ಮುಕ್ತ ವಿವಿ ಕಛೇರಿಗೆ ಹಾಕಿದ್ದ ಬೀಗ ತೆರವು

ಕಾರವಾರ: ಕಳೆದ ಒಂದೂವರೆ ತಿಂಗಳಿಂದ ಬೀಗ ಹಾಕಲಾಗಿದ್ದ ನಗರದಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ ಪ್ರಾದೇಶಿಕ ಕೇಂದ್ರ ಕಚೇರಿಯನ್ನು ಪೊಲೀಸರ ಸಮ್ಮುಖದಲ್ಲಿ ತೆರೆದು ಪಿಠೋಪಕರಣಗಳನ್ನು, ಸಿದ್ಧಪಾಠಗಳನ್ನು ಹಾಗೂ ಇತರೆ ಸಾಮಗ್ರಿಗಳನ್ನು ಮಹಜರು ಮಾಡಿ ಮಾಹಿತಿ ನೀಡಲಾಗಿದೆ ಎಂದು ವಿಶ್ವ ವಿದ್ಯಾನಿಲಯದ ಸಹಾಯಕ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ. ಈ ಕಚೇರಿಯಲ್ಲಿ ಈ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ಅನಂತ ಝಂಡೇಕರ ಅವರನ್ನು ಹಲವು ಕಾರಣಗಳಿಂದ ವಜಾ ಮಾಡಲಾಗಿತ್ತು. ಬಳಿಕ ಅವರು ಅಧೀನ ಸಿಬ್ಬಂದಿಗಳನ್ನು ಹೊರ ಹಾಕಿ ಕಚೇರಿಗೆ ಬೀಗ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಸುಮಾರು ಒಂದೂವರೆ ತಿಂಗಳು ಬೀಗಹಾಕಲಾಗಿದ್ದ ಕಚೇರಿಯನ್ನು ಪೊಲೀಸರು ಹಾಗೂ ಸ್ಥಳೀಯರ ಸಮ್ಮುಖದಲ್ಲಿ ತೆರೆದು ಎಲ್ಲ ಸಾಮಗ್ರಿಗಳ ವವರಗಳನ್ನು ವಿಶ್ವವಿದ್ಯಾಲಯಕ್ಕೆ ವರದಿ ನೀಡಲು ಆದೇಶಿಸಿ ಪ್ರಾದೇಶಿಕ ಕೇಂದ್ರಕ್ಕೆ ವಿವಿಧ ಅಧಿಕಾರಿಗಳು ಹಾಗೂ ನೌಕರರನ್ನು ನಿಯೋಜಿಸಲಾಗಿದೆ.

ನಡೆದಿದ್ದೇನು: ನಗರದಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ ಪ್ರಾದೇಶಿಕ ಕೇಂದ್ರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅನಂತ ಝಂಡೇಕರ ಅವರನ್ನು ಕಳೆದ ಸೆ.16ರಂದು ವಜಾ ಮಾಡಲಾಗಿತ್ತು. ಇವರು ಈ ಹಿಂದೆ ಬೀದರದ ಪ್ರಾದೇಶಿಕ ಕೆಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅವಧಿಯಲ್ಲಿ ವಿಶ್ವವಿದ್ಯಾನಿಲಯದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಎಂ.ಎ. ವಿದ್ಯಾರ್ಥಿ ಕಪಿಲದೇವ ಎಂಬುವವರಿಗೆ ಸರಕಾರದಿಂದ ಮಂಜೂರಾದ ವಿದ್ಯಾರ್ಥಿ ವೇತನವನ್ನು ನಿಯಮಾನುಸಾರ ಪಾವತಿಸದೇ ಇರುವುದು, ಆದಾಯ ತೆರಿಗೆ ರಿಟನ್ರ್ಸ್ ವಿನಾಯಿತಿ ಕೋರಿ ಸಲ್ಲಿಸಿರುವ ಅರ್ಜಿಯಲ್ಲಿ ಅವರ ಮಕ್ಕಳಿಗೆ ಭರಿಸಿರುವ ಶಾಲಾ ಶುಲ್ಕವನ್ನು ತಿದ್ದಿ ಸರಕಾರಕ್ಕೆ ವಂಚಿಸಿರುವುದು, ಕಚೇರಿಗೆ ಅನಧಿಕೃತವಾಗಿ ದೀರ್ಘಕಾಲ ಗೈರು ಹಾಜರಾಗಿರುವುದು ಹಾಗೂ ಮೇಲಧಿಕಾರಿಗಳಿಗೆ ಬೆದರಿಕೆ ಹಾಕುವುದು ಸೇರಿದಂತೆ ಒಟ್ಟೂ 18 ಆರೋಪಗಳಿದ್ದವು. ಇವುಗಳನ್ನು ನಿವೃತ್ತ ನ್ಯಾಯಾಧೀಶರು ನಡೆಸಿದ ವಿಚಾರಣೆಯಲ್ಲಿ ಸಾಬೀತಾದ ಕಾರಣ ಅವರನ್ನು ಸೆ.16 ರಂದು ವಿಶ್ವವಿದ್ಯಾನಿಲಯದ ಸೇವೆಯಿಂದ ವಜಾಗೊಳಿಸಲಾಗಿತ್ತು. ಸಾರ್ವಜನಿಕರು, ವಿದ್ಯಾರ್ಥಿಗಳು ಈ ವಿಷಯವನ್ನು ಗಮನದಲ್ಲಿರಿಸಿಕೊಂಡು ಅವರ ಬಳಿ ಯಾವುದೇ ವ್ಯವಹಾರ ನಡೆಸಬಾರದು. ಒಂದು ವೇಳೆ ಅವರೊಡನೆ ವ್ಯವಹಾರ ನಡೆಸಿ ಉಂಟಾಗುವ ಯಾವುದೇ ಪ್ರಕರಣ ಅಥವಾ ವಿಚಾರಣೆಗೆ ವಿಶ್ವವಿದ್ಯಾನಿಲಯವು ಜವಾಬ್ದಾರಿಯಾಗಿರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.