ಅನುದಾನ ಮಂಜೂರಿ ಮಾಡುವಂತೆ ಆಗ್ರಹ

 

ಕಾರವಾರ:ಯಲ್ಲಾಪುರದ ಕಿರವತ್ತಿಯ ಗ್ರಾಮೀಣ ಬುದ್ಧಿಮಾಂಧ್ಯ ಮಕ್ಕಳ ವಸತಿ ಶಾಲೆಗೆ ಮೊದಲನೇ ಕಂತಿನ ಅನುದಾನ ಬಿಡುಗಡೆಗೊಳಿಸಿ ಹಿರಿಯ ಅಕಾರಿಗಳು ಆದೇಶ ನೀಡಿದ್ದರೂ ಸಂಬಂಧಪಟ್ಟ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಬಿಲ್ ಮಾಡಿ ಖಜಾನೆಗೆ ಸಲ್ಲಿಸದೇ ತಡೆಹಿಡಿದಿದ್ದು ಕೂಡಲೇ ಬಿಡುಗಡೆ ಮಾಡಿಸಲು ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ವಸತಿ ಶಾಲೆಯ ವಿಕಲಚೇತನ, ಬುದ್ಧಿಮಾಂಧ್ಯ ಮಕ್ಕಳ ಸಮೇತ ಪಾಲಕರು, ಶಿಕ್ಷಕರು ಹಾಗೂ ಶಾಲೆಯ ಸಿಬ್ಬಂದಿವರ್ಗ ಜಿಲ್ಲಾಕಾರಿ ಕಚೇರಿ ಎದುರು ಧರಣಿ ನಡೆಸಿ ಬಳಿಕ ಜಿಲ್ಲಾಕಾರಿಗೆ ಮನವಿ ಸಲ್ಲಿಸಿದರು.
ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯ ಬೆಂಗಳೂರಿನ ನಿರ್ದೇಶಕರು ಕಳೆದ ಎಂಟು ತಿಂಗಳ ಹಿಂದೆ ವಸತಿ ಶಾಲೆಗೆ ಬರಬೇಕಾದ ಮೊದಲ ಅನುದಾನ ಬಿಡುಗಡೆ ಮಾಡಲು ಆದೇಶ ನೀಡಿದ್ದಾರೆ. ಆದರೆ ಜಿಲ್ಲೆಯ ವಿಕಲಚೇತನ ಇಲಾಖೆಯ ಅಧಿಕಾರಿಗಳು ಇಲ್ಲ ಸಲ್ಲದ ನೆಪ ಹೇಳಿ ಅನುದಾನವನ್ನು ತಡೆ ಹಿಡಿದಿದ್ದಾರೆ ಎಂದು ಆರೋಪಿಸಲಾಗಿದೆ.
ಕಾರವಾರದ ವಿಕಲಚೇತನ ಅಧಿಕಾರಿಗಳು ನಮ್ಮ ಶಾಲೆಗೆ ಬಿಡುಗಡೆಯಾದ ಅನುದಾನದ ಬಿಲ್ಲನ್ನು ತಯಾರಿಸಿ ಖಜಾನೆಗೆ ರವಾನಿಸಿಲ್ಲ.ಇದರಿಂದ ಶಾಲೆಯ ಅಂಧ, ಬುದ್ಧಿಮಾಂದ್ಯ ಮಕ್ಕಳಿಗೆ ದೈನಂದಿನ ಆಹಾರ ಪೂರೈಸಲು ತೊಂದರೆಯಾಗುತ್ತಿದೆ.ಅಲ್ಲದೇ ಶಾಲೆಯಲ್ಲಿ ಪಾಠ ಮಾಡುವ ಶಿಕ್ಷಕ ಹಾಗೂ ಸಿಬ್ಬಂದಿವರ್ಗಕ್ಕೆ ಗೌರವ ಧನ ನೀಡಲೂ ಸಾಧ್ಯವಾಗುತ್ತಿಲ್ಲ. ಈಗಾಗಲೇ ಈ ಸಂಬಂಧ ಎರಡು ಬಾರಿ ಪತ್ರ ಬರೆದು ಮನವರಿಕೆ ಮಾಡಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಜಿಲ್ಲಾಕಾರಿಗಳು ಕೂಡಲೇ ವಿಕಲಚೇತನ ಅಧಿಕಾರಿಗಳಿಂದ ಅನುದಾನ ಬಿಲ್ಲನ್ನು ತಕ್ಷಣ ಖಜಾನೆಗೆ ಸಲ್ಲಿಸಲು ಆದೇಶ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಯಲ್ಲಾಪುರದ ಕಿರವತ್ತಿಯ ಗ್ರಾಮೀಣ ಬುದ್ಧಿಮಾಂಧ್ಯ ಮಕ್ಕಳ ವಸತಿ ಶಾಲೆಯ ಸಂಸ್ಥಾಪಕ ಡಿ. ಡಿ. ಮೇಚನ್ನವರ್, ಕಾರ್ಯದರ್ಶಿ ಗಿರಿಜಾ ನಾಯಕ ಮತ್ತು 50 ಕ್ಕೂ ಹೆಚ್ಚಿನ ಸಂಖ್ಯೆಯ ವಿಕಲಚೇತನ ಮಕ್ಕಳು,ಶಿಕ್ಷಕರು,ಮಕ್ಕಳ ಪಾಲಕರು ಹಾಗೂ ಸಿಬ್ಬಂದಿವರ್ಗ ಇದ್ದರು

Categories: ಜಿಲ್ಲಾ ಸುದ್ದಿ

Leave A Reply

Your email address will not be published.