ಮಂಡಿನೋವಿನ ಸಮಸ್ಯೆಗೆ ಡಿ.12 ಮತ್ತು 13 ರಂದು ಶಿಬಿರ

ಶಿರಸಿ : ಮಂಡಿನೋವಿನ ಸಮಸ್ಯೆಯ ಕುರಿತು ಅತಿ ಕಡಿಮೆ ಖರ್ಚಿನಲ್ಲಿ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಡಿಸೆಂಬರ 12 ಮತ್ತು 13 ರಂದು ನಗರದ ಅಜೀತ ಮನೋಚೇತನ ಆವರಣದಲ್ಲಿ ಶಿಬಿರ ಏರ್ಪಡಿಸಲಾಗಿದೆ.
ಮಂಡಿನೋವಿನ ಸಮಸ್ಯೆ ಉಂಟಾಗಿ ಬಡವರು ಚಿಕಿತ್ಸೆ ಮಾಡಿಸಿಕೊಳ್ಳಲು ಸಾಧ್ಯವಾಗದೇ ಒದ್ದಾಡುತ್ತಿರುವ ಸಂದರ್ಭದಲ್ಲಿ ದೇಶದ ವಿವಿಧ ಭಾಗಗಳಲ್ಲಿ ಕ್ಯಾಂಪ್ ನಡೆಸಿ ರೋಗಿಗಳಿಗೆ ತೀರಾ ಕಡಿಮೆ ಖರ್ಚಿನಲ್ಲಿ ಮಂಡಿನೋವಿನ ಸಮಸ್ಯೆಗೆ ಅನುಕೂಲ ಮಾಡಿಕೊಡುತ್ತಿರುವ ಕಾರವಾರದ ಡಾ.ವಿಜಯ ನಾಯ್ಕ ಅವರು ಶಿರಸಿಯಲ್ಲಿಯೂ ಶಿಬಿರ ನಡೆಸಲಿದ್ದಾರೆ.
ಈ ಕುರಿತು ಶಿಬಿರದ ಪ್ರಮುಖ ರೂವಾರಿ ನಾರಾಯಣ ಹೆಗಡೆ ಗಡಿಕೈ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಗುಜರಾತಿನ ಭಾವನಗರದ ಪಿ.ಎನ್.ಆರ್.ಸೊಸೈಟಿ ಫಾರ್ ರಿಲೀಫ್ ಎಂಡ್ ರೀಹೆಬಿಲಿಟೇಶನ್ ಆಫ್ ದಿ ಡಿಸೆಬಲ್ಡ್‍ನ ನಿರ್ದೇಶಕರಾದ ವಿಜಯ ನಾಯ್ಕ ಅಮೇರಿಕದ ನ್ಯೂಜೆರ್ಸಿಯ ಕೆಸ್ಲರ್ ಇನ್ಸ್ಟಿಟ್ಯೂಟ್‍ನಲ್ಲಿ ಮೊಣಕಾಲು ನೋವು ಹಾಗೂ ಅದರ ಚಿಕಿತ್ಸೆ ಕುರಿತು ಫೆಲೋಶಿಪ್ ಪೂರೈಸಿದ್ದಾರೆ. ಗುಜರಾತನ್ನು ತಮ್ಮ ಕೇಂದ್ರವಾಗಿ ಇಟ್ಟುಕೊಂಡು ಭಾರತದಾದ್ಯಂತ ಸಂಚರಿಸುತ್ತ ಉಚಿತ ವೈದ್ಯಕೀಯ ಶಿಬಿರಗಳನ್ನು ನಡೆಸಿ ಮೊಣಕಾಲು ಕಟ್ಟುಪಟ್ಟಿಗಳನ್ನು ವಿತರಿಸುತ್ತಿದ್ದು, ಕೇವಲ 2-3 ತಿಂಗಳಲ್ಲೇ ಮಂಡಿನೋವಿನಿಂದ ಬಳಲುತ್ತಿದ್ದವರು ನೋವಿನಿಂದ ಮುಕ್ತರಾಗಿ ಹಿಂದಿನ ಲವಲವಿಕೆಗೆ ಮರಳಿದ್ದಾರೆ ಎಂದರು.

