ಯಕ್ಷಹೆಜ್ಜೆಯ ಸಿಂಹಾವಲೋಕನ

ಕರ್ನಾಟಕ ವಿಶಿಷ್ಟ ಕಲೆಗಳ ತವರೂರು ಎಂದರೆ ತಪ್ಪಾಗಲಾರದು. ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಕಲೆಗಳಲ್ಲೊಂದು. ನಮ್ಮ ಸಂಸ್ಕೃತಿ, ಆಚರಣೆ ಮತ್ತು ಸಂಪ್ರದಾಯವನ್ನು ಇಂದಿಗೂ ಉಳಿಸಿಕೊಂಡು ಇಂದಿಗೂ ಕನ್ನಡವನ್ನೇ ಮಾತನಾಡುತ್ತಾ ಬಂದಿರುವ ಗಂಡು ಕಲೆಯೆಂದು ಪ್ರಸಿದ್ದಿ ಪಡೆದಿರುವುದೇ ಯಕ್ಷಗಾನ.
ಯಕ್ಷಗಾನವೆಂದರೆ ಬರಿ ನರ್ತನವಲ್ಲ, ಗಾಯನವಲ್ಲ. ಗಾಯನ, ವಾದನ, ನರ್ತನ, ವೇಷಭೂಷಣ, ಮುಖ ವರ್ಣನೆ ಹೀಗೆ ಬಹು ಕಲಾವಿಶೇಷತೆಗಳನ್ನು ಹೊಂದಿರುವ ರಂಗಭೂಮಿಯ ಕಲಾಪ್ರಕಾರ. ತನ್ನ ಎಲ್ಲಾ ಸಾಮರ್ಥ್ಯವನ್ನು ಸಮತೋಲನದಿಂದ ಸಮನ್ವಯಗೊಳಿಸಿ ರಂಗಪ್ರಯೋಗ ಮಾಡುವುದು.
ಇದರ ಇತಿಹಾಸ ಬಹಳ ಪುರಾತನದ್ದು. ಯಾವ ಕಾಲದಲ್ಲಿ ಬೆಳೆದು ಬಂತು ಎಂಬ ಪ್ರಶ್ನೆಗೆ ಮಾತ್ರ ಉತ್ತರ ಕೊಡಬಹುದು. ಕ್ರಿ.ಶ. 1614 ರಲ್ಲಿ ತಂಜಾವರದ ಅರಸು ರಘುನಾಥ ನಾಯಕನು ರುಕ್ಮಿಣಿ ಕೃಷ್ಣ ವಿವಾಹವೆಂಬ ಯಕ್ಷಗಾನ ಕೃತಿಯನ್ನು ರಚಿಸಿದ್ದನು. ಪುರಂದರದಾಸರು ಅನಸೂಯ ಕಥೆ ಎಂಬ ಯಕ್ಷಗಾನ ಪ್ರಬಂಧ ರಚಿಸಿದ್ದಾರೆನ್ನಲಾಗುತ್ತದೆ. ಇದು 16 ನೇ ಶತಮಾನದಲ್ಲಿ ರೂಪುಗೊಂಡು, 18 ನೇ ಶತಮಾನದಲ್ಲಿ ಬೆಳೆದು 20 ನೇ ಶತಮಾನದಲ್ಲಿ ಪರಿಪೂರ್ಣತೆ ಹೊಂದಿತು.
ಹಿಂದಿನ ಕಾಲದ ಯಕ್ಷಗಾನಕ್ಕೂ ಈಗಿನ ಯಕ್ಷಗಾನಕ್ಕೂ ಬಹಳ ವ್ಯತ್ಯಾಸ ಕಾಣಬಹುದು. ಏಕೆಂದರೆ ದೀವಟಿಗೆ ಮಂದ ಬೆಳಕಿನಿಂದ ಆತ ತೆರೆಮರೆಯ ಕತ್ತಲಲ್ಲಿ ಬೆನ್ನು ಹಾಕಿ ನಿಲ್ಲುತ್ತಿದ್ದ. ಆದರೆ ಈಗ ಸಭಾಗೃಹಗಳಲ್ಲಿ ಪ್ರದರ್ಶನ ಏರ್ಪಡಿಸುವಾಗ ಇವುಗಳನ್ನು ಪಾಲಿಸುವುದು ಕಷ್ಟ ಸಾಧ್ಯ. ವಿದ್ಯುತ್ ಬೆಳಕೆ ಇಲ್ಲಿ ಮುಖ್ಯವಾಗುತ್ತದೆ. ಕಲಾವಿದರ ಬಣ್ಣಗಾರಿಕೆ, ವೇಷ ಭೂಷಣ, ಅಭಿನಯಗಳಲ್ಲೂ ಬದಲಾವಣೆ ಅನಿವಾರ್ಯ.
ಯಕ್ಷಗಾನಕ್ಕೆ ಪೌರಾಣಿಕ ಕಥೆಯೇ ಆಗಬೇಕೆಂಬ ನಿಯಮಗಳಿಲ್ಲ. ಐತಿಹಾಸಿಕ, ಸಾಮಾಜಿಕ ಕಥೆಯನ್ನೂ ಪ್ರದರ್ಶಿಸಬಹುದು. ಇತ್ತೀಚೆಗೆ ಇಂತಹ ಪ್ರಯೋಗಗಳೂ ನಡೆಯುತ್ತಾ ಬಂದಿದೆ. ಆದರೆ ಹೆಚ್ಚಿನವು ಪೌರಾಣಿಕವನ್ನೇ ಆಧರಿಸಿರುತ್ತವೆ. ರಾಮಾಯಣ, ಮಹಾಭಾರತದ ಭಾಗಗಳನ್ನೇ ತೆಗೆದುಕೊಂಡು ತನ್ನದೇ ಶೈಲಿಯಲ್ಲಿ ಪ್ರದರ್ಶನಗೊಳ್ಳುವ ಕಥಾನಕವನ್ನು ಪ್ರಸಂಗ ಎಂದು ಕರೆಯುವರು.
