ರೈಲಿನ ವಿಷ್ಯದಲ್ಲಿ ಶಿರಸಿಗರಿಗೆ ಸಿಕ್ತು ಗುಡ್ ನ್ಯೂಸ್.. !

ಶಿರಸಿ: ಹಲವಾರು ದಶಕಗಳ ನಂತರ ಘಟ್ಟದ ಮೇಲಿನ ಜನತೆಯ ಹೆಬ್ಬಯಕೆ ಈಡೇರುವ ಹಂತಕ್ಕೆ ಬಂದಿರುವಂತೆ ತೋರುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ವ್ಯಾಪಾರಿ ಕೇಂದ್ರವಾಗಿರುವ ಶಿರಸಿಗೆ ರೈಲು ಸಂಪರ್ಕ ಬರಬೇಕೆಂಬುದು ಇಲ್ಲಿನ ಜನತೆಯ ಪ್ರಮುಖ ಆಗ್ರಹವಾಗಿತ್ತು. ಆ ನಿಟ್ಟಿನಲ್ಲಿ ಈಗ ಒಂದು ಹಂತಕ್ಜೆ ಹಸಿರು ನಿಶಾನೆ ದೊರಕಿದಂತಾಗಿದೆ. ಹಾವೇರಿ-ಶಿರಸಿ ರೈಲು ಮಾರ್ಗದ ಟ್ರಾಫಿಕ್ ಸರ್ವೆ ಕುರಿತಾಗಿ, ಸೌಥ್ ವೆಸ್ಟರ್ನ್ ರೇಲ್ವೆ ಇಲಾಖೆಯು ತನ್ನ ಅಫಿಶಿಯಲ್ ವೆಬ್ಸೈಟ್ನಲ್ಲಿ ಪ್ರಕಟಿಸಿದೆ. ಹಾವೇರಿ-ಶಿರಸಿ ರೈಲು ಮಾರ್ಗದ ಟ್ರಾಫಿಕ್ ಸರ್ವೆ ವರದಿಗೆ ಅನುಮೋದನೆ ದೊರತಿದೆ. ಈ ರೈಲು ಮಾರ್ಗಕ್ಕೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಫಿಸಿಕಲ್ ಸರ್ವೆ ಮುಗಿದಿದ್ದು, ವರದಿಯು ಅಂತಿಮಗೊಳ್ಳುತ್ತಿದೆ ಎಂಬ ಅಧಿಕೃತ ಮಾಹಿತಿ ನಂಬಲರ್ಹ ಮೂದಿಂದ ತಿಳಿದುಬಂದಿದೆ.
ಹಾವೇರಿ-ಶಿರಸಿ ರೈಲು ಮಾರ್ಗಕ್ಕೆ ಯಾಕಿಷ್ಟು ಬೇಡಿಕೆ:
ಈಗಾಗಲೇ ಜಿಲ್ಲೆ ಕರಾವಳಿ ಭಾಗಕ್ಕೆ ರೈಲಿನ ಸಂಪರ್ಕ ನಿರಂತರವಾಗಿದೆ. ಆದರೆ ಘಟ್ಟದ ಮೇಲಿನ ಆರು ತಾಲೂಕುಗಳಿಗೆ ಮಾತ್ರ ರೈಲು ಸಾರಿಗೆ ಇಲ್ಲದಿರುವುದು ಜನರಿಗೆ ತೀರಾ ಸಂಕಷ್ಟಕ್ಕೆ ಈಡು ಮಾಡಿದೆ. ಜಿಲ್ಲೆಯ ಪ್ರಮುಖ ವ್ಯಾಪಾರಿ ಕೇಂದ್ರವಾಗಿ ಬೆಳೆದಿರುವ ಶಿರಸಿಗೆ ರೈಲು ಸಂಪರ್ಕ ಇಲ್ಲದಿರುವುದು ಅಭಿವೃದ್ಧಿಯ ದೃಷ್ಟಿಯಿಂದ ಸ್ವಲ್ಪ ಹಿನ್ನಡೆಯಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈಗಾಗಲೇ ಸಿದ್ದಾಪುರ-ತಾಳಗುಪ್ಪ ರೈಲು ಮಾರ್ಗದ ಯೋಜನೆ ಸರಕಾರದ ಮಟ್ಟದಲ್ಲಿದ್ದರೂ, ಅದರಿಂದ ಹೆಚ್ಚೇನು ಉಪಯುಕ್ತತೆಯನ್ನು ನಿರೀಕ್ಷೆ ಮಾಡುವಂತಿಲ್ಲ. ಏಕೆಂದರೆ ರೈಲು ಮಾರ್ಗವನ್ನು ಯೋಜಿಸುವಾಗ ಇಲಾಖೆಗಳು ಅದರ ನಿರ್ಮಾಣ ಮತ್ತು ನಿರ್ವಹಣೆಯ ವೆಚ್ಚವನ್ನು ಗಮನದಲ್ಲಿಟ್ಟುಕೊಂಡು ಆಯಾ ಪ್ರದೇಶದ ಜನರ ಬೇಡಿಕೆಗೆ ಅನುಗುಣವಾಗಿ ನಿರ್ಮಿಸುತ್ತವೆ. ಜೊತೆಗೆ ಅಲ್ಲಿನ ಅರಣ್ಯನಾಶ ಮತ್ತು ಹೊಸ ಸೇತುವೆಗಳ ನಿರ್ಮಾಣ ಸೇರಿದಂತೆ ಹಲವಾರು ಮೂಲಭೂತ ವಿಷಯಗಳನ್ನು ಒಳಗೊಂಡಿರುತ್ತದೆ. ಹುಬ್ಬಳ್ಳಿ ಅಂಕೋಲಾ ರೈಲು ಮಾರ್ಗಕ್ಕೆ ಹೆಚ್ಚಿನ ಪ್ರಮಾಣದ ಅರಣ್ಯ ನಾಶವಾಗುತ್ತದೆ ಎಂಬ ವಿರೋಧಗಳು ಸಾಕಷ್ಟು ಕೇಳಿ ಬರುತ್ತಿವೆ. ಜೊತೆಗೆ ಆ ಮಾರ್ಗದ ನಿರ್ಮಾಣ ವೆಚ್ಚವೂ ಸಹ ಅಧಿಕವೆನ್ನುವುದು ಅಭಿಪ್ರಾಯ. ಈ ಎಲ್ಲ ವಿಷಯಗಳ ಹಿನ್ನೆಯಲ್ಲಿ ಹಾವೇರಿ – ಶಿರಸಿ ರೈಲು ಮಾರ್ಗ ಪರಿಸರ ಉಳಿವಿನ ಕಾಳಜಿ, ಕಡಿಮೆ ನಿರ್ಮಾಣದ ವೆಚ್ಚ, ವ್ಯಾಪಾರ ಕೇಂದ್ರಗಳಿಗೆ ವೇಗದ ಸಂಪರ್ಕ ಸೇರಿದಂತೆ ಹಲವಾರು ದೃಷ್ಟಿಯಿಂದ ಇದು ಹೆಚ್ಚು ಅನುಕೂಲವಾದಂತಿದೆ.
ಹಾವೇರಿ-ಶಿರಸಿ ರೈಲು ಮಾರ್ಗಕ್ಕಾಗಿ ಜನರೇನು ಮಾಡಬಹುದು..?
