ಕೃಷಿ ಕಾರ್ಮಿಕರ ಕಲ್ಯಾಣಕ್ಕೆ ಸರಕಾರದ ಪ್ರಾಮಾಣಿಕ ಪ್ರಯತ್ನವಿದೆ; ಶಾಸಕ ಹೆಬ್ಬಾರ್

ಯಲ್ಲಾಪುರ: ಸರ್ಕಾರ ಕೃಷಿಕ ಮತ್ತು ಕೃಷಿ ಕಾರ್ಮಿಕರಿಗೆ ಉಪಯುಕ್ತವಾಗುವ ಅನೇಕ ಯೋಜನೆಗಳನ್ನು ಪ್ರಾಮಾಣಿಕವಾಗಿ ಅನುಷ್ಟಾನಗೊಳಿಸುವಲ್ಲಿ ಬದ್ದತೆಯಿಂದ ಕಾರ್ಯನಿರ್ವಹಿಸುತ್ತಿದೆ ಎಮದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು. ಅವರು ತಾಲೂಕಿನ ಹಿತ್ಲಳ್ಳಿಯ ಸೇವಾ ಸಹಕಾರಿ ಸಂಘದ ಆವಾರದಲ್ಲಿ ಎ.ಪಿ.ಎಂ.ಸಿ ನೆರವಿನಿಂದ 33 ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಿಸಲಾಗುವ ನೂತನ ಗೋದಾಮಿಗೆ ಗುದ್ದಲಿ ಪೂಜೆ; ಹಾಗೂ 8.25 ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಿಸಲಾದ ಗೋದಾಮು ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು. ಈ ಬಾರಿ ಹಿತ್ಲಳ್ಳಿ ಸಂಘದ ವ್ಯಾಪ್ತಿಯ 275 ರೈತರಿಗೆ 1.29 ಕೋಟಿ ರೂಗಳ ಸಾಲಮನ್ನಾ ಪ್ರಯೋಜನ ದೊರೆತಿದ್ದು, ತಾಲೂಕಿನಲ್ಲಿ ವಿವಿಧ ಪ್ರದೇಶದ ರೈತರಿಗೆ 26.90 ಕೋಟಿ ಸಾಲಮನ್ನಾ ಪ್ರಯೋಜನ ದೊರೆತಿದೆ. ಸರ್ಕಾರ ರೈತರಿಗೆ ಅನುಕೂಲವಾಗುವಂತಹ ಪಶುಭಾಗ್ಯ, ಕೃಷಿಭಾಗ್ಯ ಇತ್ಯಾದಿ ಯೋಜನೆಗಳನ್ನು ಜಾರಿಗೊಳಿಸಿದ್ದು, ಈ ಬಾರಿ ವಿಶೇಷವಾಗಿ ತಾಲೂಕಿನ ಅಡಕೆ ಬೆಳೆಗಾರರಿಗೆ 87 ಕೋಟಿಯಷ್ಟು ಅಧಿಕ ಪ್ರಮಾಣದ ಸಾಲಮನ್ನಾ ದೊರೆಯುವಲ್ಲಿ ಸರ್ಕಾರದ ಮುತುವರ್ಜಿ ಎದ್ದು ಕಾಣುವಂತಿದೆ. ಕಳೆದ ಅನೇಕ ವರ್ಷಗಳಿಂದ ಸಾಲ ವಸೂಲಾತಿ ಸಮರ್ಪಕವಾಗದೇ ತತ್ತರಿಸುತ್ತಿದ್ದ ಪಿ.ಎಲ್.ಡಿ ಬ್ಯಾಂಕ್ ಶೇ.85 ರಷ್ಟು ಸಾಲ ವಸೂಲಾತಿ ಮಾಡಿದೆ ಎಂದರು. ಸಹಕಾರಿ ಕ್ಷೇತ್ರದಲ್ಲಿಯೂ ಕೃಷಿಕರ ನೆರವಿಗಾಗಿ ವಿವಿಧ ದಿಟ್ಟ ಕ್ರಮಗಳನ್ನು ಕೈಗೊಂಡಿರುವ ಸರ್ಕಾರ ಕ್ಷೇತ್ರದಲ್ಲಿ ರೈತರಿಗೆ ಉಚಿತ ಪಂಪ್‍ಸೆಟ್ ನೀಡಲೆಂದು 39 ಕೋಟಿ ರೂಗಳನ್ನು ಒದಗಿಸಿದೆ. ತಾಲೂಕಿನಲ್ಲಿ ದಿನವೊಂದಕ್ಕೆ ಸಂಗ್ರಹವಾಗುತ್ತಿರುವ 86 ಲಕ್ಷ ಲೀ.