ತಕ್ಷಣ ರಾಷ್ಟ್ರೀಯ ಅಂತರ್ಜಲ ನೀತಿಯನ್ನು ರೂಪಿಸುವಂತೆ ಶ್ರೀ ಹರಿ ಚಂದ್ರಘಾಟ್ಗಿ ಆಗ್ರಹ

 

ಕಾರವಾರ: ಅಮೂಲ್ಯ ಅಂತರ್ಜಲ ಸಂಪನ್ಮೂಲವನ್ನು ನಿರ್ವಹಿಸಲು ಮತ್ತು ಆದ್ಯತೆ ಮೇರೆಗೆ ಅಂತರ್ಜಲ ಕಲುಷಿತಗೊಳ್ಳುವುದನ್ನು ತಡೆಯುವ ಸಲುವಾಗಿ ತಕ್ಷಣ ರಾಷ್ಟ್ರೀಯ ಅಂತರ್ಜಲ ನೀತಿಯನ್ನು ರೂಪಿಸುವಂತೆ ಕೃಷಿ ಸೂಕ್ಷ್ಮ ಜೀವಶಾಸ್ತ್ರಜ್ಞ ಡಾ. ಶ್ರೀ ಹರಿ ಚಂದ್ರಘಾಟ್ಗಿ ಅವರು ಭಾರತ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಪೇಟೆಂಟ್ ಪಡೆದ ಅಂತರ್ಜಲ ಸ್ವಚ್ಛಗೊಳಿಸುವ ತಂತ್ರಜ್ಞಾನವನ್ನು ಭಾರತದಲ್ಲಿ ಸಾರ್ವಜನಿಕ ಬಳಕೆಗಾಗಿ ಉಚಿತವಾಗಿ ನೀಡಲಾಗುವುದು. ನಿಯಂತ್ರಣ ಅಧಿಕಾರಿಗಳಿಗೆ ತರಬೇತಿ ನೀಡುವಲ್ಲಿ ಹಾಗೂ ಜಪಾನ್‍ನಿಂದ ಪರಿಸರ ಕ್ಷೇತ್ರಕ್ಕೆ ವಿದೇಶಿ ನೇರ ಬಂಡವಾಳ ತರುವ ನಿಟ್ಟಿನಲ್ಲೂ ನೆರವು ನೀಡಲಾಗುವುದು.
ದೆಹಲಿಯಲ್ಲಿ ಇತ್ತೀಚೆಗೆ ನಡೆದ ಪ್ರವಾಸಿ ಭಾರತೀಯ ದಿವಸ್ ಸಮ್ಮೇಳನದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಆಹ್ವಾನದ ಮೇರೆಗೆ ಭಾಗವಹಿಸಿದ್ದ ಅವರು ಕೈಗೆಟುಕುವ ದರಲ್ಲಿ ಘನ ತ್ಯಾಜ್ಯ ನಿರ್ವಹಣೆ ಮತ್ತು ದೇಶದಲ್ಲಿ ಜಲಮಾಲಿನ್ಯ ಸಂಬಂಧಿ ಸಮಸ್ಯೆಗಳು ಎಂಬ ಗುಂಪು ಚರ್ಚೆಯಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯ ಮಂಡಿಸಿದ ಜಪಾನ್‍ನ ಇಕೋಸೈಕಲ್ ಕಾರ್ಪೊರೇಷನ್‍ನ ಅಧ್ಯಕ್ಷ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳೂ ಆಗಿರುವ ಮೂಲತಃ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರವರಾದ ಡಾ. ಶ್ರೀಹರಿ ಚಂದ್ರಘಾಟ್ಗಿ ಅವರು 2017ರಲ್ಲಿ ರೂಪಿಸಲಾದ ರಾಷ್ಟ್ರೀಯ ಆರೋಗ್ಯ ನೀತಿಯ ಮಹತ್ವಾಕಾಂಕ್ಷಿ ಗುರಿಗಳನ್ನು ತಲುಪುವಲ್ಲಿ ಅಂತರ್ಜಲ ಮಾಲಿನ್ಯ ಅತಿದೊಡ್ಡ ತಡೆಯಾಗಲಿದೆ ಎಂದು ಎಚ್ಚರಿಸಿದರು.
ಅಮೆರಿಕ, ಜಪಾನ್, ಚೀನಾ ಮತ್ತು ಥೈವಾನ್ ಸೇರಿದಂತೆ ಹಲವು ದೇಶಗಳಲ್ಲಿ ಅಂತರ್ಜಲ ಕಲುಷಿತಗೊಳ್ಳುವುದನ್ನು ತಡೆಯಲು ಕಟ್ಟುನಿಟ್ಟಿನ ಕಾನೂನುಗಳಿವೆ. ಭಾರತದಲ್ಲಿ ಅಂತರ್ಜಲ ಲಕ್ಷಾಂತರ ಜನರ ಜೀವಜಲವಾಗಿದ್ದರೂ ಕಟ್ಟುನಿಟ್ಟಿನ ಕಾನೂನುಗಳಿಲ್ಲ. ರಸಗೊಬ್ಬರ ಮತ್ತು ಕೀಟನಾಶಕಗಳು ಮತ್ತು ಕೈಗಾರಿಕಾ ರಾಸಾಯನಿಕಗಳು ದೇಶದಲ್ಲಿ ಅಂತರ್ಜಲವನ್ನು ಬಹುವಾಗಿ ಮಲಿನಗೊಳಿಸುತ್ತಿವೆ. ಕಲುಷಿತ ನೀರನ್ನು ಸೇವಿಸುವುದರಿಂದ ಲಕ್ಷಾಂತರ ಮಂದಿಗೆ ಗಂಭೀರ ಸ್ವರೂಪದ ಕಾಯಿಲೆಗಳು ಬರುತ್ತಿದ್ದು, ಇವರ ಆರೋಗ್ಯ ಕಾಳಜಿಗಾಗಿ ಸಾವಿರಾರು ಕೋಟಿ ರೂ.ಗಳನ್ನು ಸರ್ಕಾರ ವೆಚ್ಚ ಮಾಡುತ್ತಿದೆ. ಇದರ ಬದಲು ಸಾರ್ವಜನಿಕರಿಗೆ ಸುರಕ್ಷಿತ ನೀರನ್ನು ಒದಗಿಸುವುದು ಸೂಕ್ತ ಎಂದು ಸಲಹೆ ನೀಡಿದರು.
ಸೂಕ್ತ ನಿರ್ಬಂಧಗಳನ್ನು ಜಾರಿಗೊಳಿಸುವುದರಿಂದ ಸುಮಾರು 50 ವರ್ಷಗಳ ಕಾಲ ವಾರ್ಷಿಕವಾಗಿ ಸುಮಾರು 25 ಸಾವಿರ ಕೋಟಿ ರೂ. ಪರಿಸರ ಉದ್ಯಮಕ್ಕೆ ಉತ್ತೇಜನ ನೀಡಿದಂತಾಗುವುದು. ಜೊತೆಗೆ ಆರೋಗ್ಯ ಕ್ಷೇತ್ರಕ್ಕೆ ಸರ್ಕಾರ ವೆಚ್ಚ ಮಾಡುವ ಸಾವಿರಾರು ಕೋಟಿ ರೂ.ಗಳನ್ನು ಉಳಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಅಂತರ್ಜಲ ಮಾಲಿನ್ಯ ತಡೆಗೆ ತಕ್ಷಣ ಕಾನೂನು ಚೌಕಟ್ಟು ರೂಪಿಸಬೇಕು ಮತ್ತು ಅಂತರ್ಜಲ ಮಾಲಿನ್ಯಕ್ಕೆ ಕಾರಣವಾಗುವ ಕೈಗಾರಿಕೆಗಳನ್ನು ಶಿಕ್ಷಿಸಬೇಕು. ತೀರಾ ಸಮಸ್ಯಾತ್ಮಕ ಪ್ರದೇಶಗಳಲ್ಲಿ ಅಂತರ್ಜಲ ಸ್ವಚ್ಛಗೊಳಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು. ಮಿತ ವೆಚ್ಚದಾಯಕ ಪರಿಹಾರಾತ್ಮಕ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಂಶೋಧನಾ ಸಂಸ್ಥೆಗಳಿಗೆ ನೆರವು ನೀಡಬೇಕು ಎಂದು ಒತ್ತಾಯಿಸಿದರು.

