ಸಂಶೋಧನೆಗಳು ಜನಮುಖಿಯಾಗಿರಬೇಕು :ಎಸ್.ಯೋಗೇಶ್ವರ


ಕಾರವಾರ : ಸಂಶೋಧನೆಗಳು ಜನಮುಖಿಯಾಗಿರಬೇಕು. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಸಂಶೋಧನೆಯನ್ನು ವೈಜ್ಞಾನಿಕವಾಗಿ ನಿರೂಪಿಸಬೇಕೆಂದು ಎಂದು ಕಾರವಾರ ನಗರಸಭೆ ಪೌರಾಯುಕ್ತ ಎಸ್.ಯೋಗೇಶ್ವರ್ ಅಭಿಪ್ರಾಯಪಟ್ಟರು.
ನಗರದ ಕನ್ನಡ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸರಕಾರಿ ಮಹಿಳಾ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ರವಿವಾರ ನಡೆದ ಸಂವಾದ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಸಂಶೋಧನೆ ಹಾಗೂ ಹೊಸ ದಿಕ್ಕು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ಸಂಶೋಧನೆಗೆ ಇಂತಹದೇ ನಿರ್ದಿಷ್ಟ ವಿಷಯ ಬೇಕಾಗಿಲ್ಲ.ಜನಸಾಮಾನ್ಯರ ಒಟ್ಟಾರೆ ಜೀವನ ಕ್ರಮ,ಕಾಡಿನಲ್ಲಿ ಅಥವಾ ಗಿರಿಕಂದರಗಳಲ್ಲಿ ವಾಸಿಸುವ ಕೆಲ ಜನಾಂಗದವರ ಜೀವನ ಪದ್ಧತಿ,ಮಾರುಕಟ್ಟೆ ವ್ಯವಹಾರ,ಸಾಮಾಜಿಕ ಆರ್ಥಿಕ ಸ್ಥಿತಿಗತಿ,ವ್ಯಕ್ತಿಗತ ಸಾಧನೆ, ಸಾಹಿತ್ಯಿಕ ಹೀಗೆ ಹಲವಾರು ಕ್ಷೇತ್ರಗಳ ವಿಷಯಗಳನ್ನು ಹಿಡಿದು ಸಂಶೋಧನೆ ನಡೆಸಬಹುದು. ಸಂಶೋಧನೆಗೆ ಮುಖ್ಯವಾಗಿ ಪ್ರಶ್ನೋತ್ತರ,ಸಂದರ್ಶನ ಹಾಗೂ ಪರೋಕ್ಷ ಅಥವಾ ಅಪರೋಕ್ಷವಾಗಿ ಮಾಹಿತಿ ಕಲೆ ಹಾಕುವುದು ಮುಖ್ಯವಾಗುತ್ತದೆ.ಕಲೆಹಾಕಿದ ದತ್ತಾಂಶಗಳನ್ನು ವಿಶ್ಲೇಷಣೆ ಮೂಲಕ ಒರೆಗೆ ಹಚ್ಚಬೇಕಾಗುತ್ತದೆ. ಈ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ ಸರಿಯಾದ ವಿಶ್ಲೇಷಣೆ ಮಾಡಿದಾಗ ನಿಜವಾದ ಫಲಿತಾಂಶ ಪಡೆಯಲು ಸಾಧ್ಯ. ಒಬ್ಬ ಸಂಶೋಧಕನ ಸಾಮಾಜಿಕ ಜವಾಬ್ದಾರಿ ಹೆಚ್ಚಾಗಿದ್ದು, ಈ ದಿಸೆಯಲ್ಲಿ ಜಾಗರೂಕರಾಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ ಎಂದರು.
