ಬೇಡ್ಕಣಿಯಲ್ಲಿ ಮದ್ಯಮಾರಾಟ ತಡೆಗಾಗಿ ಬ್ರಹತ್ ಜಾಥಾ

 

ಸಿದ್ದಾಪುರ; ತಾಲೂಕಿನ ಬೇಡ್ಕಣಿಯ ಕೇರಿ-ಕೇರಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟವಾಗುತ್ತಿದೆ. ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಈ ಕಾಳ ದಂಧೆಯನ್ನು ತಡೆಯಬೇಕು ಎಂದು ಊರಿನ ಸ್ತ್ರೀಶಕ್ತಿ ಸಂಘಗಳು, ಸ್ವಸಹಾಯ ಸಂಘಗಳು, ಮಹಿಳಾ ಸಂಘಗಳು, ಊರನಾಗರಿಕರು, ಕುಡುಕರಿಂದ ನೊಂದ ಮಹಿಳೆಯರು ಬೇಡ್ಕಣಿಯ ಹಕ್ಕಲಕೇರಿ ಸುಭಾಸ ಮೈದಾನದಿಂದ ಗ್ರಾಮ ಪಂಚಾಯತ ಕಛೇರಿವರೆಗೆ ಜಾಥಾ ನಡೆಸಿ ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿ.ಪಂ.ಸದಸ್ಯ ನಾಗರಾಜ ನಾಯ್ಕ ಬೇಡ್ಕಣಿ ಅವರು ತಮ್ಮ ಯಜಮಾನರು, ಮಕ್ಕಳು, ಮನೆಯ ಸದಸ್ಯರು ಚಟದಿಂದ ಹಾಳಾಗಬಾರದೆಂಬ ಮಹಿಳೆಯರ ಕಳಕಳಿಯನ್ನು ಈ ಜಾಥಾದಿಂದ ಅರಿತುಕೊಳ್ಳಬಹುದು. ಸಾರಾಯಿ ಹಾವಳಿಯಿಂದಾಗಿ ಯುವಜನಾಂಗ, ಸಮಾಜ ಹಾಳಾಗುತ್ತಿದೆ. ಸುಲಭದಲ್ಲಿ ಸಿಗುತ್ತದೆಂದು ಹೆಚ್ಚಿನ ಜನರು ಕುಡಿಯತೊಡಗಿದ್ದಾರೆ. ಇದರಿಂದ ಈ ಭಾಗದ ನೂರಾರು ಕುಟುಂಬಗಳ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಅಕ್ರಮ ಮದ್ಯ ಮಾರಾಟಮಾಡುವವರನ್ನು ಹಿಡಿಯಲು ಅಬಕಾರಿ ಇಲಾಖೆಯವರಿಗೆ, ಪೊಲೀಸರಿಗೆ ನಮ್ಮ ಸಹಕಾರವಿದೆ. ಒಟ್ಟಾರೆಯಾಗಿ ಮಹಿಳೆಯರ ಕಣ್ಣೀರನ್ನು ಒರೆಸುವ ಕೆಲಸ ಮಾಡಬೇಕಾಗಿದೆ ಎಂದರು.
ಬೇಡ್ಕಣಿ ಗ್ರಾ.ಪಂ.ಅಧ್ಯಕ್ಷೆ ಸವಿತಾ ನಾಯ್ಕ, ಉಪಾಧ್ಯಕ್ಷ ಉಮೇಶ ನಾಯ್ಕ ಮಾತನಾಡಿ ಕಳ್ಳಬಟ್ಟಿ ಮಾರಾಟ ನಿಷೇಧಿಸುವಲ್ಲಿ ಯಶಸ್ವಿಯಾಗಿದ್ದೇವೆ. ಸರಕಾರದ ಮಾನ್ಯತೆಯಿರುವ ಕೊಟ್ಟೆ ಸಾರಾಯಿ ನಿಗ್ರಹಿಸಲು ಸಾಧ್ಯವಾಗುತ್ತಿಲ್ಲ ಎಂದರು. ಸಮೃದ್ಧಿ ಗೊಂಚಲು ಸಂಘದ ಉಪಾಧ್ಯಕ್ಷೆ ವೇದಾ ಈರಪ್ಪ ನಾಯ್ಕ, ಗ್ರಾ.ಪಂ.ಸದಸ್ಯೆ ಶಾಂತಲಾ ನಾಯ್ಕ, ಪದ್ಮಾವತಿ ನಾಯ್ಕ ಮುಂತಾದವರು ಅನಿಸಿಕೆ ವ್ಯಕ್ತಪಡಿಸಿ ಸರಕಾರದ್ದಿರಲಿ, ಯಾರದೇ ಇರಲಿ ಯಾವ ಮದ್ಯವೂ ನಮ್ಮೂರಿಗೆ ಬೇಡ ಎಂದು ಮದ್ಯಮಾರಾಟವನ್ನು ಖಂಡಿಸಿದರು. ಸಮೃದ್ಧಿ ಗೊಂಚಲು ಸಂಘದ ಅಧ್ಯಕ್ಷೆ ಪೂರ್ಣಿಮಾ ಸದಾನಂದ ನಾಯ್ಕ ಮನವಿ ವಾಚಿಸಿದರು. ಗ್ರಾ.ಪಂ.ಸದಸ್ಯರಾದ ಹನುಮಂತ ನಾಯ್ಕ, ಶಿವಕುಮಾರ ಗೌಡರ್, ಪದ್ಮಪ್ರಿಯಾ ನಾಯ್ಕ, ಈರಪ್ಪ ನಾಯ್ಕ, ಪಾರ್ವತಿ ಚನ್ನಯ್ಯ ಮುಂತಾದವರು ಪಾಲ್ಗೊಂಡಿದ್ದರು. ಪಿಡಿಒ ಬಂಗಾರಪ್ಪ ಡಿ.ಎಚ್., ಸಿಪಿಐ ಜಯಂತ ಎಂ., ಅಬಕಾರಿ ಅಧಿಕಾರಿ ಡಿ.ಎನ್.ಸಿರ್ಸಿಕರ್ ಅವರುಗಳಿಗೆ ಮದ್ಯ ಮಾರಾಟ ನಿಲ್ಲಿಸುವಂತೆ ಆಗ್ರಹಿಸುವ ಪ್ರತ್ಯೇಕ ಮನವಿ ಸಲ್ಲಿಸಲಾಯಿತು. ಸಮೃದ್ಧಿ ಗೊಂಚಲು ಸಂಘದವರು, ವಿವಿಧ ಸ್ತ್ರೀಶಕ್ತಿ ಸಂಘಗಳ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.