ದ.ಕ.ದಲ್ಲಿ ಐಸಿಸ್ ಚಟುವಟಿಕೆ ಹೇಳಿಕೆ ಬಗ್ಗೆ ತನಿಕೆ ನಡೆಯುತ್ತಿದೆ; ಹೇಮಂತ್ ನಿಂಬಾಳ್ಕರ್

ಕಾರವಾರ: ದಕ್ಷಿಣ ಕನ್ನಡದಲ್ಲಿ ಐಸಿಸ್ ಚಟುವಟಿಕೆಗಳಿಗೆ ತರಬೇತಿ ನಡೆಯುತ್ತಿದೆ ಎಂಬ ಹೇಳಿಕೆಯು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದರ ಬಗ್ಗೆ ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿದೆ ಎಂದು ಮಂಗಳೂರು ಪಶ್ಚಿಮ ವಲಯದ ಪೊಲೀಸ್ ಮಹಾ ನಿರ್ದೇಶಕ ಹೇಮಂತ ನಿಂಬಾಳ್ಕರ ಹೇಳಿದರು. ಕಾರವಾರದಲ್ಲಿ ನಡೆದ ಪೊಲೀಸರ ನಿರ್ಗಮನ ಪಥಸಂಚಲನ ಕಾರ್ಯಕ್ರಮಕ್ಕೆ ಶನಿವಾರ ಪಾಲ್ಗೊಂಡು ಮಾಧ್ಯಮದವರೊಂದಿಗೆ ಮಾತನಾಡಿದರು. ಯುವಕರು ದಾರಿ ತಪ್ಪಿ ದುಷ್ಕೃತ್ಯದಲ್ಲಿ ಪಾಲ್ಗೊಳ್ಳುವುದನ್ನು ತಡೆಯುವ ಉದ್ದೇಶದಿಂದ ಈ ಸಂದೇಶ ಕಳುಹಿಸಿರುವುದಾಗಿ ಹೇಳಿಕೊಂಡಿದ್ದಾನೆ. ಈ ಬಗ್ಗೆ ತನಿಖೆ ನಡೆಸಿ ವಿಷಯದ ಸತ್ಯಾಸತ್ಯತೆಯನ್ನು ಶೀಘ್ರದಲ್ಲೇ ಪತ್ತೆ ಹಚ್ಚಲಾಗುವುದು. ಇತ್ತೀಚಿನ ದಿನದಲ್ಲಿ ಕರಾವಳಿ ಭಾಗದಲ್ಲಿ ಕೋಮುವಾದಿ ಗಲಾಟೆಗಳು ಹೆಚ್ಚಾಗುತ್ತಿರುವುದರ ವಿರುದ್ಧ ಅವಶ್ಯಕ ಕ್ರಮಗಳನ್ನು ಕೈಗೊಳ್ಳುವಂತೆ ಆದೇಶ ನೀಡಲಾಗಿದೆ. ಯಾರು ಸಾಮಾಜಿಕ ವಾತಾವರಣ ಕೆಡಿಸಲು ಪ್ರಯತ್ನಿಸುತ್ತಾರೋ ಅಂತಹವರ ವಿರುದ್ಧ ಪೊಲೀಸ್ ಇಲಾಖೆಯಲ್ಲಿ ಇರುವ ಅವಶ್ಯಕ ಕಾಯ್ದೆಗಳನ್ನು ಅನುಸರಿಸಿ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಕರಾವಳಿಯ ಎಲ್ಲ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು. ಸಾಮಾಜಿಕ ಜಾಲತಾಣಗಳಲ್ಲಿ ಯಾವುದಾದರೂ ವಿಷಯಗಳನ್ನು ಪೋಸ್ಟ್ ಮಾಡುವಾಗ ಅದರ ದುಷ್ಪರಿಣಾಮದ ಬಗ್ಗೆ ಅರಿತುಕೊಳ್ಳಬೇಕು. ಶಾಂತಿ ಭಂಗವಾಗುವ, ಕೋಮುವಾದವನ್ನು ಪ್ರಚೋದಿಸುವ ವಿಷಯವೇ? ಎಂಬುದನ್ನು ಸೂಕ್ಷ್ಮವಾಗಿ ಅರಿತುಕೊಳ್ಳಬೇಕು. ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ಚಟುವಟಿಕೆಗಳ ಬಗ್ಗೆ ಪರಿಶೀಲನೆ ಮಾಡಲು ಪ್ರತಿ ಜಿಲ್ಲೆಯಲ್ಲೂ ವಿಶೇಷ ಘಟಕವಿದೆ. ವೈಯಕ್ತಿಕ ಪೋಸ್ಟ್ ಗಮನಿಸಲು ಸಾಧ್ಯವಿಲ್ಲ. ಈ ವಿಷಯದಲ್ಲಿ ಸಾರ್ವಜನಿಕರ ಪಾತ್ರ ಅತೀ ಮುಖ್ಯ ಎಂದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.