ಚಿಟ್ಟಾಣಿ.. ನಾ ಕಂಡಂತೆ..!

ಕೆ ಪಿ ಹೆಗಡೆ, ತೆಕ್ಕಟ್ಟೆ: ಅ. 3.. ಯಕ್ಷ ಪ್ರಪಂಚಕ್ಕೆ ಒಂದು ಕರಾಳ ದಿನ. ಕಾರಣ, ಯಕ್ಷಾಭರಣದ ಒಂದು ಅನಘ್ರ್ಯ ರತ್ನ ತನ್ನ ಕೊಂಡಿ ಕಳಚಿ ಇಹ ಲೋಕ ತ್ಯಜಿಸಿದ್ದು ಒಂದು ತುಂಬಲಾರದ ನಷ್ಟವೇ ಸರಿ. ಕಲಾಶ್ರೀ, ಜಾನಪದಶ್ರೀ, ಪದ್ಮಶ್ರೀ, ಹೀಗೆ ಹತ್ತು ಹಲವಾರು ಪ್ರಶಸ್ತಿಗಳನ್ನು ಚಿಟ್ಟಾಣಿ ಮುಡಿಗೇರಿಸಿಕೊಂಡಿದ್ದರು ಎನ್ನುವುದಕ್ಕಿಂತಲೂ ಯಕ್ಷಗಾನಕ್ಕೆ ತಂದು ಕೊಟ್ಟಿದ್ದರು ಎಂದರೆ ಅತಿಶಯೋಕ್ತಿಯಾಗಲಾರದು. ಈ ಕಿರು ಲೇಖನದಲ್ಲಿ ಚಿಟ್ಟಾಣಿಯವರನ್ನು ನಾ ಕಂಡಂತೆ ವರ್ಣಿಸುವ ಕಿರು ಪ್ರಯತ್ನವನ್ನು ಮಾಡಿದ್ದೇನೆ. 1970ರ ದಶಕದ ಸಮಯ. ಹೇರೂರಿನಲ್ಲಿ ನಡೆದ ಚಿಟ್ಟಾಣಿ ಭಸ್ಮಾಸುರ ನನ್ನನ್ನು ಮೂಕವಿಸ್ಮಿತನನ್ನಾಗಿಸಿತು. ಆಗಿನ್ನೂ ಪ್ರೌಢ ಶಾಲಾ ಶಿಕ್ಷಣ ಮುಗಿಸಿ ಯಕ್ಷಗಾನದ ಆರಂಭಿಕ ಮಜಲುಗಳನ್ನು ಕಲಿಯುತ್ತಿದ್ದ ನನಗೆ ಮುಂದೊಂದು ದಿನ ಇಂತಹ ಮೇರು ಕಲಾವಿದನೊಡನೆ ಒಡನಾಟ ಮಾಡುವ ಅವಕಾಶ ದೊರೆಯುವುದೆಂದು ಊಹಿಸುವುದೂ ಕಷ್ಟವಾಗಿತ್ತು. ಆದರೆ ಅದೃಷ್ಟವೋ ಎಂಬಂತೆ ಅವರ ಪ್ರಸಿದ್ದ ಕೌರವ, ಕೀಚಕ, ಮಾಗಧ, ಅರ್ಜುನ, ಇನ್ನಿತರ ಪಾತ್ರಗಳಿಗೆ ಭಾಗವತಿಕೆ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯವೇ ಸರಿ. ಹಿರೇ ಮಹಾಲಿಂಗೇಶ್ವರ ಮೇಳದ ಎರಡನೇ ಭಾಗವತನಾಗಿದ್ದ ಕಾಲದಲ್ಲಿ ಚಿಟ್ಟಾಣಿಯವರ ಸಾಂಗತ್ಯವೇ ನನ್ನ ಯಕ್ಷಗಾನದ ಬೇರನ್ನು ಗಟ್ಟಿಯಾಗಿಸಿದ್ದು. ಬಹುಶಃ ಅವರೊಂದಿಗಿನ ರಂಗಸ್ಥಳದಲ್ಲಿದ್ದ ಹೊಂದಾಣಿಕೆಯೇ ಮುಂದೆ ಶಿರಸಿ ಪಂಚಲಿಂಗೇಶ್ವರ ಮೇಳದಲ್ಲಿ ನನ್ನನ್ನು ಪೂರ್ಣ ಪ್ರಮಾಣದ ಮುಖ್ಯ ಭಾಗವತನನ್ನಾಗಿ ಮಾಡಿಸಿತು ಎಂದರೆ ತಪ್ಪಾಗಲಾರದು. ಅವರು ರಂಗದಲ್ಲಿ ಉಪಯೋಗಿಸುತ್ತಿದ್ದ ಚಾಲು ಕುಣಿತ, ಅಭಿನಯ ಮುದ್ರೆಗಳು ಸುಲಲಿತ ಭಾಷೆ ಆ ಕಾಲಕ್ಕೆ ನನ್ನ ಮೇಲೆ ಎಷ್ಟು ಪ್ರಭಾವ ಬೀರಿತ್ತೆಂದರೆ ಚಿಟ್ಟಾಣಿಯವರನ್ನು ಖುಷಿ ಪಡಿಸುವ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕು ಎಂಬ ಭಾವನೆ ಬರುತ್ತಿತ್ತು.

