ಪತ್ರಮುಖೇನ ಮೋದಿಯನ್ನು ಶಿರಸಿ ಜಾತ್ರೆಗೆ ಕರೆದ ಬಾಲೆಯಾರು ಗೊತ್ತೆ..?

ಶಿರಸಿ: ಪ್ರಧಾನಿ ಮೋದಿಯವರ ನಡತೆಯಿಂದ ಪ್ರಭಾವಿತರಾದವರು ದೇಶದೆಲ್ಲೆಡೆ ಕಾಣಸಿಗುತ್ತಾರೆ. ಆದರೆ ಜಿಲ್ಲೆಯ ಬಾಲೆಯೊಬ್ಬಳು ಸ್ವಚ್ಛತೆಯ ವಿಷಯದಲ್ಲಿ ಮೋದಿಯವರನ್ನು ಆದರ್ಶವಾಗಿಟ್ಟುಕೊಂಡು, ತನ್ನ ಶಾಲೆ ಹಾಗು ಸುತ್ತಮುತ್ತಲಿನ ವಾತಾವರಣದಲ್ಲಿ ಯಾವುದೇ ಕಸ, ಚಾಕಲೇಟ್ ಕಾಗದವನ್ನು ಎಸೆಯದೇ ಸ್ವಚ್ಛಭಾರತದ ಕನಸಿಗೆ ತನ್ನ ಕೈಲಾದ ಕಾರ್ಯ ಮಾಡುತ್ತಿದ್ದಾಳೆ. ಕಾಗದವನ್ನು ಎಲ್ಲೆಂದರಲ್ಲಿ ಎಸೆಯದೇ ಕಸದ ಬುಟ್ಟಿಗೆ ಹಾಕಿದರೆ ಮೋದಿಮಾಮಾ ಬಹುಮಾನ ನೀಡುತ್ತಾರೆಂದು ಆಕೆಯ ಅಮ್ಮ ಹೇಳಿದ ಮಾತನ್ನೇ ನಂಬಿ, ಅದರಂತೆ ನಡೆಯುತ್ತಿರುವದನ್ನು ನೋಡಿದರೆ ಮೋದಿಯ ಮೇಲೆ ಆಕೆಗಿರುವ ಅಭಿಮಾನದ ಜೊತೆಜೊತೆಗೆ ಮುಗ್ಧ ಹೃದಯದ ಬಾಲೆಯ ಸ್ವಚ್ಛಮನಸ್ಸು ಅನಾವರಣಗೊಳ್ಳುತ್ತದೆ.

ಮೋದಿಗೆ ಪತ್ರದ ಮೂಲಕ ತನ್ನ ಅಭಿಪ್ರಾಯ ಹಂಚಿಕೊಂಡ ಈಕೆ, ತಾಲೂಕಿನ ಶಿರಸಿಮಕ್ಕಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯಾದ ಅಮೃತಾ ಎಂದು ತಿಳಿದುಬಂದಿದೆ. ಜೊತೆಗೆ ರಾಜ್ಯದ ಪ್ರಸಿದ್ಧ ಜಾತ್ರೆಯಾದ ಶಿರಸಿ ಮಾರಿಕಾಂಬಾ ಜಾತ್ರೆಗೂ ಸಹ ಪ್ರಧಾನಿ ಮೋದಿಯನ್ನು ಈಕೆ ಆಹ್ವಾನಿಸಿದ್ದು ವಿಶೇಷವಾಗಿದೆ. ಯಾವುದೋ ದಿನಪತ್ರಿಕೆಗೋ, ವಾರಪತ್ರಿಕೆಗೋ ಅಥವಾ ಅಂತರ್ಜಾಲ ಪತ್ರಿಕೆಗೆ ಪತ್ರದ ಮುಖೇನ ಮಾಹಿತಿ ಹಂಚಿಕೊಂಡಿರುವ ಈಕೆಯ ಬಗ್ಗೆ ‘ನಮೋ ಸಪೋರ್ಟರ್’ ಎಂಬ ವಾಟ್ಸಫ್ ಪೇಜೊಂದು ಆಕೆಯ ಭಾವಚಿತ್ರದ ಜೊತೆಗೆ ಪತ್ರದಲ್ಲಿರುವ ಬರಹವನ್ನೂ ಪ್ರಕಟಿಸಿದ್ದು, ಅದರ ಯತಾವತ್ತನ್ನು ಈ ಕೆಳಗೆ ನೀಡಲಾಗಿದೆ.

“ಪ್ರೀತಿಯ ಮೋದಿ ಮಾಮಾ ನಿಮಗೆ ನನ್ನ ಸಾವಿರಾರು ಸಿಹಿ ಮುತ್ತುಗಳು. ಕರ್ನಾಟಕ ರಾಜ್ಯದ ಶಿರಸಿ ತಾಲೂಕಿನ ಪುಟ್ಟ ಹಳ್ಳಿಯವಳು ನಾನು. ನಿಮ್ಮಿಂದ ಪ್ರಭಾವಿತರಾಗಿರುವ ನಾವು ನಮ್ಮ ಶಾಲೆಯನ್ನು ಸ್ವಚ್ಛವಾಗಿಟ್ಟುಕೊಂಡಿದ್ದೇವೆ. ಕಾಗದದ ಚೂರು, ಚಾಕಲೇಟ್ ಕಾಗದವನ್ನು ರಸ್ತೆಗೆ ಎಸೆಯದೇ ಕಸದ ಬುಟ್ಟಿಗೆ ಎಸೆದರೆ ಮೋದಿಯವರು ಬಹುಮಾನ ನೀಡುತ್ತಾರೆ ಎಂದು ಅಮ್ಮ ಹೇಳಿದ್ದಾಳೆ. ಹಾಗಾಗಿ ನಾವು ಎಲ್ಲೆಂದರಲ್ಲಿ ಕಸ ಎಸೆಯುವುದಿಲ್ಲ. ಅಂದ ಹಾಗೆ, ಈ ವರ್ಷ ಮಾರಿಕಾಂಬಾ ಜಾತ್ರೆ ನಡೆಯಲಿದೆ. ದಯವಿಟ್ಟು ನೀವು ನಮ್ಮ ಊರಿಗೆ ಬನ್ನಿ. ನಿಮಗಿದೋ ನನ್ನ ಪ್ರೀತಿಯ ಆಹ್ವಾನ… ಟಾಟಾ.

– ಅಮೃತಾ, ಸರಕಾರಿ ಪ್ರಾಥಮಿಕ ಶಾಲೆ, ಶಿರಸಿಮಕ್ಕಿ”

Categories: ಜಿಲ್ಲಾ ಸುದ್ದಿ

Leave A Reply

Your email address will not be published.