ಈಗ ಸರ್ವೇ ರಿಪೊರ್ಟಿನಲ್ಲಿ ಅನುಮೋದನೆ ದೊರೆತಿರುವುದರಿಂದ ಮುಂದಿನ ಹಂತದಲ್ಲಿ ಈ ಯೋಜನೆಗಳ ಅನುಷ್ಟಾನ ಈ ಭಾಗದ ರಾಜಕೀಯ ನಾಯಕರ ದೂರದೃಷ್ಟಿ ಮತ್ತು ಇಚ್ಛಾಶಕ್ತಿಯ ಮೇಲೆ ಅವಲಂಬಿತವಾಗಿದೆ. ಯಾಕೆಂದರೆ ಕೇವಲ ಸಾಮಾನ್ಯ ಜನತೆಯ ಕೂಗು ಸರಕಅರಕ್ಕೆ ಕೇಳಿಸುವುದಕ್ಕಿಂತ ಜನಪ್ರತಿನಿಧಿಗಳ ಮೂಲಕ ಬಂದರೆ ಹೆಚ್ಚು ಪರಿಣಾಮಕಾರಿ. ಆ ನಿಟ್ಟಿನಲ್ಲಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹಾಗು ಸ್ಥಳೀಯ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಯ ಮೇಲೆ ಜನರ ನಿರೀಕ್ಷೆ ಬಹಳಷ್ಟಿದೆ. ಈಗಲಾದರೂ ಜವಾಬ್ದಾರಿಯಿಂದ ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಲಿ ಎಂಬುದು ಜನತೆಯ ಆಗ್ರಹವಾಗಿದೆ.
ಈ ಭಾಗದ ಪ್ರಮುಖ ಬೆಳೆಯಾಗಿರುವ ಅಡಿಕೆ-ಕಾಳುಮೆಣಸುಗಳು ಈಗ ಬಹುತೇಕ ರಸ್ತೆ ಮೂಲಕವಾಗಿಯೇ ಸಾಗಾಟವಾಗುತ್ತಿದೆ. ಇದರಿಂದಾಗಿ ಸಮಯದ ವ್ಯಯ ಹಾಗು ಹೆಚ್ಚು ಸಾಗಾಟ ವೆಚ್ಚವನ್ನು ವ್ಯಾಪಾರಿಗಳು ಅನುಭವಿಸುವಂತಾಗಿದೆ. ಒಂದು ವೇಳೆ ಈ ಭಾಗಕ್ಕೆ ರೈಲು ಸಂಪರ್ಕ ಏರ್ಪಟ್ಟರೆ ಅದರ ಸಮಸ್ಯೆ ನಿವಾರಣೆಯಾಗುವುದರಲ್ಲಿ ಎರಡು ಮಾತಿಲ್ಲ. ಈ ನಿಟ್ಟಿನಲ್ಲಿ ವರ್ತಕ ಸಂಘಗಳು, ಚೇಂಬರ್ ಆಫ್ ಕಾಮರ್ಸ್ ಗಳು ಸಂಘಟಿತವಾಗಿ ಹೆಚ್ಚು ಒತ್ತಡ ಹಾಕುವ ಅನಿವಾರ್ಯವಿದೆ.
ಹಬ್ಬ-ಹರಿದಿನಗಳು ಬಂತೆಂದರೆ ಸಾಕು, ಪರವೂರಿನಲ್ಲಿರುವ ಈ ಭಾಗದ ಜನರ ಪರದಾಟ ಹೇಳ ತೀರದು. ಒಂದು ಕಡೆ ಊರಿಗೆ ಬರಬೇಕೆಂಬ ಬಯಕೆ ಇದ್ದರೂ, ಗಗನಕ್ಕೆ ಮುಟ್ಟುವ ಬಸ್ಸಿನ ದರಗಳ ಕಾರಣದಿಂದಾಗಿ ತಿರುಗಾಟದ ಸಹವಾಸವೇ ಬೇಡ ಎನಿಸುವುದು ಸುಳ್ಳಲ್ಲ. ಹಾವೇರಿ-ಶಿರಸಿ ರೈಲು ಸಂಪರ್ಕ ಏರ್ಪಟ್ಟರೆ ಈ ಎಲ್ಲ ಸಮಸ್ಯೆಗಳು ಒಂದು ಹಂತಕ್ಕೆ ಕಡಿಮೆಯಾಗುವುದರಲ್ಲಿ ಸಂಶಯವಿಲ್ಲ.
