ಹೊಸ ವರ್ಷದ ಸಂಭ್ರಮ: ಮುರ್ಡೇಶ್ವರದಲ್ಲಿ ದಾಖಲೆಯ ಪ್ರವಾಸಿಗರ ಆಗಮನ.

 

ಭಟ್ಕಳ: ಹೊಸ ವರ್ಷಾಚರಣೆ ಹಿನ್ನೆಲೆ ವಿಶ್ವ ಪ್ರಸಿದ್ದ ಪ್ರವಾಸಿ ತಾಣ ಮುರ್ಡೇಶ್ವರದಲ್ಲಿ ಪ್ರವಾಸಿಗರ ದಂಡು ಲಗ್ಗೆಯಿಡುತ್ತಿದ್ದು, ಹೊಸ ವರ್ಷಕ್ಕೆ ಮುರ್ಡೇಶ್ವರದಲ್ಲಿಯೇ ಸಂಭ್ರಮಿಸಬೇಕೆಂಬ ನಿಟ್ಟಿನಲ್ಲಿ ತಯಾರಿಗಳು ಜೋರಾಗಿ ನಡೆಯುತ್ತಿವೆ.
ಸುಂದರ ಮುರ್ಡೇಶ್ವರದ ಸೌಂದರ್ಯವನ್ನು ಹೊಸ ವರ್ಷದ ಆಚರಣೆಯ ಹಿನ್ನೆಲೆಯಲ್ಲಿ ನೋಡಲು ಬರುತ್ತಿರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು, ಮಹಾದ್ವಾರದಿಂದ ದೇವಸ್ಥಾನದ ಮಾರ್ಗದವರೆಗೆ ಎಲ್ಲಿ ನೋಡಿದರು ಪ್ರವಾಸಿಗರೇ ಕಂಡು ಬರುತ್ತಿದ್ದಾರೆ. ಈಗಾಗಲೇ ಜಿಲ್ಲೆಯ ಕಾರವಾರ ಗೋಕರ್ಣದಲ್ಲಿ ಪ್ರವಾಸಿಗರ ಬರುವಿಕೆ ಹೆಚ್ಚಾಗಿದ್ದು, ಅಲ್ಲಿ ಪ್ರವಾಸಿಗರಿಗೆ ಸಂಭ್ರಮಿಸಲು ಸಾಧ್ಯವಾಗದ ಹಿನ್ನೆಲೆ ಕೆಲವರು ಮುರ್ಡೇಶ್ವರದ ಕಡೆ ಮುಖ ಮಾಡುತ್ತಿದ್ದಾರೆ. ಈಗಾಗಲೇ ಮುರ್ಡೇಶ್ವರದ ಹೋಟೆಲ್ ಲಾಡ್ಜ ರೆಸ್ಟೋರೆಂಟಗಳ ರೂಮಗಳು ಪ್ರವಾಸಿಗರು ಮುಂಚಿತವಾಗಿಯೇ ಬುಕ್ ಮಾಡಿಕೊಂಡಿದ್ದಾರೆ. ಇಲ್ಲಿ ಮಹಾದ್ವಾರದಿಂದ ದೇವಸ್ಥಾನದವರೆಗೆ ಪುಲ್ ಟ್ರಾಫಿಕ್ ಜ್ಯಾಮ್ ಉಂಟಾಗಿದ್ದು, ಟ್ರಾಫಿಕ್ ಸಮಸ್ಯೆಯಿಂದ ಪ್ರವಾಸಿಗರು ಪೇಚಿಗೆ ಸಿಲುಕಿದ್ದಾರೆ. ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಪ್ರವಾಸಿಗರು ವಾಹನವನ್ನು ಎಲ್ಲೆಂದರಲ್ಲಿ ನಿಲ್ಲಿಸಿ ಹೋಗುತ್ತಿದ್ದು, ಸ್ಥಳದಲ್ಲಿನ ಪೋಲೀಸರು ಟ್ರಾಫಿಕ್ ಜ್ಯಾಮ ಸರಿಪಡಿಸಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದ್ದಾರೆ. ಪೋಲೀಸರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ. ಈ ಮಧ್ಯೆ ಮುರ್ಡೇಶ್ವರದಲ್ಲಿ ಕಸದ ಸಮಸ್ಯೆಯೂ ತಲೆದೋರಿದ್ದು, ಪ್ರವಾಸಿಗರಿಗೆ ಕಿರಿಕಿರಿ ಉಂಟಾಗಿದೆ ಎಂಬ ಮಾತು ಕೇಳಿ ಬರುತ್ತಿವೆ. ಹೊಸ ವರ್ಷದ ಆಚರಣೆ ಹಿನ್ನೆಲೆ ಮುರ್ಡೇಶ್ವರಕ್ಕೆ ಕಳೆದೆರಡು ದಿನದಿಂದ ಸುಮಾರು 15 ಸಾವಿರಕ್ಕೂ ಅಧಿಕ ಪ್ರವಾಸಿಗರು ಆಗಮಿಸಿದ್ದಾರೆಂಬ ಮಾಹಿತಿ ತಿಳಿದು ಬಂದಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.