ನ.13 ರಿಂದ 16 ರವರೆಗೆ ಜಿಲ್ಲೆಯಲ್ಲಿ ಬಿಜೆಪಿ ಪರಿವರ್ತನಾ ರ‌್ಯಾಲಿ : ಕೆ ಜಿ ನಾಯ್ಕ

ಶಿರಸಿ : ಬಿಜೆಪಿ ಪರಿವರ್ತನಾ ರ್ಯಾಲಿ ಉತ್ತರ ಕನ್ನಡ ಜಿಲ್ಲೆಯ 6 ಕ್ಷೇತ್ರಗಳಲ್ಲಿ ನ.13 ರಿಂದ 16 ರವರೆಗೆ ನಡೆಯಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜಿ.ನಾಯ್ಕ ತಿಳಿಸಿದರು.
ಪರಿವರ್ತನಾ ರ್ಯಾಲಿ ವಿಷಯವಾಗಿ ಬುಧವಾರ ಇಲ್ಲಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಶೋಭಾ ಕಂರದ್ಲಾಜೆ, ಶ್ರೀರಾಮುಲು, ಜಗದೀಶ ಶೆಟ್ಟರ್, ಕುಮಾರ ಬಂಗಾರಪ್ಪ ಮುಂತಾದ ರಾಜ್ಯ ನಾಯಕರು ರ‌್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಉತ್ತರ ಕನ್ನಡದಲ್ಲಿ ನ.13 ರಂದು ಭಟ್ಕಳದಲ್ಲಿ ಸಂಜೆ 6 ಗಂಟೆಯಿಂದ ಪರಿವರ್ತನಾ ರ್ಯಾಲಿ ನಡೆಯಲಿದೆ. ಅದರಂತೇ ನ.14 ರಂದು ಬೆಳಿಗ್ಗೆ 11 ಕ್ಕೆ ಕುಮಟಾ ಮಣಕಿ ಮೈದಾನ, ಮಧ್ಯಾಹ್ನ 3 ಗಂಟೆಗೆ ಅಂಕೊಲಾದ ಜೈಹಿಂದ್ ಹೈಸ್ಕೂಲ್ ಮೈದಾನ, ಸಂಜೆ 6 ಗಂಟೆ ಶಿರಸಿಯ ವಿಕಾಸ ಆಶ್ರಮ ಮೈದಾನ, ನ.16 ರಂದು ಬೆಳಿಗ್ಗೆ 11 ಗಂಟೆಗೆ ತಾಲೂಕಾ ಕ್ರೀಡಾಂಗಣ ಮುಂಡಗೋಡ ಹಾಗೂ ಮಧ್ಯಾಹ್ನ 3 ಗಂಟೆಗೆ ಶಿವಾಜಿ ಕ್ರೀಡಾಂಗಣ ಹಳಿಯಾಳದಲ್ಲಿ ರ್ಯಾಲಿ ನಡೆಯಲಿದೆ. ಮಧ್ಯದಲ್ಲಿ ನ.15 ರಂದು ರ್ಯಾಲಿಗೆ ವಿಶ್ರಾಂತಿ ನೀಡಲಾಗಿದೆ. ಅಲ್ಲದೇ ರ್ಯಾಲಿಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು.

ಟಿಪ್ಪು ಜಯಂತಿಯನ್ನು ಆಚರಿಸುವುದನ್ನು ಬಿಜೆಪಿಯವರು ರಾಜ್ಯದಾದ್ಯಂತ ವಿರೋಧಿಸಿದ್ದಾರೆ. ಟಿಪ್ಪು ಒಬ್ಬ ಮತಾಂಧ. ಅವನ ಸಾಮ್ರಾಜ್ಯವನ್ನು ಉಳಿಸಿಕೊಳ್ಳಲು ಹೋರಾಡಿದ್ದು ಬಿಟ್ಟರೆ ಸ್ವಾತಂತ್ರ್ಯಕ್ಕಾಗಿ ಅವನು ಹೋರಾಟ ನಡೆಸಿಲ್ಲ. ಅಲ್ಪಸಂಖ್ಯಾತರ ಒಲೈಕೆಗಾಗಿ ಕಾಂಗ್ರೆಸ್ ಈ ರೀತಿ ಮಾಡುತ್ತಿದೆ. ಅವನ ಜಯಂತಿಯ ಆಚರಣೆ ಮೂಲಕ ಮತಾಂಧರಿಗೆ ಕಾಂಗ್ರೆಸ್ ಪ್ರಚೋದನೆ ನೀಡುತ್ತಿದೆ.ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತೊಬ್ಬ ಟಿಪ್ಪುವಿನಂತೆ ಕಾಡುತ್ತಿದ್ದಾರೆ. ಇದರಲ್ಲಿ ಬಿಜೆಪಿಯ ಯಾವುದೇ ಬಿಜೆಪಿಯ ಜನಪ್ರತಿನಿಧಿಗಳು, ಕಾರ್ಯಕರ್ತರು, ಪದಾಧಿಕಾರಿಗಳು ಪಾಲ್ಗೊಳ್ಳಬಾರದು ಎಂದು ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಆರ್.ವಿ.ಹೆಗಡೆ, ರವಿ ಹೆಗಡೆ, ಗಣಪತಿ ನಾಯ್ಕ, ರಮಾಕಾಂತ್ ಭಟ್ ಮುಂತಾದವರು ಇದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.