ನಿಷೇಧಿತ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ: ಜಿಲ್ಲಾಧಿಕಾರಿಗಳಿಗೆ ಪತ್ರ

ಗೋಕರ್ಣ: ರಥ ಬೀದಿಯಲ್ಲಿ ನಿಷೇಧಿತ ಮತ್ತು ರಕ್ಷಿತ ಪ್ರದೇಶದಲ್ಲಿ ಕೈಗೊಂಡಿರುವ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ತೆರವುಗೊಳಿಸುವ ಕುರಿತು ಪುರಾತತ್ವ ಸಂಗ್ರಹಾಲಯಗಳ ಮತ್ತು ಪರಂಪರೆ ಇಲಾಖೆ ಜಿಲ್ಲಾಧಿಕಾರಿಗಳಿಗೆ ಪತ್ರ ರವಾನಿಸಿದೆ. ಇಲ್ಲಿನ ಪ್ರದೀಪ ಗಣಪತಿ ಗಣಿಯನ್ ಇವರು ಸಂರಕ್ಷಿತ ಸ್ಮಾರಕವಾದ ಮಹಾಬಲೇಶ್ವರ ದೇವಾಲಯದ ಬಳಿ ನಿಯಮ ಬಾಹಿರವಾಗಿ ಪುರಾತತ್ವ ಇಲಾಖೆ ಅನುಮತಿ ಪಡೆಯದೆ ಸ್ಥಳೀಯರು ಕಟ್ಟಡ ನಿರ್ಮಾಣ ಮಾಡುತ್ತಿರುವ ಬಗ್ಗೆ ಸರ್ಕಾರಕ್ಕೆ ಸಲ್ಲಿಸಿರುವ ದೂರಿನ ಪ್ರತಿ ಲಗತ್ತಿಸಿ ಅಗತ್ಯ ಕ್ರಮ ಕೈಗೊಳ್ಳಲು ಇಲಾಖೆ ಜಿಲ್ಲಾಧಿಕಾರಿಗಳಿಗೆ ಕಳುಹಿಸಿದೆ.( ಕ್ರಮಾಂಕ : ಆ ಪ್ರಾ ಸಂ ಪ : ಎಸಿಟಿ.6(ಉ)\ಅನುಮತಿ \2018-19\367 ) ಪ್ರತಿಯಲ್ಲಿ, ಶ್ರೀ ಮಹಾಬಲೇಶ್ವರ ದೇವಾಲಯವು ರಾಜ್ಯ ಸಂರಕ್ಷತಿತ ಸ್ಮಾರಕವಾಗಿದ್ದು, ಸಂರಕ್ಷಿತ ಸ್ಮಾರಕದ ಮೊದಲ 100ಮೀ. ವ್ಯಾಪತ್ತಿಯನ್ನು ನಿಷೇಧಿತ ಪ್ರದೇಶವೆಂದು, ತದನಂತರ 200ಮೀ. ಪ್ರದೇಶವನ್ನು ನಿರ್ಭಂಧಿತ ಪ್ರದೇಶವೆಂದೂ, ಒಟ್ಟಾರೆ 300 ಮೀಟರ ಪ್ರದೇಶದಲ್ಲಿ ಯಾವುದೇ ನಿರ್ಮಾಣಗಳಿಗೆ ಅವಕಾಶವಿರುವುದಿಲ್ಲ. ಕರ್ನಾಟಕ ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕಗಳು. ಪುರಾತತ್ವ ಸ್ಥಳಗಳ ಮತ್ತು ಅವಶೇಷಗಳ ಅಧಿನಿಯಮ 1961 ಕಲಂ 20 (1) ಪ್ರಕಾರ ಸಂರಕ್ಷಿತ ಪ್ರದೇಶದ ಒಡೆಯ ಅಥವಾ ಅನಭೋಗದಾರನೂ ಸೇರಿದಂತೆ ಯಾವುದೇ ವ್ಯಕ್ತಿಯು ಸರ್ಕಾರದ ಅನುಮತಿ ಇಲ್ಲದೆ ಸಂರಕ್ಷಿತ ಪ್ರದೇಶದೊಳಗೆ ಯಾವುದೇ ಕಟ್ಟಡ ನಿರ್ಮಿಸತಕ್ಕದಲ್ಲ .