಾದ. ಹಾಗಾಗಿ ಅತಿಯೆಂಬುದೆಲ್ಲೇ ಇದ್ದರೂ ಅದರಿಂದ ದೂರವಿರುವುದು ಒಳಿತು.

– ಶ್ರೀ ನವೀನ ಗಂಗೋತ್ರಿ

Categories: ಸುವಿಚಾರ

Leave A Reply

Your email address will not be published.