2013ರಲ್ಲಿ ಶ್ರೀಹರಿಯವರು ಗೋವಾಗೆ ಜಪಾನ್ ಸರ್ಕಾರದ ನೆರವು ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಜತೆಗೆ ತಮ್ಮ ತಂತ್ರಜ್ಞಾನದ ಪ್ರಾಯೋಗಿಕ ಪ್ರಾತ್ಯಕ್ಷಿಕೆ ನೀಡಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ತರಬೇತಿಯನ್ನೂ ನೀಡಿದ್ದರು. ಡಾ.ಶ್ರೀಹರಿಯವರು ಥೈವಾನ್, ಚೀನಾ, ಥಾಯ್ಲೆಂಡ್ ಸೇರಿದಂತೆ ಹಲವು ದೇಶಗಳಿಗೆ ಅಂತರ್ಜಲ ನೀತಿಯನ್ನು ರೂಪಿಸಲು ಅಗತ್ಯ ಸಲಹೆ ನೀಡುತ್ತಿದ್ದಾರೆ. ಇವರಿಗೆ 2017ರಲ್ಲಿ ಜಪಾನ್‍ನ ಪರಿಸರ ಸಚಿವಾಲಯದ ಪ್ರಶಸ್ತಿ ಸಂದಿದ್ದು, ಈ ಹೆಗ್ಗಳಿಕೆಗೆ ಪಾತ್ರರಾದ ಮೊಟ್ಟಮೊದಲ ವಿದೇಶಿ ಪ್ರಜೆ ಎನಿಸಿಕೊಂಡಿದ್ದರು. ಇದು ಜಪಾನ್‍ನಲ್ಲಿ ಪರಿಸರ ವಲಯದಲ್ಲಿ ನೀಡುವ ಅತ್ಯುನ್ನತ ಪ್ರಶಸ್ತಿಯಾಗಿದೆ. ಕಳೆದ 20 ವರ್ಷಗಳಲ್ಲಿ ವಿಶ್ವದಲ್ಲಿ ಅತಿಹೆಚ್ಚು ಮಲಿನಗೊಂಡ 500ಕ್ಕೂ ಹೆಚ್ಚು ಜಲಮೂಲಗಳನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ತಂತ್ರಜ್ಞಾನ ಅಭಿವೃದ್ಧಿಪಡಿಸಿ, ಅಳವಡಿಸಿದ ಸಾಧನೆಯನ್ನು ಗುರುತಿಸಿ ಈ ಗೌರವ ನೀಡಲಾಗಿತ್ತು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.