ಅಕ್ರಮ ಸಾಗವಾನಿ ಕಟ್ಟಿಗೆ ವಶ; ಅನುಮಾನ ಮೂಡಿಸಿದ ಅಧಿಕಾರಿಗಳ ನಡೆ

ಯಲ್ಲಾಪುರ: ಪಟ್ಟಣದ ಬಿಸಗೋಡ ರಸ್ತೆಯ ಪಕ್ಕ ತಳ್ಳಿಕೇರಿಯ ಬಳಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಸಾಗವಾನಿ ಕಟ್ಟಿಗೆಯನ್ನು ಶಿರಸಿಯ ಅರಣ್ಯ ವಿಚಕ್ಷಣಾ ದಳದವರು ಶನಿವಾರ ವಶಪಡಿಸಿಕೊಂಡಿದ್ದಾರೆ. 20 ಸಾಗವಾನಿ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳ ಅಂದಾಜು ಮೌಲ್ಯ 2 ಲಕ್ಷ ರೂಗಳಾಗಿವೆ. ಪ್ರಕರಣ ದಾಖಲಿಸಿಕೊಂಡಿರುವ ವಿಚಕ್ಷಣಾ ದಳದವರು ಸ್ಥಳೀಯ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಪ್ರಕರಣವನ್ನು ವರ್ಗಾಯಿಸಿದ್ದಾರೆ.

ಅಧಿಕಾರಿಗಳ ನಡೆ ಬಗ್ಗೆ ಸಂಶಯ: ಅಕ್ರಮವಾಗಿ ಸಾಗವಾನಿ ಕಟ್ಟಿಗೆಗಳನ್ನು ಬಿಸಗೋಡ ರಸ್ತೆ ಪಕ್ಕದ ಮಿಲ್ ಒಂದರಲ್ಲಿ ಸಂಗ್ರಹಿಸಿಡಲಾಗಿತ್ತು. ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡಿದ್ದು ಸಹ ಅದೇ ಕಟ್ಟಡದಲ್ಲಿ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಆದರೆ ಪ್ರಕರಣದಲ್ಲಿ ಕಟ್ಟಿಗೆಯನ್ನು ವಶಪಡಿಸಿಕೊಂಡಿರುವುದು ತಳ್ಳಿಕೇರಿಯ ಬಳಿಯ ಅರಣ್ಯ ಸ.ನಂ 58 ರಲ್ಲಿ ಎಂದು ದಾಖಲಿಸಿರುವ ಅಧಿಕಾರಿಗಳು ಸಂಶಯ ಮೂಡುವಂತೆ ಮಾಡಿದ್ದಾರೆ. ಈ ಕುರಿತು ಸಮರ್ಪಕವಾದ ಮಾಹಿತಿ ಪಡೆಯಲೆಂದು ಸ್ವತಃ ಸ್ಥಳೀಯ ಅರಣ್ಯ ಇಲಾಖೆಯ ಅಧಿಕಾರಿಗಳು ವಿಚಕ್ಷಣಾ ದಳದವರಿಗೆ ಕರೆ ಮಾಡಿದರೆ ಅದಕ್ಕೂ ಸ್ಪಂದಿಸಿಲ್ಲ. ಮಾಧ್ಯಮದವರು ಮಾಹಿತಿ ಕೇಳಿದರೂ ನೀಡಿಲ್ಲ. ಯಾರಿಗೂ ಗೊತ್ತಿಲ್ಲದಂತೆ ಶಿರಸಿಗೆ ಪರಾರಿಯಾಗಿದ್ದಾರೆ. ಯಾವುದೋ ಪ್ರಭಾವಿಗಳ ಒತ್ತಡಕ್ಕೆ ಮಣಿದು ಅಧಿಕಾರಿಗಳು ಈ ರೀತಿಯ ವರ್ತನೆ ತೋರಿದ್ದಾರೆಯೇ ಎಂಬ ಅನುಮಾನ ಸಹಜವಾಗಿ ಮೂಡುವಂತಾಗಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.