ಅಕ್ರಮ ಆಸ್ತಿ ಆರೋಪ: ಅರಣ್ಯಾಧಿಕಾರಿ ಮನೆ ಮೇಲೆ ಎಸಿಬಿ ದಾಳಿ

ಕಾರವಾರ: ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಯೊಬ್ಬರ ಮನೆ, ಕಚೇರಿ ಸೇರಿದಂತೆ ಐದು ಕಡೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಿರುವತ್ತಿಯ ವಲಯ ಅರಣ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಚಂದ್ರಕಾಂತ ನಾಯ್ಕ ಅವರ ಬಾಡಿಗೆ ಮನೆ, ಕಚೇರಿ ಹಾಗೂ ಮೂಲ ಮನೆಯ ಮೇಲೆ ದಾಳಿ ನಡೆಸಲಾಗಿದೆ.
ಚಂದ್ರಕಾಂತ ನಾಯ್ಕ ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದರು. ಅವರ ಅಂಕೋಲಾ ತಾಲೂಕಿನ ಅವರ್ಸಾ ದ ಮೂಲ ಮನೆ, ಕಾರವಾರ ನಗರದ ಮಾಳ್ಸಾವಾಡದ ಪ್ಲಾಟ್, ಮಗಳ ಎರಡು ಮನೆ ಹಾಗೂ ಕಿರುವತ್ತಿಯ ಕಚೇರಿ ಮೇಲೆ ಎಸಿಬಿ ಎಸ್ಪಿ ಶೃತಿ ನೇತೃತ್ವದಲ್ಲಿ ಏಕ ಕಾಲದಲ್ಲಿ ದಾಳಿ ನಡೆಸಲಾಗುತ್ತದೆ.
ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿದ ಕುರಿತು ವ್ಯಕ್ತಿಯೊಬ್ಬರ ದೂರಿನ ಮೇಲೆ ಕಾರವಾರ, ಮಂಗಳೂರು, ಚಿಕ್ಕಮಂಗಳೂರು, ಉಡುಪಿ ಅಧಿಕಾರಿಗಳು ದಾಳಿಯಲ್ಲಿ ಪಾಲ್ಗೊಂಡು ಪರಿಶೀಲನೆಯಲ್ಲಿ ತೊಡಗಿಕೊಂಡಿದ್ದಾರೆ. ಮನೆಯಲ್ಲಿದ್ದ ವಿವಿಧ ಆಸ್ತಿಗೆ ಸಂಬಂಧಿಸಿದ ದಾಖಲೆಗಳು, ಒಡವೆಗಳ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.