ಹಳೆಯ ಮಾನದಂಡಗಳನ್ನು ಬದಿಗಿರಿಸಿ ಸಂಶೋಧನೆ ಹೊಸ ದಿಕ್ಕಿನೆಡೆ ಹೊರಳುತ್ತಿದ್ದು, ಆಧುನಿಕ ಪ್ರಪಂಚದಲ್ಲಿ ಹೊಸ ಸಂಶೋಧನೆಗಳು ಸಮಾಜಕ್ಕೆ ಅಲ್ಲದೇ ಸರಕಾರಕ್ಕೆ ಒಳ್ಳೆಯ ಮಾರ್ಗದರ್ಶಕಗಳಾಗಿವೆ. ಹಿಂದೆ ತಾನು ಉದ್ಯೋಗಕ್ಕಾಗಿ ಅಲೆಯುತ್ತಿದ್ದಾಗ,ತಾನು ಮಾಡಿದ ಸಂಶೋಧನೆಯೇ ಸರಕಾರದ ಉನ್ನತ ಹುದ್ದೆ ಅಲಂಕರಿಸಲು ಸಹಕಾರಿಯಾಯಿತು. ಯಲ್ಲಾಪುರದ ದಟ್ಟ ಕಾಡಿನಲ್ಲಿ ವಾಸಿಸುವ ಸಿದ್ದಿ ಜನಾಂಗದ ಜೀವನ ಕ್ರಮ ಸೇರಿದಂತೆ, ಒಂದೆರಡು ವಿಷಯಗಳ ಕುರಿತು ಸಂಶೋಧನೆ ನಡೆಸುವ ಸದಾವಕಾಶ ತನಗೆ ದೊರೆಯಿತು. ಸಂಶೋಧನೆಗಾಗಿ ಆ ಜನಾಂಗದವರ ಜೊತೆ ಬಹಳ ದಿನ ಕಾಲ ಕಳೆದು ಅವರ ಜೀವನ ಪದ್ಧತಿ ಅಧ್ಯಯನ ನಡೆಸಿದೆ. ಆ ಸಂಶೋಧನಾ ವರದಿಯು ಸಿದ್ದಿ ಜನಾಂಗಕ್ಕೆ ಸೌಲಭ್ಯ ಕಲ್ಪಿಸಲು ಸರಕಾರಕ್ಕೆ ಸ್ವಲ್ಪ ಮಟ್ಟಿನ ನೆರವಾಯಿತು ಎಂದು ತನ್ನ ಸಂಶೋಧನಾ ಅನುಭವವನ್ನು ಸ್ಮರಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಹಿರಿಯ ಪತ್ರಕರ್ತ ಗಂಗಾಧರ್ ಹಿರೇಗುತ್ತಿ ಮಾತನಾಡಿ, ಸಂಶೋಧನೆ ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂದರು. ತಾಲೂಕು ಕಸಾಪ ಅಧ್ಯಕ್ಷ ನಾಗರಾಜ ಹರಪನಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ ನಾಡಿನ ಸಂಶೋಧನಾ ಕ್ಷೇತ್ರದಲ್ಲಿ ಡಾ.ಎಂ.ಎಂ.ಕಲಬುರ್ಗಿ,ಶಂಭಾ ಜೋಶಿ ಅವರ ಸಂಶೋಧನಾ ಕ್ರಮಗಳನ್ನು ಮಾದರಿಯಾಗಿ ಇಟ್ಟುಕೊಳ್ಳಬೇಕು. ಇತಿಹಾಸದಲ್ಲಿ ಹುದುಗಿ ಹೋದ ಸಂಗತಿಗಳನ್ನು ಹೊರತೆಗೆದು ವರ್ತಮಾನದಲ್ಲಿ ಹೊಸ ಸತ್ಯಗಳನ್ನು ಮಂಡಿಸಬೇಕಿದೆ. ಸಂವಾದ,ಚರ್ಚೆಯ ಮೂಲಕ ಕಹಿ ಸಂಶೋಧನೆಗಳನ್ನು ಸಹಿಸಿಕೊಳ್ಳುವ ವಾತಾವರಣ ನಿರ್ಮಿಸಬೇಕಿದೆ ಎಂದರು.
ಬಳಿಕ ಮಾಸ್ಕೇರಿ ಸಾಹಿತ್ಯದ ಕುರಿತು ಸಂಶೋಧನೆ ನಡೆಸಿ ಡಾಕ್ಟರೇಟ್ ಪದವಿ ಪಡೆದ ಅಶ್ವಿನಿ ನಾಯಕ ಅವರನ್ನು ಸನ್ಮಾನಿಸಲಾಯಿತು.
ಸರಕಾರಿ ಮಹಿಳಾ ಕಾಲೇಜಿನ ಪ್ರಾಚಾರ್ಯ ವಿನಾಯಕ ಗಂಗೊಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗಿರೀಶ್ ನಾಯ್ಕ ಸ್ವಾಗತಿಸಿದರು.ದೀಪಕಕುಮಾರ್ ಶೈಣೈ ವಂದಿಸಿದರು.ಸದಸ್ಯೆ ಫೈರೋಜಾ ಬೇಗಂ ನಿರೂಪಿಸಿದರು.ಈ ಸಂದರ್ಭದಲ್ಲಿ ಹಿರಿಯ ಸದಸ್ಯರಾದ ಖಲೀಲುಲ್ಲಾ,ಕೆ.ಟಿ.ತಾಂಡೇಲ,ಮಚ್ಚೇಂದ್ರ ಮಹಾಲೆ ,ನಜೀರ್ ಶೇಖ್,ಕಡತೋಕ ಮಂಜುನಾಥ್ ನಾಯ್ಕ,ಉದಯಬರ್ಗಿ,ಖೈರುನ್ನೀಸಾ,ಅನುಕಳಸ ಮುಂತಾದವರು ಇದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.