ಅತಿಕ್ರಮವನ್ನು ಸಕ್ರಮಗೊಳಿಸಬೇಕು ಎಂದು ಆಗ್ರಹಿಸಿ ಮನವಿ

 

 

ಕಾರವಾರ:ಕೋಡಿಬಾಗದ ಸರ್ವೋದಯನಗರದಲ್ಲಿ ಅರಣ್ಯ ಇಲಾಖೆಯ ಭೂಮಿಯನ್ನು ಅತಿಕ್ರಮಿಸಿ ಮನೆ ನಿರ್ಮಿಸಿಕೊಂಡು ವಾಸವಾಗಿರುವ ನಿರಾಶ್ರಿತ ಕುಟುಂಬಗಳ ಮನೆಗಳನ್ನು ತೆರುವುಗೊಳಿಸದೇ, ಅತಿಕ್ರಮವನ್ನು ಸಕ್ರಮಗೊಳಿಸಬೇಕು ಎಂದು ಆಗ್ರಹಿಸಿ ನಗರಸಭೆ ಸದಸ್ಯೆ ನೇಹಾ ಸುರೇಶ ನಾಯ್ಕ ನೇತೃತ್ವದಲ್ಲಿ 12 ಕುಟುಂಬಗಳ ಸದಸ್ಯರಿಂದ ಜಿಲ್ಲಾಕಾರಿಗೆ ಮನವಿ ಸಲ್ಲಿಲಿಸಿದರು.
ನಗರಸಭೆ ವಾರ್ಡ್ ನಂ.8ರ ವ್ಯಾಪ್ತಿಗೆ ಬರುವ ಕೋಡಿಬಾಗದ ಸರ್ವೇ ನಂ.12ಅ ರಲ್ಲಿ ಪಾಳು ಬಿದ್ದ ಅರಣ್ಯ ಇಲಾಖೆಗೆ ಸಂಬಂಧಪಟ್ಟ ಜಾಗದಲ್ಲಿ ಸುಮಾರು 40 ವರ್ಷಗಳಿಂದ ಇಲ್ಲಿನ ನಿರಾಶ್ರಿತರು ಮನೆಕಟ್ಟಿಕೊಂಡು ಬದುಕು ಕಟ್ಟಿಕೊಂಡಿದ್ದು ಇನ್ನು ಕೆಲವರು ಪಕ್ಕಾ ಮನೆಗಳನ್ನೂ ನಿರ್ಮಿಸಿಕೊಂಡಿದ್ದಾರೆ.
ಅವರ ಮಕ್ಕಳು ದೊಡ್ಡವರಾಗಿ ಬೆಳೆದು ಶಾಲೆ ಕಲಿತು, ಮದುವೆಯಾಗಿ ಅವರ ಮಕ್ಕಳೂ ಇಲ್ಲಿಯೇ ಬೆಳೆದು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಎಲ್ಲ ಕುಟುಂಬಗಳಿಗೆ ನಗರಸಭೆ ವತಿಯಿಂದ ಸ್ವಚ್ಛ ಭಾರತ ಯೋಜನೆಯಡಿಯಲ್ಲಿ ಶೌಚಾಲಯ ಕಟ್ಟಿಸಿಕೊಡಲಾಗಿದೆ. ಇದಲ್ಲದೇ ಘನ ತ್ಯಾಜ್ಯದ ವಿಲೇವಾರಿಯಾಗಿ ಪ್ರತಿ ದಿನ ನಗರಸಭೆ ವಾಹನಕ್ಕೆ ನೀಡಿ ಸಹಕರಿಸುತ್ತಿದ್ದಾರೆ ಎಂದು ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ.
ಇವರೆಲ್ಲರೂ ತೀರ ಬಡವರಾಗಿದ್ದು ಕೂಲಿ ನಾಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಜೀವನದ ಅರ್ಧ ಆಯುಷ್ಯವನ್ನೇ ಇಲ್ಲಿಯೇ ಕಳೆದಿದ್ದಾರೆ. ಇವರಿಗೆ ಬೇರೆ ಕಡೆ ತಮ್ಮದೇ ಆದ ಸ್ವಂತ ಜಮೀನು ಇಲ್ಲ. ಸರಕಾರದ ಪಡಿತರ ಬಿಟ್ಟರೆ ಮತ್ತ್ಯಾವ ಸವಲತ್ತು ಸಿಗದೇ ತಮ್ಮ ಪಾಡಿಗೆ ತಾವು ಬದುಕು ಸಾಗಿಸುತ್ತಿದ್ದಾರೆ. ಇಲ್ಲಿನ ಅರಣ್ಯ ಭೂಮಿಯಲ್ಲಿ ನಗರಸಭೆ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಿದ್ದು ಆ ಜಾಗದ ಪಕ್ಕದಲ್ಲಿಯೇ ಇರುವ ಜಾಗವನ್ನು ಇವರು ಅತಿಕ್ರಮಿಸಿಕೊಂಡು ಸಣ್ಣ ಪುಟ್ಟ ಮನೆ ನಿರ್ಮಿಸಿಕೊಂಡಿದ್ದಾರೆ. ಆದ್ದರಿಂದ ಇಂತಹ ಬಡವರ ನಿಸ್ಸಾಯಕತೆ ಸ್ಥಿತಿ ಅರ್ಥ ಮಾಡಿಕೊಂಡು ಅರಣ್ಯ ಹಕ್ಕು ಕಾಯ್ದೆಯಡಿ ಅತಿಕ್ರಮ ಸಕ್ರಮ ಮಾಡಲು ಸಾಧ್ಯವೇ ಎಂಬುದನ್ನು ಪರಿಶೀಲಿಸಿ ಸಕ್ರಮಗೊಳಿಸಿಕೊಡಬೇಕು ಎಂದು ಸದಸ್ಯೆ ಜಿಲ್ಲಾಕಾರಿಗೆ ಸಲ್ಲಿಸಿದ ಮನವಿಯಲ್ಲಿ ಕೋರಿದ್ದಾರೆ.
ಮನವಿಯನ್ನು ಅಪರ ಜಿಲ್ಲಾಕಾರಿ ಎಚ್.ಪ್ರಸನ್ನ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಎಂ.ನಾಗರಾಜ, ಸುರೇಶ ನಾಯ್ಕ,ಅಶೋಕ ಪಿ. ನಾಯ್ಕ, ಗಜೇಂದ್ರ ಆರ್. ನಾಯ್ಕ, ಪಾಂಡುರಂಗ ಸುರಂಗೇಕರ, ಚಂದ್ರಕಾಂತ್ ಅಂಬಿಗ, ಸೋಮಿ ಅಂಬಿಗ, ಕಲಾವತಿ ನಾಯ್ಕರ್, ಜಯಶ್ರೀ ಕುಡ್ತಳಕರ, ಕಮಲಾ ಕುಡ್ತಳಕರ್, ಲತಾ ಗುರು ಕುಡ್ತಳಕರ್, ರಮಾ ಕೇಶವ ವಂದಿಗೆ, ಪ್ರಕಾಶ ಅಂಬಿಗ ಮುಂತಾದವರು ಇದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.