ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ವದಂತಿ ಹರಡಿದರೆ ಕಠಿಣ ಕ್ರಮ

ಕಾರವಾರ: ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಇತರೇ ಮಾಧ್ಯಮಗಳಲ್ಲಿ, ರಾಜ್ಯದಲ್ಲಿ ಮಕ್ಕಳ ಅಪಹರಣಕಾರರ ತಂಡಗಳು ಬಂದಿವೆ ಎಂದು ಹರಡುತ್ತಿರುವ ವದಂತಿಗಳ ಹಿನ್ನೆಲೆಯಲ್ಲಿ ಅಪರಿಚಿತ ವ್ಯಕ್ತಿಗಳು ಕಂಡು ಬಂದಲ್ಲಿ ಅವರನ್ನು ಮಕ್ಕಳ ಕಳ್ಳರು ಎನ್ನುವ ಭ್ರಮೆಯಿಂದ ಅವರ ಮೇಲೆ ಹಲ್ಲೆ ಮಾಡಿ ಮಾರಣಾಂತಿಕ ಹಲ್ಲೆ ನಡೆಸಿ ಸಾವು ನೋವುಗಳಿಗೆ ಕಾರಣವಾದ ಘಟನೆಗಳು ರಾಜ್ಯದ ವಿವಿಧೆಡೆ ವರದಿಯಾಗುತ್ತಿವೆ.
ಸಾರ್ವಜನಿಕರು ಮಕ್ಕಳ ಕಳ್ಳರು ಬಂದಿದ್ದಾರೆ ಎನ್ನುವ ಯಾವುದೇ ವದಂತಿಗಳಿಗೆ ಕಿವಿಗೊಡಬಾರದು. ಒಂದೊಮ್ಮೆ ಆ ಕುರಿತು ಏನಾದರೂ ಮಾಹಿತಿ ಲಭಿಸಿದಲ್ಲಿ ಅದರ ಸತ್ಯಾಸತ್ಯತೆಯನ್ನು ಸಮೀಪದ ಪೊಲೀಸ್ ಠಾಣೆಗೆ ತಿಳಿಸಿ ಖಾತ್ರಿಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ಇಲಾಖೆಯ ಸಾರ್ವಜನಿಕ ಸಂಪರ್ಕಾಧಿಕಾರಿಗಳು ತಿಳಿಸಿದ್ದಾರೆ.
ಯಾವುದೇ ಕಾರಣಕ್ಕೆ ಇಂತಹ ಸುಳ್ಳು ವದಂತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಬೇರೆ ರೀತಿಯಿಂದ ಇನ್ನೊಬ್ಬರಿಗೆ ರವಾನಿಸಬಾರದು. ಒಂದೊಮ್ಮೆ ಮಾಹಿತಿ ರವಾನಿಸುವುದು ಅಪರಾಧವಗಿದ್ದು ಸಾರ್ವಜನಿಕರಿಗೆ ಮಕ್ಕಳ ಅಪಹರಣ ಮಾಡಲು ಯಾರಾದರೂ ಬಂದಿದ್ದಾರೆ ಎನ್ನುವ ಮಾಹಿತಿ ಲಭಿಸಿದಲ್ಲಿ ಆ ಮಾಹಿತಿಯನ್ನು ತಕ್ಷಣ ಸಮೀಪದ ಪೊಲೀಸ್ ಠಾಣೆಗೆ, ಸಂಬಂಧಪಟ್ಟ ಬೀಟ್ ಸಿಬ್ಬಂದಿಗೆ ಹಾಗೂ ಜಿಲ್ಲಾ ನಿಸ್ತಂತು ಕೇಂದ್ರದ ಫೋನ್ ನಂಬರ್-100 ಹಾಗೂ 9480805200 ನೇದಕ್ಕೆ ರವಾನಿಸುವಂತೆ ಕೋರಿಕೊಳ್ಳಲಾಗಿದೆ.
ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಮಕ್ಕಳ ಕಳುವಿನ ಮಾಹಿತಿಗಳು ರವಾನೆಯಾಗುತ್ತಿದ್ದಲ್ಲಿ, ಆ ಮಾಹಿತಿಯನ್ನು ಹಾಗೂ ಆ ಮಾಹಿತಿಯನ್ನು ರವಾನೆ (ಶೇರ್) ಮಾಡಿದ ವ್ಯಕ್ತಿಗಳ ಬಗ್ಗೆ ಸಮೀಪದ ಪೊಲೀಸ್ ಠಾಣೆ, ಜಿಲ್ಲಾ ನಿಸ್ತಂತು ಕೇಂದ್ರ ಹಾಗೂ ನಿಸ್ತಂತು ಕೇಂದ್ರದ ವಾಟ್ಸಪ್ ಸಂಖ್ಯೆ: 9480805200 ನೇದಕ್ಕೆ ಮಾಹಿತಿ ನೀಡಲು ಕೋರಲಾಗಿದೆ.
ಮಕ್ಕಳ ಕಳ್ಳರ, ಮಕ್ಕಳ ಕಳುವಿನ ಸುಳ್ಳು ವದಂತಿಯನ್ನು ಸಾಮಾಜಿಕ ಜಾಲತಾಣಗಳ ಮುಖಾಂತರ ಅಥವಾ ಬೇರೆ ರೀತಿಯಲ್ಲಿ ಹರಡುವವರ ಮೇಲೆ ಕಾನೂನಿನಂತೆ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿ ಮಾಹಿತಿಯನ್ನು ರವಾನಿಸಿದ, ಶೇರ್ ಮಾಡಿದ, ಪ್ರಚಾರ ಮಾಡಿದ ಎಲ್ಲಾ ವ್ಯಕ್ತಿಗಳ ಮೇಲೆ ಕಠಿಣ ಕ್ರಮಗೊಳ್ಳಲಾಗುವುದು.
ಒಂದು ವೇಳೆ ಮಕ್ಕಳ ಕಳ್ಳರು ಎನ್ನುವ ನೆಪದಲ್ಲಿ ಯಾವುದೇ ವ್ಯಕ್ತಿಯ ಮೇಲೆ ಹಲ್ಲೆಯಾದಲ್ಲಿ, ಆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಹಾಗೂ ಹಲ್ಲೆಗೆ ಕುರಿತಂತೆ ಸಂಬಂಧಪಟ್ಟ ಎಲ್ಲಾ ವ್ಯಕ್ತಿಗಳ ಮೇಲೆ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು ಎಂದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.