ಯಕ್ಷಗಾನದ ಸೂತ್ರದಾರಿಯೇ ಭಾಗವತ. ಆತನೇ ಯಕ್ಷಗಾನದ ಪ್ರಾರಂಭದಿಂದ ಕೊನೆಯ ತನಕ ಒಯ್ಯುವನು. ಭಾಗವತನಿಗೆ ಹಿಮ್ಮೇಳದವರ ಸಹಕಾರವಿದೆ. ಹಿಮ್ಮೇಳ ಅಂದರೆ, ಯಕ್ಷಗಾನದಲ್ಲಿ ಬಳಸಲ್ಪಡುವ ಚಂಡೆ, ಮೃದಂಗ. ಇದರ ಶಬ್ದವೇ ಯಕ್ಷಗಾನಕ್ಕೊಂದು ಗತ್ತು. ಅದೇ ಯಕ್ಷಗಾನದ ಸೌಂದರ್ಯ. ಭಾಗವತರು ಕಾವ್ಯದ ಮೂಲಕ ಬಣ್ಣಿಸಿದ ಕಥಾನಕವನ್ನು ಪಾತ್ರಧಾರಿಗಳು ಮಾತಿನ ಮೂಲಕ ವಿವರಿಸುತ್ತಾ, ಚಂಡೆ ಮೃದಂಗದ ತಾಲಕ್ಕೆ ಹೆಜ್ಜೆ ಹಾಕುತ್ತಾರೆ.
ರಾಗ ತಾಲಗಳನ್ನು ಗಮನಿಸಿದಾಗ ಯಕ್ಷ ಸಂಗೀತ ಸಂಗಿತಕ್ಕೆ ಸಮೀಪವಿದೆ. ಆದರೆ ತನ್ನದೇ ಆದ ವಿಶಿಷ್ಟ ಗಮಕ ಆಲಾಪನಾ ಕ್ರಮದಿಂದ ಹಿಂದೂಸ್ತಾನಿ ಹಾಗೂ ಕರ್ನಾಟಕ ಸಂಗೀತಕ್ಕಿಂತಲೂ ಭಿನ್ನವಾಗಿದೆ.
ದಿ. ಕೆರೆಮನೆ ಶಿವರಾಮ ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಕೃಷ್ಣಯಾಜಿ, ಗೋಪಾಲ ಆಚಾರ್ಯ ತೀರ್ಥಹಳ್ಳಿ ಇನ್ನು ಅನೇಕರು ಈ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ಚಿಟ್ಟಾನಿಯವರ ಕೌರವನನ್ನು ನೋಡಲು ಎರಡು ಕಣ್ಣು ಸಾಲದು. ಇನ್ನು ಆಚಾರ್ಯರ ಅಭಿಮನ್ಯುವನ್ನು ಹೊಗಳಲು ಪದಗಳೇ ಸಿಗದು. ದಿ. ನಾವುಡರು, ರಾಘವೇಂದ್ರ ಆಚಾರ್ಯ, ಧಾರೇಶ್ವರ, ರಾಮಕೃಷ್ಣ ಹಿಲ್ಲೂರು ಮುಂತಾದವರು ಭಾಗವತಿಕೆಯಲ್ಲಿ ಸಾಕಷ್ಟು ಹೆಸರು ಸಂಪಾದಿಸಿದ್ದಾರೆ.
ಯಕ್ಷಗಾನದಲ್ಲಿ ಕೇವಲ ಮನೋರಂಜನೆಯೊಂದೇ ಇಲ್ಲ, ಇದರಲ್ಲಿ ಜ್ಞಾನವಿದೆ. ಶತ ಶತಮಾನಗಳಿಂದ ಯಕ್ಷಕಲೆಯ ಅಭಿವೃದ್ಧಿಗಾಗಿ ಅದೆಷ್ಟೋ ಕಲಾವಿದರು, ಸಾಹಿತಿಗಳು, ಅಧ್ಯಯನಕಾರರು ಶ್ರಮಿಸಿದ್ದಾರೆ. ರಾಜರ ಕಾಲದಿಂದಲೂ ಸಮಾಜದಲ್ಲಿ ಅತ್ಯಂತ ಗೌರವ ಪಡೆದುಕೊಂಡಿದೆ. ಸಮೃದ್ಧವಾದ, ಶ್ರೀಮಂತ ಕಲೆಯೊಂದು ನಮ್ಮ ನಾಡಿನಲ್ಲಿ, ನಮ್ಮ ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿದೆ ಎಂಬುವುದು ನಮ್ಮೆಲ್ಲರ ಹೆಮ್ಮೆಯೇ ಸರಿ.
ವಿಶ್ವನಾಥ ಹೆಗಡೆ
ಪತ್ರಿಕೋದ್ಯಮ ವಿಭಾಗ
ಎಂ.ಎಂ ಕಾಲೇಜ್

Categories: ಜಿಲ್ಲಾ ಸುದ್ದಿ,ಹರಿತ ಲೇಖನಿ

Leave A Reply

Your email address will not be published.