ವಿವಿಧ ಬೇಡಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ

ಕಾರವಾರ: ರಾಷ್ಟ್ರೀಯ ಹೆದ್ದಾರಿ ಅಗಲೀಕರಣದಿಂದ ಉಂಟಾಗುವ ಸಮಸ್ಯೆಗಳನ್ನು ಬಗೆಹರಿಸುವಂತೆ, ಹೆದ್ದಾರಿ ಬದಿಯ ಅಭಿವೃದ್ಧಿ ಕಾರ್ಯಗಳ ನಿರ್ಬಂಧವನ್ನು 40 ಮೀ. ನಿಂದ 30 ಮೀ. ಮಾಡುವಂತೆ ಹಾಗೂ ಕಡಲಕೊರೆತವನ್ನು ತಡೆಗಟ್ಟಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ತಾಲೂಕಿನ ಮಾಜಾಳಿ ಗ್ರಾಮ ಪಂಚಾಯತ್ ಜನಪ್ರತಿನಿಧಿಗಳು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.
ಸಾರ್ವಜನಿಕರು ವಿವಿಧ ಉದ್ದೇಶಕ್ಕಾಗಿ ಕೃಷಿ ಜಮೀನನ್ನು ಬಿನ್‍ಶೆತ್ಕಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ಹೆದ್ದಾರಿ ಇರುವ ಮಧ್ಯಭಾಗದಿಂದ 40ಮೀ. ಭಾಗದಲ್ಲಿ ಯಾವುಧೇ ಅಭಿವೃದ್ಧಿ ಮಾಡಬಾರದು ಎನ್ನುವ ಆದೇಶವಿದೆ. ಮಾಜಾಳಿಯಲ್ಲಿ ಹಾದು ಹೋಗುವ ರಾ.ಹೆ.66ರ ಬದಿಯಲ್ಲಿರುವ ತಮ್ಮ ಅಲ್ಪ ಜಮೀನನ್ನು ಜೀವನೋಪಾಯಕ್ಕಾಗಿ ವಾಣಿಜ್ಯ ಉದ್ದೇಶಕ್ಕೆ ಹಾಗೂ ವಸತಿ ನಿಮಾಣಕ್ಕಾಗಿ ಬಿನ್‍ಶೆತ್ಕಿ ಮಾಡಿಕೊಳ್ಳುತ್ತಿದ್ದಾರೆ. ಆದರೆ 40 ಮೀ. ಅಂತರ ವಾದರೆ ಅಲ್ಪ ಜಮೀನು ಹೊಂದಿದ ಅವರಿಗೆ ನಷ್ಟವಾಗುತ್ತಿದ್ದು ಅದನ್ನು 30 ಮೀ. ಮಾಡಿ ಜನರಿಗೆ ಸಹಕರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಇದೇ ವೇಳೆ ಪ್ರತ್ಯೇಕ ಮನವಿ ಸಲ್ಲಿಸಿದ ಅವರು ಮಾಜಾಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ದಾಂಡೇಭಾಗದಿಂದ ಬಾವಳದವರೆಗೆ ಕಡಲ ಕೊರೆತ ಉಂಟಾಗುತ್ತಿದೆ. ದಿನದಿಂದ ದಿನಕ್ಕೆ ಕಡಲು ಕೊರೆತ ಹೆಚ್ಚುತ್ತಲೇ ಸಾಗಿದ್ದು ಸಮುದ್ರ ತೀರದಲ್ಲಿರುವ ಕುಟುಂಬಗಳಿಗೆ ಹಾನಿಯಾಗುವ ಸಾಧ್ಯತೆ ಇದೆ. ಆದ್ದರಿಂದ ಈ ಭಾಗದಲ್ಲಿ ಕಡಲ ಕೊರೆತ ತಡೆಗಟ್ಟಲು ಶೀಘ್ರದಲ್ಲಿ ತಡೆಗೋಡೆ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಮಾಜಾಳಿ ಗ್ರಾಪಂ ವ್ಯಾಪ್ತಿಯ ಬ್ರಾಹ್ಮಣವಾಡಾ ಮತ್ತು ಮಾಜಾಳಿ ಚೆಕ್‍ಪೋಸ್ಟ್ ಬಳಿ ಇರುವ ದೇವತಿ ದೇವಸ್ಥಾನದ ಹಿಂದಿನ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಯಿಂದ ಮಳೆ ನೀರು ನಿಂತು ಸುತ್ತಮುತ್ತಲಿನ ಪ್ರದೇಶ ಜಲಾವೃತವಾಗಿದೆ. ನೀರು ಶೇಖರಣೆಯಾಗಿರುವ ಪರಿಣಾಮ ಸ್ಥಳೀಯರಿಗೆ, ಜಾನುವಾರುಗಳಿಗೆ ತೊಂದರೆಯಾಗುತ್ತಿದೆ. ಗ್ರಾಮಸಭೆಯಲ್ಲಿ ಸಾರ್ವಜನಿಕರು ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಕಾಮಗಾರಿಯ ಗುತ್ತಿಗೆ ಪಡೆದ ಕಂಪನಿಗೆ ಈ ಬಗ್ಗೆ ತಿಳಿಸಿ ಸಮಸ್ಯೆ ಪರಿಹರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಮನವಿ ಸ್ವೀಕರಿಸಿ ಪರಿಶೀಲಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಮಾಜಾಳಿ ಗ್ರಾಪಂ ಉಪಾಧ್ಯಕ್ಷ ಗೋವಿಂದ ಮ್ಹಾಳ್ಸೇಕರ, ಸದಸ್ಯ ಸಾಧನಾ ನಾಯ್ಕ ಮುಂತಾದವರು ಇದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.