ಉದಾಹರಣೆಗೆ ಹೊಸಾಕುಳಿ ಜಾತ್ರೆ ಪ್ರಯುಕ್ತ ನಡೆದ ಶಿರಸಿ ಮೇಳದ ಕೀಚಕವಧೆ ಪ್ರಸಂಗದಲ್ಲಿ ನನ್ನ ಭಾಗವತಿಕೆಗೆ ಮೆಚ್ಚಿ ಅವರು ನೀಡಿದ ಶಹಭಾಸ್‍ಗಿರಿ ನನ್ನನ್ನು ಬಾನೆತ್ತರದಲ್ಲಿ ತೇಲಾಡುವಂತೆ ಮಾಡಿತ್ತು. “ ಕೆ.ಪಿ.. ನಿನ್ ಪದ್ಯ ಕೇಳಿದ್ರೆ ಉಪ್ಪೂರರ ಪದ್ಯಕ್ಕೆ ಕುಣದಂಗ್ ಆಗ್ತೋ” ಎಂಬ ಅವರ ನುಡಿ ಈಗಲೂ ನನ್ನ ಕಿವಿಯಲ್ಲಿ ಗುಣುಗುಡುತ್ತಿದೆ. ರಂಗದ ಒಳಗೂ ಹೊರಗೂ ಎಲ್ಲರೊಂದಿಗೆ ಅದ್ಭುತವಾಗಿ ಬೆರೆಯುತ್ತಿದ್ದ ಚಿಟ್ಟಾಣಿಯವರು ಬಹಳ ಸೊಗಸಾದ ಸಾಮಾಜಿಕ ಜೀವನವನ್ನು ಹೊಂದಿದ್ದರು. ರಂಗಸ್ಥಳದಲ್ಲಿ ಸಹ ಕಲಾವಿದರಿಂದಾದ ಸಣ್ಣ ಪುಟ್ಟ ಲೋಪದೋಷಗಳನ್ನು ಸರಿದೂಗಿಸಿಕೊಂಡು ಹೋಗಿ ಪ್ರಸಂಗದ ಯಶಸ್ಸಿನಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತಿದ್ದರು. ಯಾರೇ ಬಂದು ಕೇಳಿದರೂ ತನ್ನಲ್ಲಿದ್ದ ಅಪೂರ್ವ ಯಕ್ಷ ಜ್ಞಾನವನ್ನು ಹೇಳಿಕೊಡುತ್ತಿದ್ದರು. ಅವರ ಜೀವನ ಎಷ್ಟೊಂದು ಯಕ್ಷಗಾನಮಯವಾಗಿತ್ತೆಂದರೆ ಹದಿಹರೆಯದ ಮಕ್ಕಳೊಂದಿಗೆ ಯಕ್ಷ ನೃತ್ಯಾಭಿನಯ ಮಾಡುತ್ತಾ ತಮ್ಮ ಸೃಜನಶೀಲತೆ ಮೆರೆಯುತ್ತಿದ್ದರು. ದಿನವೊಂದರಲ್ಲಿ ಮೂರು ಪ್ರಸಂಗಗಳನ್ನು ಮೂರು ಕಡೆ ಮುಗಿಸಿ ಬಂದರೂ, ಮೂರನೇ ಮುಖ್ಯ ಪಾತ್ರದ ಕೊನೇಯ ಪದ್ಯಕ್ಕೆ ಮೊದಲ ಪ್ರಸಂಗದ ಮೊದಲ ಪದ್ಯಕ್ಕೆ ಮಾಡಿದಷ್ಟೇ ಕೆಲಸ ಮಾಡುತ್ತಿದ್ದರು. ಇದು ಅವರಲ್ಲಿದ್ದ ಕ್ರಿಯಾಶೀಲತೆಯನ್ನು ಸಾರುತ್ತದೆ. ಕಲೆಯನ್ನು ಮೀರಿ ಕಲಾವಿದನನ್ನು ಅರಸಿಕೊಂಡು ಪ್ರೇಕ್ಷಕರು ಬರುವಂತೆ ಮಾಡಿದವರು ಚಿಟ್ಟಾಣಿಯವರು.