ಸ್ಮಾರಕದಿಂದ 200ಮೀ. ನಿಯಂತ್ರಿತ ಪ್ರದೇಶದಲ್ಲಿ ನೂತನ ಕಟ್ಟಡ ನಿರ್ಮಣಕ್ಕೆ ಕಡ್ಡಾಯವಾಗಿ ರಾಜ್ಯ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಮೈಸೂರು ಇವರಿಂದ ನಿರಪೇಕ್ಷಣಾ ಪ್ರಮಾಣಪತ್ರ ಪಡೆಯಬೇಕಾಗುತ್ತದೆ. ಆದರೆ ಈ ಇಲಾಖೆಯಿಂದ ಕಟ್ಟಡ ನಿರ್ಮಾಣ ಕಮಗಾರಿಗೆ ಯಾವುದೇ ಅನುಮತಿ ನೀಡಿರುವುದಿಲ್ಲ. ಆದರೂ ಸ್ಥಳೀಯರು ಈ ಇಲಾಖೆಯ ಅನುಮತಿ ಪಡೆಯದೆ ಸ್ಮಾರಕದ ಹತ್ತಿರ ಕಟ್ಟಡ ನಿರ್ಮಾಣಕ್ಕೆ ಅಡಿಪಾಯ ಹಾಕಿರುವುದು ಕಾನೂನು ಬಾಹಿರ ಎಂದು ತಿಳಿಸಿದೆ. ಆದ್ದರಿಂದ ಹೊಸದಾಗಿ ನಿರ್ಮಾಣ ಮಾಡುತ್ತಿರುವ ಕಟ್ಟಡ ಕಾಮಗಾರಿಯನ್ನು ನಿಲ್ಲಿಸುವಂತೆ ಸಂಬಂಧ ಪಟ್ಟ ಅಧಿಕರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ತಿಳಿಸಿದೆ. ಗೋಕರ್ಣ ಗ್ರಾಮ ಪಂಚಾಯತಿಯಿಂದ ಪರವಾನಿಗೆ ನೀಡುವ ಮುನ್ನ ಈ ಇಲಾಖೆ ಅನುಮತಿ ಪಡೆದ ನಂತರವೇ ನೀಡಿದ ನಂತರವೇ ಗ್ರಾಂ. ಪಂ. ಅನುಮತಿ ನೀಡುವಂತೆ ಸೂಚಿಸಿದೆ. ಈಗಾಗಲೆ ಬಹುಮಹಡಿ ಕಟ್ಟಡಗಳು ನಿರ್ಮಣವಾಗಿದ್ದು ಆ ಬಗ್ಗೆ ಕ್ರಮದ ಕುರಿತು ಉಲ್ಲೇಖವಿಲ್ಲದಿರುವುದರಿಂದ ಯಾವ ರೀತಿ ಕ್ರಮ ತೆಗೆದು ಕೊಳ್ಳುತ್ತಾರೆ ಎಂಬುದು ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದೆ. ಅಲ್ಲದೇ ಈಗಾಗಲೇ ಕಟ್ಟಡ ನಿರ್ಮಿಸಲು ಪರವಾನಿಗೆ ಕೊಟ್ಟವರ ಬಗ್ಗೆ ಏನು ಕ್ರಮ ತೆಗೆದುಕೊಳ್ಳುತ್ತಾರೂ ಅಧವಾ ಕಟ್ಟಡ ತೆರವುಗೊಳಿಸುತ್ತಾರೂ ಕಾದು ನೋಡಬೇಕಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.