ಪತಿ-ಪತ್ನಿ ನಡುವೆ ಹೊಡೆದಾಟದ ಕುರಿತು ದೂರು, ಪ್ರತಿದೂರು; ಪತಿ ಆಸ್ಪತ್ರೆಗೆ ದಾಖಲು

ಯಲ್ಲಾಪುರ: ಪತಿ ಹಾಗೂ ಪತ್ನಿಯ ನಡುವಿನ ಹೊಡೆದಾಟದ ಕುರಿತು ಯಲ್ಲಾಪುರ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿದೆ. ತಾಲೂಕಿನ ಸಾತುಗದ್ದೆಯ ಸುಬ್ರಹ್ಮಣ್ಯ ಗಣೇಶ ಹೆಗಡೆ ಅವರಿಗೆ ಹಾಗೂ ಅವರ ಹೆಂಡತಿ ಸುಷ್ಮಾ ಹೆಗಡೆ ಜೊತೆ ಕೆಲ ತಿಂಗಳುಗಳಿಂದ ಮನಸ್ತಾಪ ಉಂಟಾಗಿದ್ದು, ವಿಚ್ಛೇದನ ಪ್ರಕರಣ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಶನಿವಾರ ವಿಚಾರಣೆ ಮುಗಿಸಿಕೊಂಡು ಕಾರ್ ಸರ್ವಿಸ್‍ಗೆಂದು ಶಿರಸಿಗೆ ಹೊರಟಿದ್ದ ಸುಬ್ರಹ್ಮಣ್ಯ ಹೆಗಡೆ ಅವರನ್ನು ಸುಷ್ಮಾಳ ಸಹೋದರ ಕೊಂಕಣಕೊಪ್ಪದ ಲಕ್ಷ್ಮೀನಾರಾಯಣ ಗಾಂವ್ಕಾರ, ರವೀಂದ್ರನಗರದ ಸುಧೀರ ಮರಾಠಿ ಸೇರಿದಂತೆ 4-5 ಜನ ರಸ್ತೆ ಮಧ್ಯೆ ಅಡ್ಡಗಟ್ಟಿ ಕತ್ತಿ ಹಾಗೂ ಕಬ್ಬಿಣದ ಸರಳುಗಳಿಂದ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಪತ್ನಿಯೇ ತನ್ನ ಸಹೋದರನೊಂದಿಗೆ ಸೇರಿ ಈ ಕೃತ್ಯ ನಡೆಸಿರುವುದಾಗಿ ಸುಬ್ರಹ್ಮಣ್ಯ ಹೆಗಡೆ ದೂರು ನೀಡಿದ್ದು, ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನ್ನ ಹಾಗೂ ಸಹೋದರನ ಮೇಲೆ ಪತಿ ಹಲ್ಲೆ ನಡೆಸಿದ್ದಾನೆಂದು ಸುಬ್ರಹ್ಮಣ್ಯ ಹೆಗಡೆ ಅವರ ಪತ್ನಿ ಸುಷ್ಮಾ ಹೆಗಡೆ ಪ್ರತಿದೂರು ನೀಡಿದ್ದಾರೆ ನ್ಯಾಯಾಲಯದಿಂದ ಕಾರಿನಲ್ಲಿ ಮನೆಗೆ ತೆರಳುತ್ತಿರುವ ಸಂದರ್ಭದಲ್ಲಿ ಕಾರನ್ನು ಹಿಂಬಾಲಿಸಿಕೊಂಡು ಬಂದು ಚಾಲಕ ಜನಾರ್ದನ ಪೂಜಾರಿಯ ಮೇಲೆ ಹಲ್ಲೆ ನಡೆಸಿದ್ದು, ತಪ್ಪಿಸಲು ಹೋದ ತನಗೆ ಹಾಗೂ ಸಹೋದರನ ಮೇಲೂ ಹಲ್ಲೆ ಮಾಡಿದ್ದಾರೆಂದು ದೂರಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.