​ಶಿಕ್ಷಣ ನಮ್ಮಲ್ಲೆಷ್ಟು ನೈತಿಕತೆ ಬೆಳೆಸುತ್ತದೆ….?

  
  
ಶಿಕ್ಷಣವೆಂದರೆ ಮನುಷ್ಯನಲ್ಲಿ ಇರುವ ಪರಿಪೂರ್ಣತೆಯನ್ನು ಪ್ರಕಾಶಪಡಿಸುವುದು. ಯಾವ ಶಿಕ್ಷಣ ಜನಸಾಧಾರಣರನ್ನು ಜೀವನ ಸಂಗ್ರಾಮಕ್ಕೆ ಸಮರ್ಥರನ್ನಾಗಿ ಮಾಡುವುದಕ್ಕಾಗುವುದಿಲ್ಲವೋ, ಯಾವುದು ಮನುಷ್ಯನಿಗೆ ಚಾರಿತ್ಯ್ರ ಬಲ, ಸೇವಾ ತತ್ಪರತೆ, ಸಿಂಹ ಸಾಹಸಿಕತೆ ಇವುಗಳನ್ನು ಒದಗಿಸುವುದಿಲ್ಲವೋ ಅದು ಶಿಕ್ಷಣ ಎಂಬ ಹೆಸರಿಗೆ ಯೋಗ್ಯವಲ್ಲ. ಜೀವನದಲ್ಲಿ ವ್ಯಕ್ತಿ ತನ್ನ ಕಾಲಿನ ಮೇಲೆ ತಾನು ನಿಂತುಕೊಳ್ಳುವ ಸಾಮರ್ಥ್ಯವನ್ನು ಯಾವುದು ನೀಡುವುದೋ ಅದೇ ನಿಜವಾದ ಶಿಕ್ಷಣ.
ಜ್ಞಾನವೆಂಬುದು ಮನುಷ್ಯನಲ್ಲಿಯೇ ಅಡಗಿರುವುದು. ಹೊರಗಿನಿಂದ ಯಾವ ಜ್ಞಾನವು ಬರುವುದಿಲ್ಲ. ಕಲಿಯಲು ನಮಗೆ ಬೇಕಾಗಿರುವುದು ಶ್ರದ್ಧೆ. ದುರಾದೃಷ್ಟವಶಾತ್ ಭರತಖಂಡದಿಂದ ಇದು ಮುಕ್ಕಾಲುಪಾಲು ಕಣ್ಮರೆಯಾಗಿದೆ. ಆದ್ದರಿಂದಲೇ ನಾವು ಇಂತಹ ಅಧೋಗತಿಗೆ ಬಂದಿರುವುದು.
ಕಳೆದೊಂದು ದಶಕದಲ್ಲಿ ಜಾಗತೀಕರಣ ನಮ್ಮೆಲ್ಲರ ಬದುಕಿನಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಇದರ ಫಲವಾಗಿ ನಮಗೆ ಸೇವಾ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚಾಗಿ ದೊರೆಯಲಾರಂಭಿಸಿದೆ. ಹೊಸ ಹೊಸ ಸಂಸ್ಥೆಗಳು ಇಲ್ಲಿ ತಲೆ ಎತ್ತುವ ಮೂಲಕ ನಮ್ಮ ಜನಕ್ಕೆ ಹೆಚ್ಚು ಸಂಬಳದ ಕೆಲಸಗಳು ಕಾಣುತ್ತಿದೆ. ಹೀಗಾಗಿ ಪ್ರತಿಯೊಬ್ಬರಿಗೂ ಆ ಕೆಲಸಗಳ ಅವಕಾಶ ತಮ್ಮ ಮಕ್ಕಳಿಗೆ ಸಿಗಲಿ ಅನ್ನೋ ಹಂಬಲ ಇರುವುದು ಸಹಜ. ಆದರೆ ಈ ದಿನ ನಮ್ಮ ನಾಡಲ್ಲಿ ಬಂದಿರೋ ಉದ್ಯೋಗಗಳು ಹೆಚ್ಚಿನದಾಗಿ ಅಮೇರಿಕಾ, ಇಂಗ್ಲೇಂಡ್‍ಗಳಂತಹ ಇಂಗ್ಲೀಷ್ ಭಾಷಾ ನಾಡುಗಳಿಗೆ ಒದಗಿಸುವ ಭಾಷಾ ಆಧಾರಿತ ಸೇವಾ ಉದ್ದಿಮೆಗಳು, ಅದರಲ್ಲೂ ಕಾಲ್ ಸೆಂಟರ್ ಉದ್ದಿಮೆಗಳು. ಇಂದಿಗೂ ನಮ್ಮಿಂದ ಈ ಸೇವೆಯನ್ನು ಬಯಸೋ ಗ್ರಾಹಕರು ಜಪಾನಿಯರಾದರೆ ಜಪಾನಿ ಭಾಷೆಯಲ್ಲೂ ಸೇವೆ ಕೊಡಬೇಕಾದದ್ದು ಅನಿರ್ವಾಯವಾಗುತ್ತದೆ. ಈ ಭಾಷಾ ಆಧಾರಿತ ಉದ್ದಿಮೆಗಳಿಗಾಗಿಯೇ ಇಡೀ ಒಂದು ನಾಡಿನ ಕಲಿಕಾ ವ್ಯವಸ್ಥೆಯನ್ನು ಕಟ್ಟುವುದು