ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನಿಡಬೇಕು :ಶಾಸಕ ಕಾಗೇರಿ

ಶಿರಸಿ : ಶಿರಸಿ, ಸಿದ್ದಾಪುರದಲ್ಲಿ ಸೇರಿದಂತೆ ಉತ್ತರ ಕನ್ನಡ‌ ಜಿಲ್ಲೆಯಲ್ಲಿ ಈ ಬಾರಿ ಅತಿವೃಷ್ಟಿಯಾಗಿದೆ. ಆದ ಕಾರಣ ಸರ್ಕಾರ ಹೆಚ್ಚಿನ ಜವಾಬ್ದಾರಿ ವಹಿಸಿ, ಜಾನುವಾರು, ಮನೆಗಳಿಗೆ, ಮನುಷ್ಯರಿಗೆ ಹೆಚ್ಚಿನ ಹಾನಿ ಪರಿಹಾರವನ್ನು ಒದಗಿಸಿಕೊಡಬೇಕು ಹಾಗೂ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನಿಡಬೇಕು ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಒತ್ತಾಯಿಸಿದರು.
ಇಲ್ಲಿನ ಮಿನಿ ವಿಧಾನಸೌಧದಲ್ಲಿ ಸೋಮವಾರ ಪ್ರಕೃತಿ ವಿಕೋಪದ ಹಾಗೂ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ತಾಲೂಕಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ರಸ್ತೆ , ಸಿಡಿ , ಕಾಲಿಸಂಕ ನಿರ್ಮಾಣಕ್ಕೆ ಸರ್ಕಾರ ಇದುವರೆಗೆ ಯಾವುದೇ ರೀತಿಯ ಅನುದಾನ ಕೊಟ್ಟಿಲ್ಲ. ಕೇವಲ ೫೦ ಲಕ್ಷ ರೂ. ಹಣವನ್ನು ಮೀಸಲಿಡಲಾಗಿದೆ. ಆದರೆ‌ ಮುಖ್ಯಮಂತ್ರಿ ಗಳು ಮಲೆನಾಡಿಗೆ ಭೇಟಿ ನೀಡಿ ಕಾಲುಸಂಕದ ಅಭಿವೃದ್ಧಿ ಮಾಡುತ್ತೇನೆ ಎಂದು ಭರವಸೆ ನೀಡಿದ್ದರು. ಅವರು ಕೂಡಲೇ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ಕಾಲು ಸಂಕ ಅಭಿವೃದ್ಧಿ ಮಾಡಬೇಕು ಎಂದು ಆಗ್ರಹಿಸಿದರು.
ಮಳೆಯ ಮಾಪನದ ಅಂಕಿಸಂಖ್ಯೆ ಒಂದೊಂದು ಇಲಾಖೆಯದ್ದು ಒಂದೊಂದು ತರಹದ ಮಾಹಿತಿ ದಾಖಲಾಗುತ್ತದೆ. ಇದರಿಂದ ಹವಾಮಾನ ಆಧಾರಿತ ಬೆಳೆವಿಮೆ ಸೇರಿದಂತೆ ವಿವಿಧ ಸೌಲಭ್ಯ ಪಡೆಯುವುದಕ್ಕೆ ರೈತರಿಗೆ ತೊಂದರೆಯಾಗಿದೆ. ಇಂತಹ ದೋಷ ನಿವಾರಣೆಗೆ ಕ್ರಮ ಕೈಗೊಂಡು ನೈಜ ಮಾಹಿತಿ ಸಲ್ಲಿಕೆಯಾಗುವಂತಾಗಬೇಕು ಎಂದು ಸೂಚಿಸಿದರು.