ರಾಷ್ಟ್ರಕ್ಕೆ-ರಾಜ್ಯಕ್ಕೆ ಜಿಲ್ಲೆಯ ಕೊಡುಗೆ ಅಪಾರ;ಅಭಿವೃದ್ಧಿಯಲ್ಲಿ ಮಾತ್ರ ಸಣ್ಣ ಲೆಕ್ಕಾಚಾರ
ಜಿಲ್ಲೆಯ ಒಟ್ಟಾರೆ ಚಿತ್ರಣವನ್ನು ಪರಿಗಣನೆಗೆ ತಂದಾಗ ಕೈಗಾ ಅಣುಸ್ಥಾವರ, ಸೀಬರ್ಡ್ ನೌಕಾನೆಲೆ ಸೇರಿದಂತೆ ಹಲವಾರು ದೊಡ್ಡ ದೊಡ್ಡ ಯೋಜನೆಗಳಿಗೆ ಇಲ್ಲಿಯ ಜನ ತ್ಯಾಗ ಮಾಡಿದ್ದಾರೆ. ಆದರೆ ಅರಣ್ಯ ನಾಶ ಎಂಬ ಕಾರಣವನ್ನಿಟ್ಟುಕೊಂಡು ಇಲ್ಲಿ ಯಾವುದೇ ತರಹದ ಅಭಿವೃದ್ಧಿ ಪರ ಯೋಜನೆಗಳ ಅನುಷ್ಟಾನ ಎಳ್ಳಷ್ಟೂ ಆಗಿರದಿರುವುದು ಇಲ್ಲಿನ ಜನರ ದುರದೃಷ್ಟಕರ ಮತ್ತು ನಾಯಕರ ಇಚ್ಛಾಶಕ್ತಿ ಕೊರೆತೆಗ ಹಿಡಿದ ಕೈಗನ್ನಡಿ ಎಂಬುದಂತೂ ಬಹಿರಂಗ ಸತ್ಯ.
ಜನತೆಯ ಆಗ್ರಹ-ಸ್ಪಂದನೆ ಹೇಗಿದ್ದರೆ ಚೆನ್ನ..?
ರಾಜ್ಯದ ಇತರ ಜಿಲ್ಲೆಗೆ ಹೋಲಿಸಿದರೆ ಶಿರಸಿ ಸೇರಿದಂತೆ ಜಿಲ್ಲೆಯ ಜನ ತೀರಾ ಸೌಮ್ಯ. ತಮ್ಮ ತಮ್ಮ ಕಾರ್ಯದ ಹೊರತಾಗಿ ಇನ್ಯಾವುದೇ ದೊಡ್ಡ ಪ್ರಮಾಣದ ಹೋರಾಟಗಳಲ್ಲಿ ತೊಡಗಿಸಿಕೊಳ್ಳುವಿಕೆ ತೀರಾ ಕಡಿಮೆ. ಇದಕ್ಕೆ ತಾಜಾ ಉದಾಹರಣೆ ಎಂದರೆ ಶಿರಸಿ ಜಿಲ್ಲೆ ವಿಚಾರ. ಹಾಗಾಗಿ ಈ ವಿಷಯದಲ್ಲಾದರೂ ಜನತೆಯಿಂದ ಸಾಮಾಜಿಕವಾಗಿ ಹೆಚ್ಚಿನ ರೀತಿಯಲ್ಲಿ ಸ್ಪಂದನೆ ದೊರೆತೆಂದರೆ ನಾಯಕರುಗಳಿಗೆ ತುಸು ಸಲೀಸು. ಮತ್ತು ಇದರಿಂದಾಗಿ ಸರಕಾರದಲ್ಲಿ ನಿರ್ಣಯ ತೆಗೆದುಕೊಳ್ಳುವವರ ಮೇಲೆ ಪರಿಣಾಮ ಬೀರಬಲ್ಲದು. ಹಾಗಾಗಿ ಸಾರ್ವಜನಿಕರು ಹೆಚ್ಚು ಎಚ್ಚರಾದಷ್ಟು ಶಿರಸಿಯಲ್ಲೊಂದು ರೈಲು ನಿಲ್ದಾಣವನ್ನು ಬಲು ಬೇಗನೇ ಕಾಣಬಹುದಾಗಿದೆ.

