ಕೇಂದ್ರ ಸರ್ಕಾರದ ವಿರುದ್ಧ ಜೆಡಿಎಸ್ ಯುವ ಘಟಕದ ಪ್ರತಿಭಟನೆ

ಕಾರವಾರ: ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ವಿರೋಧಿಸಿ ಹಾಗೂ ಅಡುಗೆ ಅನಿಲ ಸಬ್ಸಿಡಿ ನಿಲ್ಲಿಸದಂತೆ ಆಗ್ರಹಿಸಿ ಜೆಡಿಎಸ್ ಜಿಲ್ಲಾ ಯುವ ಘಟಕದ ವತಿಯಿಂದ ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಇಲ್ಲಿನ ಸುಭಾಷ್ ವೃತ್ತದಲ್ಲಿ ಕುಳಿತ ಜೆಡಿಎಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಪೆಟ್ರೋಲ್, ಡೀಸೆಲ್ ಬೆಲೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಇದರಿಂದ ಬಡವರು, ಜನಸಾಮಾನ್ಯರು ಜೀವನ ನಡೆಸುವುದು ದುಸ್ತರವಾಗಿದೆ. ಸರ್ಕಾರದ ಜನವಿರೋಧಿ ನೀತಿಗಳಿಂದ ದೇಶವಾಸಿಗಳು ತತ್ತರಿಸುವಂತಾಗಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾಷಣಗಳ ಮೂಲಕ ಜನರನ್ನು ಮರಳು ಮಾಡುತ್ತಿದ್ದಾರೆ ಹೊರತು ಜನಸಾಮಾನ್ಯರ ಹಿತಾಸಕ್ತಿ ರಕ್ಷಿಸುವ ಯಾವುದೇ ಕೆಲಸ ಮಾಡುತ್ತಿಲ್ಲ. 2014ರ ಮಾರ್ಚ್ 1ರಂದು ಡಾಲರ್ ಎದುರು ನಮ್ಮ ರೂಪಾಯಿ ಮೌಲ್ಯವು 61.76 ಇತ್ತು. ಆದರೆ ಅದು ಇದೇ 11ರಂದು 63.9ಕ್ಕೆ ಏರಿಕೆಯಾಗಿದೆ. ದೆಹಲಿಯಲ್ಲಿ 63.09 ಇದ್ದ ಪೆಟ್ರೋಲ್ ದರ, ನಿತ್ಯ ಬೆಲೆ ಪರಿಷ್ಕರಣೆ ವ್ಯವಸ್ಥೆ ಜಾರಿಯಾದ ಬಳಿಕ 70.39ಕ್ಕೆ ತಲುಪಿದೆ. ಅಂದರೆ ಪೆಟ್ರೋಲ್ ಬೆಲೆಯಲ್ಲಿ ಶೇ 11.5ರಷ್ಟು ಹಾಗೂ ಡೀಸೆಲ್ 12.5 ರಷ್ಟು ಏರಿಕೆಯಾಗಿದೆ’ ಎಂದು ದೂರಿದರು.
ಅಧಿಕಾರಕ್ಕೆ ಬರುವ ಮೊದಲು ಅಚ್ಛೆ ದಿನ್ ತರುವುದಾಗಿ ಭರವಸೆ ನೀಡಿದ್ದ ಬಿಜೆಪಿ ಸರ್ಕಾರ ಮೂರು ವರ್ಷಗಳಾದರೂ ದೇಶದ ಜನರಿಗೆ ಕರಾಳ ದಿನಗಳನ್ನು ತೋರಿಸುತ್ತಿದೆ. ಕಚ್ಚಾ ತೈಲದ ಬೆಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಇಳಿಕೆಯಾಗಿದ್ದರೂ ಕೂಡ ಕೇಂದ್ರ ಸರ್ಕಾರ ಪೆಟ್ರೋಲ್ ಬೆಲೆಯನ್ನು ಕಡಿಮೆ ಮಾಡುತ್ತಿಲ್ಲ. ಇದರಿಂದ ಜನಸಾಮಾನ್ಯರಿಗೆ ಹೊರೆಯಾಗುತ್ತಿದೆ. ನಿತ್ಯ ದರ ಪರಿಷ್ಕರಣೆಗೆ ಅವಕಾಶ ಮಾಡಿಕೊಡುವ ಮೂಲಕ ತೈಲ ಕಂಪೆನಿಗಳಿಗೆ ಪ್ರಧಾನಿಯವರು ಲಾಭ ಮಾಡಿಕೊಟ್ಟಿದ್ದಾರೆ’ ಎಂದು ಆಪಾದಿಸಿದರು.
ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್ಟಿ ವ್ಯಾಪ್ತಿಗೆ ಒಳಪಡಿಸಿ, ಅದರ ಬೆಲೆ ಇಳಿಕೆಯಾಗುವಂತೆ ಮಾಡಬೇಕು’ ಎಂದು ಆಗ್ರಹಿಸಿದ ಅವರು, ಅಡುಗೆ ಅನಿಲದ ಸಬ್ಸಿಡಿಯನ್ನು ಸ್ಥಗಿತಗೊಳಿಸಿದರೆ ಉಗ್ರ ಪ್ರತಿಭಟನೆ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದ್ದಾರೆ.
ಜೆಡಿಎಸ್ ಯುವ ಜಿಲ್ಲಾ ಘಟಕದ ಅಧ್ಯಕ್ಷ ಭಾಸ್ಕರ ಪಟಗಾರ, ಕಾರ್ಯಾಧ್ಯಕ್ಷ ಗಜು ನಾಯ್ಕ ಅಂಕೋಲಾ, ಉಪಾಧ್ಯಕ್ಷರಾದ ಜಯರಾಮ ನಾಯ್ಕ, ರಾಘವೇಂದ್ರ ಬೈಲಪ್ಪ, ಪ್ರಧಾನ ಕಾರ್ಯದರ್ಶಿ ಲಂಬೋದರ ಗೌಡ, ಹರೀಶ ನಾಯ್ಕ, ನಿತಿನ್ ಹರಿಕಾಂತ, ದತ್ತಾ ಪಟಗಾರ ಇದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.