ತಾಲೂಕಿನಲ್ಲಿ ಕಳೆದ ಜೂನ್ ಹಾಗು ಜುಲೈ ತಿಂಗಳಲ್ಲಿ ಶೇ 40ರಷ್ಟು ಹೆಚ್ಚಿನ ಮಳೆಯಾಗಿದೆ. ಜೂನ್ ತಿಂಗಳಲ್ಲಿ 649ಮಿಮೀ ಮಳೆಯಾಗಿದ್ದು ಜುಲೈ ತಿಂಗಳಲ್ಲಿ 885ಮಿಮೀ ಮಳೆ ಬಿದ್ದಿದೆ ಎಂದು ಸಹಾಯಕ ಕೃಷಿ ಅಧಿಕಾರಿ ಕೆ.ವಿ.ಕೂರ್ಸೆ ಮಾಹಿತಿ ನೀಡಿದರು.
ಲೋಕೋಪಯೋಗಿ, ಹೆಸ್ಕಾಂ ಹಾಗೂ ಅರಣ್ಯ ಇಲಾಖೆಯವರು ಸೇರಿ ಬಿದಿರು ಕಟಿಂಗ್ ಮಾಡಬೇಕು‌. ಲೋಕೋಪಯೋಗಿ ಇಲಾಖೆಯವರು ನಿಲೇಕಣಿ ಬಳಿ ಹೊಂಡ ಮುಚ್ಚುವ ಕೆಲಸ ಮಾಡಬೇಕು ಹಾಗೂ ಕೆ.ಎಸ್.ಆರ್.ಟಿ.ಸಿ ಯವರು ಬನವಾಸಿ ಮತ್ತು ಹೊಸ ಬಸ್ ನಿಲ್ದಾಣದ ಬಳಿ ಆಗಿರುವ ಹೊಂಡವನ್ನು ಶೀಘ್ರದಲ್ಲೇ ಮುಚ್ಚಬೇಕು ಎಂದು ಆದೇಶಿಸಿದ ಅವರು , ಇಲಾಖೆಗಳು ಜನರ ಜೀವದ ಜೊತೆ ಆಟ ಆಡಬಾರದು. ಹೊರಗಿನಿಂದ ಬಂದವರಿಗೆ ಇಲ್ಲಿನ ರಸ್ತೆಗಳ ಬಗ್ಗೆ ಕಲ್ಪನೆ ಇರುವುದಿಲ್ಲ. ಅಪಘಾತಗಳು ಆಗದಂತೆ ನಾವು ನೋಡಿಕೊಳ್ಳಬೇಕು ಎಂದು ತಿಳಿಸಿದರು.
ವಿದ್ಯುತ್ ಸಮಸ್ಯೆಗಳನ್ನು ಶೀಘ್ರದಲ್ಲೇ ಬಗೆಹರಿಸಬೇಕು ಎಂದು ಸೂಚಿಸಿದ ಅವರು, ಮಳೆಗಾದಲ್ಲಿ ಹೋದ ಕಂಬಗಳನ್ನು ರಿಪ್ಲೇಸ್ ಮಾಡಬೇಕು. ಅಲ್ಲದೇ ಶಿಕ್ಷಣ ಇಲಾಖೆಯವರು ಅಪಾಯದ ಹಂತದಲ್ಲಿರುವ ಶಾಲೆಯಿದ್ದಲ್ಲಿ ಅದನ್ನು ಬೇರೆ ಕಟ್ಟಡಕ್ಕೆ ಸ್ಥಳಾಂತರಿಸಿ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ರಾಜು ಮೊಗವೀರ, ಎಮ್.ಆರ್.ಕುಲಕರ್ಣಿ, ಶ್ರೀಲತಾ ಕಾಳೇರಮನೆ, ಚಂದ್ರು ಎಸಳೆ, ಜಿ.ಎನ್.ಹೆಗಡೆ ಮುರೇಗಾರ, ಬಸವರಾಜ ದೊಡ್ಮನಿ, ಪ್ರದೀಪ ಶೆಟ್ಟಿ, ಅಶ್ವಿನಿ ಬಿ ಎಮ್. ಮುಂತಾದವರು ಇದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.