ನೋಟು ಅಮಾನ್ಯೀಕರಣದಿಂದ ದೇಶ ಐವತ್ತು ವರ್ಷದ ಹಿಂದೆ ಸಾಗಿದೆ: ಆರ್.ಎಂ.ಹೆಗಡೆ ಬಾಳೇಸರ

 

ಸಿದ್ದಾಪುರ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಯಾರನ್ನೂ ವಿಶ್ವಾಸಕ್ಕೆ ಪಡೆದುಕೊಳ್ಳದೇ 500 ಹಾಗೂ 1000ರೂ ಮುಖಬೆಲೆಯ ನೋಟು ಅಮಾನ್ಯೀಕರಣಗೊಳಿಸಿ ಸಾಧಿಸಿದ್ದೇನು?. ಛಿಹಾಗೂ ಜಿ.ಎಸ್.ಟಿ.ಯನ್ನು ಜಾರಿಗೆ ತಂದಿರುವುದರಿಂದ ದೇಶ ಅಭಿವೃದ್ಧಿ ಸಾಧಿಸುವುದಕ್ಕಿಂತ ಐವತ್ತು ವರ್ಷದ ಹಿಂದೆ ಸಾಗಿದೆ ಎಂದು ಜಿಲ್ಲಾ ಕಾಂಗ್ರೆಸ್‍ನ ಕಾನೂನು ವಿಭಾಗದ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ಹೇಳಿದರು.
ಪಟ್ಟಣದಲ್ಲಿ ಬುಧವಾರ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನೋಟು ಅಮಾನ್ಯೀಕರಣದಿಂದ ಸಣ್ಣ ಸಣ್ಣ ವ್ಯಾಪಾರಸ್ಥರು,ಜನಸಾಮಾನ್ಯರು ಸಂಕಟ ಪಡುವ ಸ್ಥಿತಿ ಇಂದಿಗೂ ಕಾಣುತ್ತೇವೆ. ಕಪ್ಪು ಹಣವನ್ನು ಹೊರತಂದು ಬಡವರ ಖಾತೆಗೆ 15ಲಕ್ಷ ಜಮಾ ಮಾಡುತ್ತೇವೆ ಎಂದು ಹೇಳಿಕೆ ನೀಡಿದ್ದ ಪ್ರಧಾನ ಮಂತ್ರಿಯವರು ಇನ್ನೂ ಯಾರ ಖಾತೆಗೂ ಜಮಾ ಮಾಡಿಲ್ಲ. ಸ್ಥಿರ ಆರ್ಥಿಕತೆ ಹೊಂದಿರುವ ಯಾವ ದೇಶವೂ ಮಾಡದಂತಹ ಕೆಲಸವನ್ನು ಪ್ರದಾನಿಯವರು ಮಾಡಿ ಅದನ್ನು ಸರ್ಜಿಕಲ್ ಸ್ಟ್ರೈಕ್ ಎಂದು ಕರೆದು ಆ ಮೂಲಕ ಕಪ್ಪು ಹಣ, ನಕಲಿ ನೋಟುಗಳ ಹಾವಳಿ ಮತ್ತು ಭಯೋತ್ಪಾದನೆಗೆ ಹಣಕಾಸು ಒದಗಿಸುವುದನ್ನು ತಡೆಯುತ್ತೇವೆ ಎಂದು ದೇಶದ ಜನತೆಗೆ ಹೇಳಿದ್ದರು.
ನೋಟು ಅಮಾನ್ಯೀಕರಣದಿಂದ ಶೇ.98.96ನಷ್ಟು ವ್ಯವಹಾರಿಕ ಚಟುವಟಿಕೆಗಳು ಅಸಹಾಯಕತೆಯಿಂದ ಸ್ಥಗಿತಗೊಂಡು ಜನತೆ ತೊಂದರೆ ಪಡುವಂತಾಗಿದೆ. ಆದ್ದರಿಂದ ನ.8ಎನ್ನುವುದು ದೇಶದ ಜನತೆಗೆ ಕರಾಳದಿನವಾಗಿದೆ.
ನೋಟು ಅಮಾನ್ಯೀಕರಣದಿಂದ ಸಹಕಾರಿ ಸಂಘಗಳಲ್ಲಿ ವ್ಯವಹಾರ ನಡೆಸುವುದು ಅಸಾಧ್ಯವಾಗಿದೆ. ಕೇಂದ್ರ ಸರ್ಕಾರ ಸಹಕಾರಿ ಸಂಘಗಳನ್ನು ಕಳ್ಳರಂತೆ ನೋಡುತ್ತಿದೆ. ಕೇಂದ್ರ ಹಣಕಾಸು ಮಂತ್ರಿಗಳು ನೋಟು ಅಮಾನ್ಯೀಕರಣ ಆದಾಗಿನಿಂದ ಕಾದು ನೋಡಿ ಎಂದು ಹೇಳುತ್ತಿದ್ದಾರೆ. ಏನೂ ಪ್ರಗತಿ ಸಾಧಿಸಿಲ್ಲ ಎಂದು ಹೇಳಿದರು.
ನೋಟು ಅಮಾನ್ಯೀಕರಣದಿಂದ ಜನತೆಗೆ ಆಗುತ್ತಿರುವ ತೊಂದರೆಯನ್ನು ಖಂಡಿಸಿ ತಾಲೂಕು ಕಾಂಗ್ರೆಸ್ ಕರಾಳ ದಿನವನ್ನಾಗಿ ಆಚರಿಸಿ ನಂತರ ತಹಸೀಲ್ದಾರರ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಿದರು.
ಉಪತಹಸೀಲ್ದಾರ ನಾಗರಾಜ ನಾಯ್ಕಡ ಅವರಿಗೆ ಆರ್.ಎಂ.ಹೆಗಡೆ ಬಾಳೇಸರ ಮನವಿ ಸಲ್ಲಸಿದರು. ಎಂ.ಆರ್.ಹೆಗಡೆ, ಈಶ್ವರ ನಾಯ್ಕ ಮನಮನೆ, ಎನ್.ಡಿ.ನಾಯ್ಕ ಐಸೂರು, ರಾಜು ಕಟ್ಟೆಮನೆ, ಕೆ.ಟಿ.ಹೊನ್ನೆಗುಂಡಿ, ಅಣ್ಣಪ್ಪ ಶಿರಳಗಿ, ಜಗದೀಶ ನಾಯ್ಕ ಇತರರಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.