ಹಾಲಿಗಾಗಿ 4 ಕೋಟಿಗಳಷ್ಟು ಹಣವನ್ನು ಸಬ್ಸಿಡಿ ಮೂಲಕ ನೀಡುತ್ತಿದೆ. ಗುಳ್ಳಾಪುರದಲ್ಲಿ 8 ಕೋಟಿ ರೂ ವೆಚ್ಚದಲ್ಲಿ ಸ್ಥಾಪನೆಯಾಗಲಿರುವ ವಿದ್ಯುತ್ ಉಪಕೇಂದ್ರ ಸೇರಿದಂತೆ ತಾಲೂಕಿನಲ್ಲಿ ವಿದ್ಯುತ್ ಸಂಪರ್ಕದ ಸಮರ್ಪಕತೆಗಾಗಿ 3 ಉಪಕೇಂದ್ರಗಳು ಮಂಜೂರಿಗೊಂಡಿದ್ದು, ಶೀಘ್ರದಲ್ಲಿಯೇ ಅವುಗಳ ಶಿಲಾನ್ಯಾಸ ನೆರವೇರಲಿದೆ. ಎಲ್ಲಕ್ಕಿಂತ ವಿಶೇಷವೆಂದರೆ ಕಳೆದ 30-40 ವರ್ಷಗಳ ನಾಗರಿಕರ ಬೇಡಿಕೆಯಂತೆ ತಾಲೂಕಿನ ಗಡಿ ಭಾಗದ ಗಣೇಶಪಾಲಿನಲ್ಲಿ ಸೇತುವೆ ನಿರ್ಮಾಣಕ್ಕೆ ಸರ್ಕಾರದ ಹಸಿರುನಿಶಾನೆ ದೊರೆತಿದ್ದು, ಶೀಘ್ರದಲ್ಲಿಯೇ ಈ ಕಾಮಗಾರಿ ಆರಂಭಗೊಳ್ಳಲಿದೆ. ಸಂಘಕ್ಕೆ ಅಫೆಕ್ಸ ಬ್ಯಾಂಕ್‍ನಿಂದ ಕಂಪ್ಯೂಟರ್ ಖರೀದಿಗಾಗಿ 1 ಲಕ್ಷ ರೂಗಳ ಅನುದಾನ ನೀಡಲಾಗುವುದು ಎಂದು ಪ್ರಕಟಿಸಿದರು. ಅಧ್ಯಕ್ಷತೆ ವಹಿಸಿದ್ದ ಡಿ.ಟಿ.ಹೆಗಡೆ ಮಾತನಾಡಿ, ಈ ಭಾಗದ ಕೃಷಿಕರ ಜೀವನಾಡಿಯಾಗಿರುವ ಸಂಘವು ಸಾಧ್ಯವಿದ್ದಷ್ಟು ನೆರವನ್ನು ನೀಡಿ ರೈತ ಸಮುದಾಯದ ಸರ್ವಾಂಗೀಣ ಅಭಿವೃದ್ಧಿ ದಿಸೆಯಲ್ಲಿ ಕಾರ್ಯೋನ್ಮುಖವಾಗಿದೆ ಎಂದರು. ಎ.ಪಿ.ಎಂ.ಸಿ ಅಧ್ಯಕ್ಷ ಎಂ.ಜಿ.ಭಟ್ಟ, ತಾ.ಪಂ ಅಧ್ಯಕ್ಷೆ ಭವ್ಯಾ ಶೆಟ್ಟಿ, ಸದಸ್ಯೆ ರಾಧಾ ಹೆಗಡೆ, ಎ.ಪಿ.ಎಂ.ಸಿ ನಿರ್ದೇಶಕರಾದ ಮುರಳಿ ಹೆಗಡೆ, ಸದಾನಂದ ಭಟ್ಟ, ಸುಪ್ರಿಯಾ ಹೆಗಡೆ, ಸುನಂದಾ ಹೆಗಡೆ, ಗ್ರಾ.ಪಂ ಸದಸ್ಯರಾದ ಗೌರಿ ಸಿದ್ದಿ, ರವಿ ಹೆಗಡೆ ಹಿರೇಸರ, ಪ್ರಮುಖ ನಾಗೇಂದ್ರ ಹರಿಗದ್ದೆ ಉಪಸ್ಥಿತರಿದ್ದರು. ಉಪಾಧ್ಯಕ್ಷ ಗಣಪತಿ ಹಿರೇಸರ ಸ್ವಾಗತಿಸಿದರು. ಶ್ರೀಧರ ನಾಯ್ಕ ವಂದಿಸಿದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.