ಯುವ ಪೀಳಿಗೆ ತೇಜಸ್ವಿ ಅವರ ಪುಸ್ತಕಗಳನ್ನು ಓದಬೇಕು; ಜಿ.ಮೋಹನದಾಸ

 

ಕಾರವಾರ: ಖ್ಯಾತ ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರು ಜೀವ ವೈವಿಧ್ಯತೆ ಹಾಗೂ ಪ್ರಪಂಚದ ಕುರಿತು ಅತ್ಯಂತ ಸಹಜ ಹಾಗೂ ಸರಳವಾಗಿ ತಮ್ಮ ಬರಹಗಳಲ್ಲಿ ದಾಖಲಿಸಿದ್ದು ಇಂದಿನ ಯುವ ಪೀಳಿಗೆ ಅವರ ಪುಸ್ತಕಗಳನ್ನು ಓದಬೇಕು ಎಂದು ಕೈಗಾ ಬರ್ಡರ್ಸ್ ಕ್ಲಬ್ ಸಂಚಾಲಕ ಜಿ.ಮೋಹನದಾಸ ಹೇಳಿದರು.
ತಾಲೂಕಿನ ಮಲ್ಲಾಪುರ ಗ್ರಾಮದ ಆದರ್ಶ ಪ್ರೌಢಶಾಲೆಯ ಇಕೋ ಕ್ಲಬ್‍ಗೆ ತೇಜಸ್ವಿಯವರ ಕೃತಿಗಳನ್ನು ವಿತರಿಸಿ ಬಳಿಕ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಪರಿಸರದೊಂದಿಗೆ ಅನ್ಯೋನ್ಯತೆಯಿಂದ ಬದುಕಲು ತೇಜಸ್ವಿಯವರು ಓದುಗರನ್ನು ಅತ್ಯಂತ ಮಾರ್ಮಿಕವಾಗಿ ಪ್ರೇರಿಪಿಸುತ್ತಾರೆ. ಅವರ ಸಾಹಿತ್ಯ ಕೃಷಿಯು ಅನುಭವದಿಂದ ಬಂದದ್ದಾಗಿದೆ ಎಂದರು. ಈ ನಿಟ್ಟಿನಲ್ಲಿ ಪ್ರತಿ ಶಾಲೆಗಳ ಗ್ರಂಥಾಲಯಗಳಲ್ಲಿ ನಾಡಿನ ಶ್ರೇಷ್ಠ ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರ ಪುಸ್ತಕಗಳು ದೊರಕಬೇಕು ಎಂದು ಅಭಿಪ್ರಾಯ ಪಟ್ಟರು.
ಪಕ್ಷಿ ಪ್ರೇಮಿ, ನೈರುತ್ಯ ರೇಲ್ವೆ ಹುಬ್ಬಳ್ಳಿಯ ಉದ್ಯೊಗಿ ಸೋಮಶೇಖರ ಹಿರೇಮಠ ಅವರು ನೀಡಿದ್ದ ಒಟ್ಟು 15 ಪುಸ್ತಕಗಳನ್ನು ಶಾಲೆಯ ಇಕೋ ಕ್ಲಬ್‍ಗೆ ಹಸ್ತಾಂತರಿಸಲಾಯಿತು. ಪುಸ್ತಕ ಲೋಕದಲ್ಲಿ ಹೆಸರುವಾಸಿಯಾದ ತೇಜಸ್ವಿಯವರ ವಿಸ್ಮಯ ಸರಣಿ, ಪರಿಸರದ ಕತೆ, ಚಂದ್ರನ ಚೂರು, ನೆರೆಹೊರೆಯ ಗೆಳೆಯರು ಹಾಗೂ ಜೀವನ ಸಂಗ್ರಾಮ ಕೃತಿಗಳು ವಿದ್ಯಾಲಯಕ್ಕೆ ನೀಡಲಾದ ಪುಸ್ತಕಗಳ ಗುಚ್ಛದಲ್ಲಿ ಸೇರಿವೆ.
ಪರಿಸರ ಹಾಗೂ ಪಕ್ಷಿ ವೀಕ್ಷಣೆಯ ಜಾಗೃತಿ ಮೂಡಿಸಲು ಕೈಗಾ ಬರ್ಡರ್ಸ್ ಕ್ಲಬ್ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಕೈಗಾ ಬರ್ಡರ್ಸ್‍ನ ಸದಸ್ಯರಾದ ಸುರೇಶ ಪಾಟೀಲ, ಪಿ. ವಿಜಯನ್ , ಕೆ.ವಿ. ರಾಜೀವ್ , ದಿನೇಶ್ ಗಾಂವಕರ, ಮಹಾಂತೇಶ ಓಶಿಮಠ ಹಾಗೂ ಆದರ್ಶ ವಿದ್ಯಾಲಯದ ಅಧ್ಯಾಪಕಿ ಪೂರ್ಣಿಮಾ ನಾಯ್ಕ, ಬಿ. ರೇಶ್ಮಾ, ಛಾಯಾ ಪಿ. ನಾಯ್ಕ , ಎಸ್.ಎ. ಮಿರಾಶಿ, ಜೆ.ಪಿ. ನಾಗೇಕರ ಇದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.