ಮಂಡಿ ಸವಕಳಿ 50 ವರ್ಷ ದಾಟಿದ ಬಹಳಷ್ಟು ಜನರನ್ನು ಕಾಡುವ ಸಾಮಾನ್ಯ ಸಮಸ್ಯೆ. ಇದು ಕೆಲವರಲ್ಲಿ ಶೀಘ್ರವಾಗಿ ಕಾಣಿಸಿಕೊಳ್ಳುತ್ತದೆ. ಮೊಣಕಾಲ ಶಸ್ತ್ರಚಿಕಿತ್ಸೆ ಇದಕ್ಕೆ ಒಂದು ಪರಿಹಾರ. ಆದರೆ ಪ್ರತಿಯೋರ್ವ ಹಿರಿಯ ನಾಗರಿಕನೂ ತುಂಬಾ ದುಬಾರಿಯಾದ ಈ ಚಿಕಿತ್ಸೆಯನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ. ಒಂದು ಕಾಲಿನ ಶಸ್ತ್ರಚಿಕಿತ್ಸೆಗೇ ಸುಮಾರು ರೂ.2.50 ಲಕ್ಷ ತಗಲುತ್ತದೆ. ಡಾ.ವಿಜಯ ನಾಯ್ಕ ಅವರು 1999ರಲ್ಲಿ ವಿನ್ಯಾಸ ಮಾಡಿ ಪೇಟೆಂಟ್ ಪಡೆದುಕೊಂಡಿರುವ ಮೊಣಕಾಲು ಪಟ್ಟಿ ಶಸ್ತ್ರಚಿಕಿತ್ಸೆ ಇಲ್ಲದೆಯೇ ಈ ಸಮಸ್ಯೆಯನ್ನು ಪರಿಹರಿಸುತ್ತದೆ ಎನ್ನುವುದು ಆಶಾದಾಯಕ ಸಂಗತಿ. ಅದಲ್ಲದೇ ಅದರ ಬೆಲೆ ಸಹ ಶ್ರೀಸಾಮಾನ್ಯನಿಗೆ ಆರ್ಥಿಕವಾಗಿ ಭಾರವಲ್ಲ. ಎರಡೂ ಕಾಲುಗಳ ಮೊಣಕಾಲು ಪಟ್ಟಿಗಳ ಒಟ್ಟೂ ಮೌಲ್ಯ ಕೇವಲ 8000 ತಗಲುತ್ತಿದ್ದು, ಜೊತೆಗೆ ಈ ಪಟ್ಟಿ ಧರಿಸುವ ವ್ಯಕ್ತಿ ನೋವಿಲ್ಲದೆ ನಡೆದಾಡಬಹುದು, ಓಡಬಹುದು, ನೆಲದ ಮೇಲೆ ಸುಖಾಸನದಲ್ಲಿ ಕುಳಿತು ಕೊಳ್ಳಬಹುದು ಎಂದರು.

ಮುಂದಿನ ಶಿಬಿರಗಳಲ್ಲಿ ಮೊಣಕಾಲು ಪಟ್ಟಿ ಪಡೆದವರ ಉಚಿತ ಪರೀಕ್ಷೆ ಹಾಗೂ ಮಾರ್ಗದರ್ಶನ ಸಹ ನಡೆಯುತ್ತದೆ. ನೋಂದಣಿ ಮಾಡಿಕೊಳ್ಳಲು ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿ ನಿ. ಹೊಸ ಮಾರುಕಟ್ಟೆ ಪ್ರಾಂಗಣ, ಶಿರಸಿ ಇಲ್ಲಿ ನೊಂದಾಯಿಸಿಕೊಳ್ಳಬಹುದು ಹೆಚ್ಚಿನ ಮಾಹಿತಿಗೆ (ರಾಜೇಶ: 82773 49193, 08383-233163) ಸಂಪರ್ಕಿಸಬಹುದು ಎಂದು ತಿಳಿಸಿದರು.

ಈ ವೇಳೆ ಪ್ರಮುಖರಾದ ಶಂಬುಲಿಂಗ ಹೆಗಡೆ, ಎಸ್.ಜಿ.ಹೆಗಡೆ ಊರತೋಟ, ಎಸ್.ಎಂ.ಹೆಗಡೆ, ಉಮೇಶ ಹೆಗಡೆ, ಶ್ರೀಪಾದ ಹೆಗಡೆ ಉಪಸ್ಥಿತರಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.