ಆಟೋಚಾಲಕರಿಗೆ ದುಡಿಮೆಯೊಂದಿಗೆ ಸಾಮಾಜಿಕ ಕಳಕಳಿಯೂ ಮುಖ್ಯ: ನ್ಯಾ.ಟಿ.ಗೋವಿಂದಯ್ಯ

 

ಕಾರವಾರ: ಆಟೋ ಚಾಲಕರಿಗೆ ತಮ್ಮ ದುಡಿಮೆಯೊಂದಿಗೆ ಸಾಮಾಜಿಕ ಕಳಕಳಿಯೂ ಮುಖ್ಯ ಎಂದು ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ಟಿ. ಗೋವಿಂದಯ್ಯ ಹೇಳಿದ್ದಾರೆ.
ಜಿಲ್ಲಾ ಕಾರ್ಮಿಕ ಇಲಾಖೆಯ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕ ಸಾಮಾಜಿಕ ಭದ್ರಾತಾ ಮಂಡಳಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಸೇಂಟ್ ಜಾನ್ ಆಂಬುಲೆನ್ಸ್ ಇವರ ಸಂಯುಕ್ತಾಶ್ರಯದಲ್ಲಿ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ಅಪಘಾತ ಜೀವ ರಕ್ಷಕ ಯೋಜನೆ ತರಬೇತಿ ಪಡೆದ ಆಟೋಚಾಲಕರಿಗೆ ಪ್ರಥಮ ಚಿಕಿತ್ಸಾ ಕಿಟ್ ವಿತರಿಸಿ ಅವರು ಮಾತನಾಡಿದರು.
ಆಟೋ ಚಾಲಕರು ತಮ್ಮ ದುಡಿಮೆಯೊಂದಿಗೆ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿರಬೇಕು ಈ ಮೂಲಕ ಸಾಮಾಜಿಕ ಕಳಕಳಿ ತೋರಬೇಕು. ಸಮಾಜದಲ್ಲಿ ಆಟೋ ಚಾಲಕರಾಗಿ ಪ್ರಮಾಣಿಕತೆ ಮೆರೆದ ಹಾಗೂ ಸಮಾಜ ಬಾಹಿರ ಕೆಲಸಗಳಲ್ಲಿ ಭಾಗಿಯಾದ ಬಗ್ಗೆ ಹಲವು ಉದಾಹರಣೆಗಳಿವೆ. ಅಂತೆಯೇ ಪ್ರತಿಯೊಬ್ಬರೂ ತಮಗೂ ಒಂದು ಕುಟುಂಬವಿದೆ ಎಂದಬುದನ್ನು ಎಂದಿಗೂ ಮರೆಯುವಂತಿಲ್ಲ. ಈ ನಿಟ್ಟಿನಲ್ಲಿ ತಮ್ಮ ಬದುಕು ಮತ್ತು ದುಡಿಮೆ ಇರಬೇಕು ಎಂದರು.
ಉಪ ಕಾರ್ಮಿಕ ಆಯುಕ್ತ ವೆಂಕಟೇಶ್ ಎ. ಶಿಂದಿಹಟ್ಟಿ ಮಾತನಾಡಿ, ಆಟೋಚಾಲಕರು ಸದಾ ರಸ್ತೆಯಲ್ಲೇ ಸಂಚಾರ ಮಾಡುತ್ತಾ ಸಾರ್ವಜನಿಕ ಸೇವೆಯಲ್ಲಿರುತ್ತಾರೆ. ರಸ್ತೆ ಅಪಘಾತ ಆದ ಸಂದರ್ಭದಲ್ಲಿ ಮೊದಲು ಅವರಿಗೆ ಗೊತ್ತಾಗುವುದರಿಂದ ಯಾವುದೇ ಅಂಥ ಘಟನೆಗಳು ಸಂಭವಿಸುವ ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆ ನೀಡುವಂತಾಗಬೇಕು. ಈ ಮೂಲಕ ಗಾಯಾಳುಗಳ ಜೀವ ರಕ್ಷಿಸುವಂತಾಗಬೇಕು ಎಂಬ ಉದ್ದೇಶದಿಂದ ಆಟೋ ಚಾಲಕರಿಗೆ ತರಬೇತಿ ನೀಡಿ ಪ್ರಥಮ ಚಿಕಿತ್ಸಾ ಕಿಟ್‍ಗಳನ್ನು ವಿತರಿಸಲಾಗುತ್ತಿದೆ. ಇದನ್ನು ಸದಾ ಆಟೋದಲ್ಲಿ ಇರಿಸಿಕೊಂಡು ಸಂದರ್ಭ ಬಂದಾಗ ಸೂಕ್ತವಾಗಿ ಬಳಸಬೇಕು ಎಂದರು.
ಬೆಂಗಳೂರಿನಲ್ಲಿ ಹರೀಶ್ ಎಂಬ ವ್ಯಕ್ತಿಯು ಅಪಘಾತದಲ್ಲಿ ಮೃತರಾದ ಬಳಿಕ ಅವರ ಹೆಸರಿನಲ್ಲಿ ಹರೀಶ್ ಸಾಂತ್ವನ ಯೋಜನೆ ಇದೆ. ಅಂತೆಯೇ ಅಪಘಾತ ತುರ್ತು ಸಂದರ್ಭದಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸುವವರನ್ನು ಯಾವುದೇ ಪೊಲೀಸ್ ಪ್ರಕರಣದಲ್ಲಿ ಸೇರಿಸದಂತೆ ಹೊಸ ಕಾನೂನುಗಳನ್ನು ರೂಪಿಸಲಾಗಿದೆ. ಅದಕ್ಕಾಗಿಯೇ ಈ ತರಬೇತಿ ಸಂದರ್ಭದಲ್ಲಿ ಪ್ರಮಾಣ ಪತ್ರವನ್ನು ನೀಡಲಾಗಿದ್ದು ಈ ಮೂಲಕ ತಾವೂ ಜೀವ ರಕ್ಷಕರಾಗಬೇಕು ಎಂದು ಅವರು ಕರೆ ನೀಡಿದರು.
ಅಲ್ಲದೆ ಅಸಂಘಟಿತ ಕಾರ್ಮಿಕ ಸಾಮಾಜಿಕ ಭದ್ರತಾ ಮಂಡಳಿಯಿಂದ ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತಿದ್ದು ರೂ.25 ಪಾವತಿಸಿ ನೋಂದಾಯಿಸಿಕೊಳ್ಳುವಂತೆ ಅವರು ತಿಳಿಸಿದರು. ಜಿಲ್ಲಾ ಕಾರ್ಮಿಕ ಅಧಿಕಾರಿ ತರನ್ನುಂ ಬೆಂಗಾಲಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಹಿಮಂತರಾಜು ಜಿ. ಕಾರ್ಮಿಕ ನಿರೀಕ್ಷಕರಾದ ಶೇಖರಗೌಡ ಪಾಟೀಲ, ಬಿ.ಎಸ್.ಬೆಟಗೇರಿ, ಬಾಲ ಕಾರ್ಮಿಕ ಯೋಜನಾ ಸೊಸೈಟಿಯ ಕರಕಪ್ಪ ಮೇಟಿ ಮತ್ತಿತರರು ಇದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.