ಉದಾಹರಣೆಗೆ ಚಿಟ್ಟಾಣಿ ಪ್ರದರ್ಶನದ ಎದುರು ಪ್ರಸಂಗವೇ ಗೌಣ ಆಗಿರುತ್ತಿತ್ತು. ಚಿಟ್ಟಾಣಿಯವರ ಲಭ್ಯತೆ ಇಲ್ಲವೆಂದು ಅನೇಕ ಪ್ರೇಕ್ಷಕರು ಹಿಂತಿರುಗಿ ಹೋಗಿದ್ದೂ ಇದೆ; ಆಟವೇ ರದ್ದಾಗಿದ್ದೂ ಇದೆ. ಮಧ್ಯ ರಾತ್ರಿಯಲ್ಲಿ ನಿದ್ದೆಗೆ ಜಾರಿದ್ದ ಪ್ರೇಕ್ಷಕರನ್ನು ತನ್ನ ಪ್ರಭಲ ಪ್ರವೇಶದ ಮೂಲಕ ಬಡಿದೆಬ್ಬಿಸಿ ತದೇಕ ಚಿತ್ತದಿಂದ ಪ್ರಸಂಗವನ್ನು ಆಸ್ವಾದಿಸುವಂತೆ ಮಾಡುವ ಕಲೆ ಚಿಟ್ಟಾಣಿಯವರಿಗೆ ಸಿದ್ಧಿಸಿತ್ತು. ಅದಕ್ಕೆ ಪೂರಕವೋ ಎಂಬಂತೆ ಅವರ ಕಣ್ಣು, ಹಾವ-ಭಾವ, ಹೆಜ್ಜೆ ಎಲ್ಲವೂ ಪ್ರೇಕ್ಷಕರನ್ನು ಮಂತ್ರ ಮುಗ್ಧವಾಗಿರಿಸುತ್ತಿತ್ತು. ಕಪಟ ನಾಟಕ ರಂಗ., ಕಂಡನು ಭಸ್ಮಾಸುರನೂ., ಇವಳ್ಯಾವ ಲೋಕದ ಸತಿಯೋ.., ಮಾನಿನಿ ಮಣಿಯೇ ಬಾರೆ., ಸೃಷ್ಟೀಗರ್ಜುನ.. ಇತ್ಯಾದಿ ಪದ್ಯಗಳಿಗೆ ಅವರ ಮನೋಜ್ಞ ಅಭಿನಯ ಇನ್ನು ನೆನಪು ಮಾತ್ರ. ಯಕ್ಷ ಸಾಮ್ರಾಜ್ಯವನ್ನು ಏಳು ದಶಕಗಳಿಗೂ ಮಿಗಿಲಾಗಿ ಆಳಿದ ಚಕ್ರವರ್ತಿ ಚಿಟ್ಟಾಣಿಯವರು. ಅವರ ಉತ್ತರಾಧಿಕಾರಿಯನ್ನು ಯಕ್ಷಸಾಮ್ರಾಜ್ಯ ಇನ್ನಷ್ಟೇ ಹುಡುಕಬೇಕಿದೆ ಎಂಬುದೊಂದೇ ಬೇಸರದ ಸಂಗತಿ. ಅವರೇ ಹಾಕಿಕೊಟ್ಟಂತಹ ಯಕ್ಷಗಾನದ ಮಟ್ಟುಗಳು, ಅಭಿನಯ ಪಾಂಡಿತ್ಯ, ರಂಗಪ್ರಜ್ಞೆ, ವಾಕ್ಚಾತುರ್ಯ ಇತ್ಯಾದಿಗಳು ಅವರ ಉತ್ತರಾಧಿಕಾರಿಯನ್ನು ಸೃಷ್ಟಿಸಲು ಸಹಕಾರಿಯಾಗಲಿ ಎಂದು ಆಶಿಸೋಣ.

Categories: ಹರಿತ ಲೇಖನಿ

Leave A Reply

Your email address will not be published.