ಆದರ್ಶದ ಜೀವನಕ್ಕೆ ಯಕ್ಷಗಾನ ಪೂರಕ; ಶಂಕರ ಭಾಗವತ

ಸಿದ್ದಾಪುರ: ಆದರ್ಶದ ಜೀವನ ನಡೆಸಲು ಯಕ್ಷಗಾನ ಪೂರಕ. ಯಕ್ಷಗಾನ ಕಲೆಯಿಂದ ಸಿಗುವ ಸಂದೇಶ ಜೀವನದ ಮೌಲ್ಯವನ್ನು ಹೆಚ್ಚಿಸುತ್ತದೆ ಎಂದು ಹಿರಿಯ ಯಕ್ಷಗಾನ ಭಾಗವತ ಶಂಕರ ಭಾಗವತ ಗಿರಿಗಡ್ಡೆ ಹೇಳಿದರು. ತಾಲೂಕಿನ ಕಾನಸೂರಿನ ಟಿಎಂಎಸ್ ಸಭಾಭವನದಲ್ಲಿ ಕಲಾ ಭಾಸ್ಕರ ಇಟಗಿ ಮೂರುದಿನಗಳ ಕಾಲ ಆಯೋಜಿಸಿದ್ದ ಶರದ್ ಕಲಾ ಉತ್ಸವವನ್ನು ಶುಕ್ರವಾರ ಸಂಜೆ ಉದ್ಘಾಟಿಸಿ ಅವರು ಮಾತನಾಡಿದರು. ಯಕ್ಷಗಾನದಂತ ಕಲೆಯನ್ನು ಬಿಟ್ಟು ಇಂದಿನ ಯುವಸಮುದಾಯ ಮನಸ್ಸನ್ನು ಕೆರಳಿಸುವ ಮೊಬೈಲ್, ದೂರದರ್ಶನ ಮೊದಲಾದ ಯಾಂತ್ರಿಕ ಸಾಧನಕ್ಕೆ ಮಾರುಹೋಗಿ ಶ್ರೇಷ್ಠ ಕಲೆಯ ಸಂಪರ್ಕದಿಂದ ದೂರ ಸಾಗಿದ್ದಾರೆ. ಅದರಿಂದ ನೆಮ್ಮದಿಯೂ ದೂರವಾಗುತ್ತಿದೆ. ಕಲಾವಿದರಿಗೆ ಆಶ್ರಯ ನೀಡುವ ಕಲೆಗಳಿಗೆ ಪ್ರೋತ್ಸಾಹ ಅಗತ್ಯ. ಸಂಘಟನೆ ಬಲಗೊಂಡರೆ ಕಲೆ ಉಳಿಯುತ್ತದೆ. ಬೆಳೆಯುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಮಧುಕೇಶ್ವರ ಹೆಗಡೆ ಹೂಡ್ಲಮನೆ ಮಾತನಾಡಿ ಯಕ್ಷಗಾನದಿಂದ ಧಾರ್ಮಿಕ ಮನೋಭಾವನೆ ಜಾಗೃತವಾಗುತ್ತದೆ. ಹಾಗೂ ಸ್ವಸ್ಥ ಸಮಾಜನಿರ್ಮಾಣಕ್ಕೆ ಯಕ್ಷಗಾನ ಅಗತ್ಯ ಎಂದು ಹೇಳಿದರು. ಉದ್ಯಮಿ ಆರ್.ಜಿ.ಶೇಟ್, ಟಿಎಂಎಸ್ ಕಾನಸೂರು ಶಾಖಾ ವ್ಯವಸ್ಥಾಪಕ ಎಸ್.ವಿ.ಹೆಗಡೆ ಉಪಸ್ಥಿತರಿದ್ದರು. ಕಲಾಭಾಸ್ಕರದ ಅಧ್ಯಕ್ಷ ಇಟಗಿ ಮಹಾಬಲೇಶ್ವ ಭಟ್ಟ, ಕಾರ್ಯದರ್ಶಿ ವಿನಾಯಕ ಹೆಗಡೆ ನಿರ್ವಹಿಸಿದರು. ನಂತರ ವಿಭೀಷಣ ನೀತಿ ತಾಳಮದ್ದಳೆ ಪ್ರಸ್ತುತಗೊಂಡಿತು. ಹಿಮ್ಮೇಳದಲ್ಲಿ ಭಾಗವತರಾಗಿ ಕೆ.ಎನ್. ಭಾರ್ಗವ ಸಾಗರ, ಮದ್ದಳೆಯಲ್ಲಿ ನಿಟ್ಟೂರಿನ ಏ.ಜಿ. ವೆಂಕಟರಮಣ ಸಾಥ್ ನೀಡಿದರು. ಮುಮ್ಮೇಳದಲ್ಲಿ ಲಕ್ಷ್ಮೀಕಾಂತ ಹೆಗಡೆ ಕೊಂಡದಕುಳಿ(ವಿಭೀಷಣ), ಬಿ.ಟಿ. ಅರುಣ ಸಾಗರ( ರಾವಣ), ಇಟಗಿ ಮಹಾಬಲೇಶ್ವರ (ಕೈಕಸೆ), ವಿನಾಯಕ ಕವಲಕೊಪ್ಪ(ರಾಮ), ಸುಬ್ರಹ್ಮಣ್ಯ ಭಟ್ಟ ಗೋಳಿಕೈ(ಇಂದ್ರಜಿತು) ಪಾತ್ರ ನಿರ್ವಹಿಸಿ ಮೆಚ್ಚುಗೆಗಳಿಸಿದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.