Categories: ಜಿಲ್ಲಾ ಸುದ್ದಿ

1 Comment

 1. ಸರ್ ನಮಸ್ತ್ಯೇ.
  ನನ್ನ ಹೆಸರು :-ಮನೋಜ್ ಮೂಡಿ
  ಉರು:-ದಾಸನಕೊಪ್ಪ(ಕೋಟೆ)
  ತಾಲ್ಲೂಕು:-ಶಿರಸಿ
  ಜಿಲ್ಲಾ:-ಉತ್ತರ ಕನ್ನಡ

  ಬೇಕು ಸರ್ ರೈಲ್ವೆ ತುಂಬಾ ಮುಕ್ಯ ವಾಗಿದೆ. ಸರ್ ರೈತರಿಗೂ ಪರದಾಡುವ ಅವಶ್ಯಕತೆ ಇರುವುದಿಲ್ಲ. ಜನರಿಗೂ ತೊಂದರೆ ಇರುವುದಿಲ್ಲ. ಸಂಚಾರಿಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಬೇಕು ಅಂದ್ರೆ ಬಸ್ ಅಲ್ಲಿ ಜಾಗ ಇರುದಿಲ್ಲ. ಸರ್ ಹುಬ್ಬಳ್ಳಿ ಮತ್ತು ಹಾವೇರಿ ಕಡೆಗೆ ಹೊಗೂ ಪ್ರಯಾಣಿಕರು ತುಂಬಾ ಕಷ್ಟ ಪಡುತ್ತಾರೆ. ಸರ್ ನಮ್ಮ್ ತಾಲ್ಲೂಕು ಒಂದು ಕಡೆ ಇಂದ ಹೆಸರು ಪಡ್ಕೊಳ್ತಾ ಬರುತ್ಯೆ.ಸರ್ ನಿಮ್ಮಲ್ಲಿ ನನ್ನ ಒಂದು ಮನವಿ ಸರ್ ದಯವಿಟ್ಟು ನಡೆಸಿ ಕೊಡಿ. ನಮ್ಮ ತಾಲ್ಲೂಕಿನಲ್ಲಿ ಒಂದು ಮೆಡಿಕಲ್ ಕಾಲೇಜ್ ಇಲ್ಲಾ ವಿದ್ದ್ಯಾರ್ಥಿ ಗಳು ಕಸ್ಟ್ ಪಡ್ತಾ ಇದರೆ.ಸರ್ ನಮ್ಮ ಊರಲ್ಲಿ ಒಂದು ಕಾಲೇಜ್ ಇಲ್ಲಾ ಬಡವರು ಮಕ್ಕಳನ್ನ ಓದಿಸಬೇಕು ಅಂತಾ ತುಂಬಾ kasta ಪಡ್ತಾರೆ ಆದ್ರೆ ನಮ್ಮ್ ತಾಲ್ಲೂಕು ಅಲ್ಲಿ ಗೋರ್ಮೆಂಟ್ ಕಾಲೇಜ್ ಕೂಡ ತುಂಬಾ ಕಡಿಮೆ. ನಮ್ಮ್ ಊರ ಎಸ್ ಎಸ್ ಎಲ್ ಸಿ ಆಯಿತು ಅಂದ್ರೆ ಪಾಲಕರಿಗೆ ಸಂಕಟ ಪ್ರಾರಂಭ್ ಆಗುತ್ಯೆ ಅಲ್ಲಿ ಫಿಜು ಡ್ರೆಸ್ ಬಸ್ ಪಾಸ್ ದುಡ್ಡು ಒಟ್ಟು ಮಾಡೋದ್ರಲ್ಲಿ ಸಕಗ್ತಾರೆ…. ಸರ್ ತುಂಬಾ ವಿದ್ಯಾರ್ಥಿಗಳು sslc ಆದ್ಮೇಲೆ ಕೂಲಿ ಕೆಲಸಕ್ಕೆ ಹೋಗ್ತಾ ಇದರೆ

  Reply

Leave A Reply

Your email address will not be published.