ಜಿಲ್ಲಾ ಆಡಳಿತದ ವಿರುದ್ದ ಮಾರುತಿ ನಾಯ್ಕ್ ಆರೋಪ

ಸಿದ್ದಾಪುರ: ತಾಲೂಕಿನಲ್ಲಿ ಕ್ರೈಸ್ತ ಮಶಿನರಿಗಳಿಂದ ಮತಾಂತರ ಪ್ರಯತ್ನ ನಡೆಯುತ್ತಿದೆ ಎಂಬ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಅಗಸ್ಟ 15 ರಂದು ಪಾದಯಾತ್ರೆ ನಡೆಸಿ ಈ ಕುರಿತು ಕ್ರಮ ಜರುಗಿಸುವಂತೆ ತಾಲೂಕಾ ಆಡಳಿತಕ್ಕೆ ಮನವಿ ಸಲ್ಲಿಸಲಾಗಿತ್ತು. ಈ ಕುರಿತು ಹಲಗೇರಿಯಲ್ಲಿ ಯಾವುದೇ ಪರವಾನಿಗೆ ಇಲ್ಲದೇ ನಡೆಸುತ್ತಿರುವ ಅನಾಥಾಶ್ರಮಕ್ಕೆ ಪೊಲೀಸ್ ನಿರೀಕ್ಷಕರು ಭೇಟಿ ಅಲ್ಲಿ ಒತ್ತಾಯದಿಂದ ಮತಾಂತರಕ್ಕೆ ಕರೆತರಲಾಗಿದ್ದ ಭವಾನಿ ಮೊಗೇರ ಎಂಬ ಹೆಣ್ಣುಮಗಳನ್ನು ಅವಳ ಪಾಲಕರ ಕೋರಿಕೆಯಂತೆ ರಕ್ಷಿಸಿ ಅವರ ವಶಕ್ಕೆ ಒಪ್ಪಿಸಿದ್ದರು. ಈ ಘಟನೆ ಕುರಿತಂತೆ ಪೊಲೀಸ್ ಅಧಿಕಾರಿಗಳು ತಹಶೀಲ್ದಾರರಿಗೆ ಮುಂದಿನ ಕ್ರಮ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಈ ವರೆಗೂ ಜಿಲ್ಲಾಡಳಿತ ಆರೋಪಿಗಳ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳದೇ ಅಸಡ್ಡೆ ಮಾಡಿದೆ ಎಂದು ಬಿಜೆಪಿ ಮುಖಂಡ ಮಾರುತಿ ನಾಯ್ಕ ಕಾನಗೋಡ ಆಪಾದಿಸಿದ್ದಾರೆ.
ಅವರು ಬುಧವಾರ ಬಿಜೆಪಿ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸೇವೆಯ ಹೆಸರಿನಲ್ಲಿ ಮತಾಂತರಕ್ಕೆ ಪ್ರಯತ್ನಿಸುತ್ತಿರುವವರನ್ನು ಒಂದು ವಾರದಲ್ಲಿ ಒಕ್ಕಲೆಬ್ಬಿಸಬೇಕು. ಅದಿಲ್ಲವಾದಲ್ಲಿ ತಹಶೀಲ್ದಾರ ಕಾರ್ಯಾಲಯದ ಎದುರು ಧರಣಿ ಸತ್ಯಾಗ್ರಹ ನಡೆಸುತ್ತೇವೆ ಎಂದು ಎಚ್ಚರಿಸಿದರು. ಹಲಗೇರಿಯಲ್ಲಿ ಅನಾಥಾಶ್ರಮದ ಹೆಸರಿನಲ್ಲಿ ಮತಾಂತರ ನಡೆಸುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಅನಾಥಾಶ್ರಮ ನಡೆಸುವಲ್ಲಿ ಸ್ವಚ್ಛತೆಯಿಲ್ಲ. ವೃದ್ಧರಿಗೆ ಅನಾರೋಗ್ಯವುಂಟಾದರೆ ಚಿಕಿತ್ಸೆಗೆ ಯಾವುದೇ ವ್ಯವಸ್ಥೆಯಿಲ್ಲ. ಪಂಚಾಯತ ಪರವಾನಿಗೆ ಪಡೆದುಕೊಂಡಿಲ್ಲ. ಅನಾಥಾಶ್ರಮ ನಡೆಸುತ್ತಿರುವ ವ್ಯಕ್ತಿಯ ಚರಿತ್ರೆಯೂ ಶುದ್ಧವಾಗಿಲ್ಲ. ಜಿಲ್ಲೆಯ ಅನೇಕ ಕಡೆ ಅನೈತಿಕ ಚಟುವಟಿಕೆ ನಡೆಸಿ ಅಲ್ಲಿಂದ ಕಾಲು ಕಿತ್ತಿದ್ದಾನೆ. ಹೆಂಡತಿ ಮಕ್ಕಳನ್ನೂ ಹೊರಗಟ್ಟಿದ್ದಾನೆ. ಇಂತವರಿಂದ ಎಂತಹ ಸಮಾಜ ಸೇವೆ ನಿರೀಕ್ಷಿಸಬಹುದು ಎಂದು ಅವರು ಪ್ರಶ್ನಿಸಿದರು. ಕಾಂಗ್ರೆಸ್ ಆಡಳಿತದ ರಾಜ್ಯ ಸರಕಾರದಲ್ಲಿ ಹಿಂದೂ ಸಮಾಜದ ಪರವಾಗಿ ಮಾತನಾಡುವವರ ಮೇಲೆ ಸುಕಾಸುಮ್ಮನೆ ಮೊಕದ್ದಮೆ ಹೂಡಲಾಗುತ್ತಿದೆ. ಈ ಘಟನೆಯಲ್ಲಿ ಪೊಲೀಸ್ ಇಲಾಖೆಯ ವರದಿಯಿದ್ದಾಗಲೂ ಕಾನೂನು ಕ್ರಮ ಜರುಗಿಸಲು ಮೀನಮೇಷ ಎಣಿಸುತ್ತಿರುವುದೇಕೆ? ಈ ಕುರಿತು ರಾಜಕೀಯ ಪ್ರಮುಖರ ಒತ್ತಡವೂ ಇರಬೇಕು. ಯಾವುದಕ್ಕೂ ಒಂದು ವಾರ ಕಾಯ್ದು ನೋಡುತ್ತೇವೆ. ನಂತರ ಪ್ರತಿಭಟನೆ ಅನಿವಾರ್ಯವಾಗಲಿದೆ ಎಂದರು.
ಬಿಜೆಪಿಯ ಗುರುರಾಜ ಶಾನಭಾಗ, ಮಹಾಬಲೇಶ್ವರ ಹೆಗಡೆ, ವಿನಯ ಹೊನ್ನೇಗುಂಡಿ, ಎಸ್.ಕೆ.ಮೇಸ್ತ, ಸದಾನಂದ ಹೆಗಡೆ, ಗಜಾನನ ನಾಯ್ಕ, ಶ್ರೀಧರ ನಾಯ್ಕ, ಪ್ರಮೋದ ನಾಯ್ಕ, ಲಕ್ಷ್ಮಣ, ಚಂದ್ರಶೇಖರ ಹಾಸಣಗಿ ಮುಂತಾದವರು ಉಪಸ್ಥಿತರಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.