ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆಯಿಂದ ಅನಂತಕುಮಾರ್ ಹೆಸರು ಕೈಬಿಡಲು ನಿರ್ಧಾರ

ಕಾರವಾರ: ಟಿಪ್ಪು ಜಯಂತಿಯ ಯಾವುದೇ ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರು ನಮೂದಿಸುವುದು ಬೇಡ ಎಂದು ಸಚಿವರು ಅನಂತಕುಮಾರ್ ಹೆಗಡೆ ಅವರು ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಹೆಸರು ಹಾಕಬೇಕು, ಬೇಡವೋ ಎನ್ನುವ ಗೊಂದಲವೀಗ ದೂರವಾಗಿದೆ.
ಕೇಂದ್ರ ಸಚಿವರ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಹಾಕಬೇಕೋ ಬೇಡವೋ ಎನ್ನುವ ಬಗ್ಗೆ ಉತ್ತರ ಕನ್ನಡ ಜಿಲ್ಲಾಡಳಿತ ಸರಕಾರದ ಮಖ್ಯಕಾರ್ಯದರ್ಶಿಗೆ ಪತ್ರ ಬರೆಯಲಾಗಿತ್ತು. ಈ ಬಗ್ಗೆ ಉತ್ತರ ನೀಡಿರುವ ಮುಖ್ಯ ಕಾರ್ಯದರ್ಶಿ, ಜನಪ್ರತಿನಿಧಿಗಳು ತಮ್ಮ ಹೆಸರು ನಮೂದಿಸುವುದು ಬೇಡ ಎಂದು ಆಯಾ ಜಿಲ್ಲಾಡಳಿತಕ್ಕೆ ಕೋರಿಕೆ ಸಲ್ಲಿಸಿದ್ದರೇ ಅಂಥ ಜನಪ್ರತಿನಿಧಿಗಳ ಹೆಸರು ಆಹ್ವಾನ ಪತ್ರಿಕೆಯಲ್ಲಿ ಪ್ರಕಟಿಸದಂತೆ ಸೂಚನೆ ನೀಡಿದೆ.
ಇದರಿಂದಾಗಿ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ನಮೂದಿಸಬೇಕೋ ಬೇಡವೋ ಎಂಬ ಗೊಂದಲದಲ್ಲಿದ್ದ ಜಿಲ್ಲಾಡಳಿತಕ್ಕೆ ಪರಿಹಾರ ದೊರೆತಂತಾಗಿದೆ. ಸರಕಾರದಿಂದ ನ.10 ರಂದು ಆಚರಿಸಲ್ಪಡುವ ಟಿಪ್ಪು ಜಯಂತ್ಯುತ್ಸವದ ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರನ್ನು ನಮೂದಿಸಬಾರದು ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ರಾಜ್ಯ ಸಚಿವ ಅನಂತ ಕುಮಾರ ಹೆಗಡೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದರು. ಆದರೆ ಶಿಷ್ಟಾಚಾರ ಪಾಲನೆಗಾಗಿ ಎಲ್ಲ ಜನಪ್ರತಿನಿಧಿಗಳ ಹೆಸರನ್ನು ನಮೂದಿಸುವುದು ಅವಶ್ಯವಾಗಿದ್ದರಿಂದ ಜಿಲ್ಲಾಡಳಿತವು ಈ ಬಗ್ಗೆ ಸೂಕ್ತ ಉತ್ತರಕ್ಕಾಗಿ ಸರಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಕೋರಿತ್ತು.
ಅದರಂತೆ ಪತ್ರದ ಮೂಲಕ ಪ್ರತಿಕ್ರಿಯಿಸಿರುವ ಮುಖ್ಯ ಕಾರ್ಯಧರ್ಶಿ ಡಾ. ಬಿ.ಎಸ್. ಮಂಜುನಾಥ ಸ್ವಾಮಿ ಅವರು ರಾಜ್ಯ ಶಿಷ್ಟಾಚಾರದ ನಿಯಮಗಳ ಪ್ರಕಾರ ಸರಕಾರದ ಸಭೆ ಸಮಾರಂಭಗಳಿಗೆ ಜನ ಪ್ರತಿನಿಧಿಗಳನ್ನು ಆಹ್ವಾನಿಸುವಾಗ ಅನುಸರಿಸಬೇಕಾದ ಶಿಷ್ಟಾಚಾರದ ಕುರಿತು ಸೂಚನೆ ನೀಡಲಾಗಿರುತ್ತದೆ. ಆದ್ಯತಾ ಪಟ್ಟಿಯ ಪ್ರಕಾರ ಅವರಿಗೆ ಸಲ್ಲಬೇಕಾದ ಸ್ಥಾನಮಾನಗಳನ್ನು ಸಂಸದರು ಹಾಗೂ ವಿಧಾನ ಮಂಡಲದ ಸದಸ್ಯರುಗಳನ್ನು ಒಳಗೊಂಡಂತೆ ಆಯಾ ವರಿಷ್ಠರಿಗೆ ಸಲ್ಲಬೇಕು. ಜೊತೆಗೆ ಆಹ್ವಾನ ಪತ್ರಿಕೆಯಲ್ಲಿ ಇದೇ ಆದ್ಯತೆಯನ್ನು ಅನುಸರಿಸಿ ಅವರ ಹೆಸರುಗಳನ್ನು ನಮೂದಿಸಬೇಕು ಎಂದು ಇದೆ. ಆದರೆ ಜನಪ್ರತಿನಿಧಿಗಳೇ ಕೆಲವೊಂದು ನಿರ್ದಿಷ್ಟ ಪ್ರಕರಣಗಳಲ್ಲಿ ತಮ್ಮ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ನಮೂದಿಸದಂತೆ ಜಿಲ್ಲಾಧಿಕಾರಿಗಳಿಗೆ ಕೋರಿದರೆ ಅಂತಹವರ ಹೆಸರನ್ನು ನಮೂದಿಸದಿರುವಂತೆ ತಿಳಿಸಲು ನಿರ್ದೇಶಿತನಾಗಿರುವುದಾಗಿ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.