ಆಶಾ ಕಾರ್ಯಕರ್ತರ ನೇಮಕಾತಿಗೆ ಆಗಸ್ಟ್ ತಿಂಗಳ ಗಡುವು: ಎಸ್. ಎಸ್. ನಕುಲ್

ಕಾರವಾರ: ಆಗಸ್ಟ್ ಮಾಸಾಂತ್ಯದೊಳಗೆ ಖಾಲಿಯಿರುವ ಆಶಾ ಕಾರ್ಯಕರ್ತರನ್ನು ನೇಮಕಾತಿ ಮಾಡುವಂತೆ ಜಿಲ್ಲಾಧಿಕಾರಿ ಎಸ್. ಎಸ್. ನಕುಲ್ ಆರೋಗ್ಯ ಇಲಾಖೆಗೆ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ವಿವಿಧ ವಿಭಾಗದ ಜಿಲ್ಲಾ ಮಟ್ಟದ ಸಮಿತಿಗಳ ಸಭೆಯನ್ನು ನಡೆಸಿದ ಅವರು, ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಖಾಲಿಯಿರುವ ಆಶಾ ಕಾರ್ಯಕರ್ತರನ್ನು ಶೀಘ್ರವೇ ನೇಮಕಾತಿ ಮಾಡಿಕೊಳ್ಳಬೇಕು. ಈ ಸಂಬಂಧ ಆಗಸ್ಟ್ ತಿಂಗಳಂತ್ಯಕ್ಕೆ ನೇಮಕಾತಿ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಜಿ.ಎನ್.ಅಶೋಕ್‍ಕುಮಾರ್ ಅವರಿಗೆ ಸೂಚಿಸಿದರು.
ಅಲ್ಲದೆ ಜಿಲ್ಲಾದ್ಯಂತ ವಿವಿಧ ಆಸ್ಪತ್ರೆಗಳಲ್ಲಿ ನಿವೃತ್ತಿ ಅಥವಾ ಇತರೆ ಕಾರಣಗಳಿಂದ ಖಾಲಿಯಾಗಿರುವ ಡಿ ಗ್ರೂಪ್, ವಾಹನ ಚಾಲಕ ಸೇರಿದಂತೆ ವಿವಿಧ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನಿಯಮಾನುಸರ ನೇಮಿಸಿಕೊಳ್ಳುವಂತೆ ಅವರು ಸೂಚಿಸಿದರು.
ಆಶಾ ಕಾರ್ಯಕರ್ತರ ವೇತನ 3500ರೂ. ಮತ್ತು ಪ್ರೋತ್ಸಾಹಧನ ಸರಿಯಾಗಿ ವಿಲೇ ಮಾಡಬೇಕು. ಈ ಸಂಬಂಧ ಯಾವುದಾದರೂ ಸಮಸ್ಯೆಗಳಿದ್ದಲ್ಲಿ ಸಂಬಂಧಿಸಿದ ತಾಲೂಕು ವೈದ್ಯಾಧಿಕಾರಿಗಳು ತಕ್ಷಣ ಸ್ಪಂದಿಸಬೇಕು ಹಾಗೂ ಆರೋಗ್ಯ ಇಲಾಖೆ ಕೆಲಸಗಳು ಸುಗಮವಾಗುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಸಹಿಸಬೇಕು ಎಂದು ಅವರು ತಿಳಿಸಿದರು.
ಕ್ಷಯರೋಗ ಸಂಬಂಧ ಇತ್ತೀಚಿಗೆ ನಡೆದ ಆಂದೋಲನದಲ್ಲಿ ಕಡಿಮೆ ರೋಗಿಗಳ ಪತ್ತೆಯನ್ನು ಗಮನಿಸಿದ ಅವರು, ಈ ಪ್ರಕ್ರಿಯೆ ಸರಿಯಾಗಿ ಆಗಿರುವ ಬಗ್ಗೆ ಅನುಮಾನವಿದ್ದು ಕಡಿಮೆ ಪ್ರಮಾಣದ ಪತ್ತೆ ಆಗಿರುವ ಕಡೆಗಳಲ್ಲಿ ಮರು ಪರಿಶೀಲನೆ ನಡೆಸಿ ವಾರದೊಳಗೆ ವರದಿ ನೀಡುವಂತೆ ಸೂಚಿಸಿದರು. ಅಲ್ಲದೆ ಎಚ್.ಐ.ವಿ. ಮತ್ತು ಎಫ್‍ಎಸ್‍ಡಬ್ಲ್ಯು (ಲೈಂಗಿಕ ಕಾರ್ಯಕರ್ತೆಯರು) ಪರೀಕ್ಷೆ ಸರಿಯಾಗಿ ಆಗದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಲೈಂಗಿಕ ಕಾರ್ಯಕರ್ತೆಯವರು ಪರೀಕ್ಷೆಗೆ ಬಾರದಿದ್ದರೆ ಅವರ ಮನೆಗೆ ನೀವೆ ಹೋಗಿ ಪರೀಕ್ಷೆ ಮಾಡಿಸಬೇಕು. ಆಗಸ್ಟ್ ಅಂತ್ಯದ ವೇಳೆಗೆ ಎಷ್ಟು ಮಂದಿಗೆ ಪರೀಕ್ಷೆ ಮಾಡಲಾಗಿದೆ ಎಂಬ ಬಗ್ಗೆ ಮಾಹಿತಿ ಸಲ್ಲಿಸುವಂತೆ ಅವರು ತಿಳಿಸಿದರು.
ಜಿಲ್ಲೆಯಲ್ಲಿ ಮಲೇರಿಯಾ ಮತ್ತು ಡೆಂಗಿ ಜ್ವರ ಹತೋಟಿಯಲ್ಲಿದೆ. ಆದರೂ ಈ ಸಂಬಂಧ ವ್ಯಾಪಕ ಪ್ರಚಾರ ಅಗತ್ಯವಿದೆ. ಮಳೆ ಕಡಿಮೆಯಾದ ಮೇಲೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಸಲಹೆ ನೀಡಿದರು.
ತುರ್ತು ವಾಹನ 108 ಜಿಲ್ಲೆಯಲ್ಲಿ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ಸಂಬಂಧಿಸಿದ ಅಧಿಕಾರಿಯಿಂದ ಅವರು ಮಾಹಿತಿ ಪಡೆದು ಯಾವುದೇ ಸಂದರ್ಭದಲ್ಲಿ ಆಂಬುಲೆನ್ಸ್ ಸರಿಯಾಗಿ ಕೆಲಸ ನಿರ್ವಹಿಸುತ್ತಿವೆ. ಆದರೆ ಹೊಸ ವಾಹನಗಳಿಗಾಗಿ ಬೇಡಿಕೆ ಸಲ್ಲಿಸಿದ್ದು ಸರ್ಕಾರದಿಂದ ಮಂಜೂರಾದ ಕೂಡಲೆ ಹೊಸ ಆಂಬುಲೆನ್ಸ್‍ಗಳು ಜನರ ಸೇವೆಗೆ ಲಭ್ಯವಾಗಲಿವೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಜಿ. ಎನ್. ಅಶೋಕ್‍ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ರಾಜೇಂದ್ರ ಬೇಕಲ್, ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ರಮೇಶ್‍ರಾವ್ ಸೇರಿದಂತೆ ವಿವಿಧ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.