ಎಷ್ಟು ಸರಿ? ಇಷ್ಟಕ್ಕೂ ಈ ಉದ್ದಿಮೆ ನಮ್ಮ ಪಾಲಾಗಲಿ ಇರುವ ಮಾನದಂಡವೇ ‘ಕನಿಷ್ಟ ಕೂಲಿ’ ಯಾಗಿರುವಾಗ ಈ ಉದ್ದಿಮೆಗಳ ಆಯಸ್ಸೆಷ್ಟು? ನೂರು ಕೋಟಿ ಜನ ಮೂವತ್ತು ಕೋಟಿ ಜನರಿಗೆ ಎಷ್ಟು ದಿನಗಳ ಕಾಲ ಸೇವೆ ಒದಗಿಸಬಲ್ಲರು? ಭಾಷಾ ಆಧಾರಿತ ಸೇವೆ ಒದಗಿಸುವ ಉದ್ದಿಮೆಯ ಜಾಗತೀಕರಣದಿಂದ ಒದಗಿರುವುದು ಉಪ್ಪಿನಕಾಯಿಯೇ ಹೊರತು ಊಟವಲ್ಲ. ಆ ಊಟ ಸಿಗಬೇಕಾದರೆ ಬೇಕಿರುವುದು ಪ್ರಪಂಚದಲ್ಲಿ ಯಾರಿಗೂ ಕಡಿಮೆ ಇಲ್ಲದ ಉತ್ಪನ್ನಗಳನ್ನು ತಯಾರಿಸಬಲ್ಲ ಶಕ್ತಿ. ಆ ಶಕ್ತಿ ಸಿಗೋದು ಆ ಉತ್ಪನ್ನಗಳನ್ನು ತಯಾರಿಸುವ ಪರಿಣಿತಿ, ಅರಿವಿನಿಂದ, ಹೊಸದನ್ನು ಮಾಡಬಲ್ಲ ಯೋಗ್ಯತೆಯಿಂದ. ಆಯೋಗ್ಯತೆ ಸಿಗುವುದು ತಾಯ್ನುಡಿಯಲ್ಲಿ ಕಲಿಯುವುದರಿಂದ.
ವಿಜ್ಞಾನ ತಂತ್ರಜ್ಞಾನ  ಬಹಳಷ್ಟು ಮುಂದುರಿಯುತ್ತಿರುವ 21ನೇ ಶತಮಾನದಲ್ಲಿ ಯುವಜನಾಂಗ ದಾರಿ ತಪ್ಪುತ್ತಿದೆ. ‘ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು’ ಎಂಬ ಮಾತಿಗೆ ವಿರುದ್ದವಾಗಿ ಈಗಿನ ಪಾಲಕರು ತಮ್ಮ ಮಕ್ಕಳು ರ್ಯಾಂಕ್ ಬರಬೇಕು,ಎಂಬ ಕಾರಣಕ್ಕೆ ರೂಂ ಮಾಡಿಸಿ ಬಿಟ್ಟಿರುತ್ತಾರೆ. ಇದರಿಂದ ಅಪರಿಮಿತ ಇಂಟರ್‍ನೆಟ್ ಬಳಕೆ, ಫೇಸ್‍ಬುಕ್, ವಾಟ್ಸಪ್, ಚಾಟಿಂಗ್ ಇವುಗಳಲ್ಲೇ ಮುಳುಗಿ ಹೋದ ಸುಂದರ ಸಮಾಜ ನಿರ್ಮಾಣಕ್ಕೆ ತೊಡಕಾಗುತ್ತಿದೆಯೇ ಎಂಬ ಸಂಶಯ ಮೂಡುತ್ತಿದೆ. ಸ್ಪರ್ಧಾತ್ಮಕ ಮನೋಭಾವನೆ ಹೊಂದಿರುವ ಈಗಿನ ವಿದ್ಯಾರ್ಥಿಗಳಿಗೆ ರ್ಯಾಂಕ್ ಪ್ರಮುಖವಾಗಿದೆಯೇ ವಿನ: ಸಂಸ್ಕಾರ ಬೇಕಾಗಿಲ್ಲ. ವಿನಯ, ವಿಧೇಯತೆ, ಸಂಸ್ಕೃತಿ ಇಂದಿನ ಶಿಕ್ಷಣ ನೀಡುತ್ತಿಲ್ಲ. ಬದಲಿಗೆ ಅನಾಗರಿಕತೆಯನ್ನು ಬೆಳೆಸುತ್ತಿದೆ. ಇದರ ಜೊತೆಗೆ ಆಧುನಿಕ ತಂತ್ರಜ್ಞಾನವು ಮನುಷ್ಯನನ್ನು ಹಾಳು ಮಾಡಲು ಸೇರಿಕೊಂಡಿದೆ.
‘ನೀತೇ: ಫಲಂ ಧರ್ಮರ್ಥ ಕಾಮನಾ ಪ್ರಾಪ್ತಿ’ ಅಂದರೆ ನೀತಿಯ ಲಯವೆಂದರೆ ಧರ್ಮ, ಅರ್ಥ, ಕಾಮಗಳ ಪ್ರಾಪ್ತಿ ಆಗಿದೆ ಎಂಬುದಾಗಿದೆ. ಹಿಂದಿನ ವ್ಯವಸ್ಥೆಯಲ್ಲಿ ಸಂಸ್ಕಾರವಿತ್ತು. ‘ಸಂಸ್ಕಾರ’ ವೆಂದರೆ ಹೆಸರೇ ಹೇಳುವಂತೆ ‘ಸೋಸಿದ್ದು’, ಪರುಷ್ಕರಣೆಗೆ ಒಳಗಾಗಿದ್ದು ಎಂದು ಅರ್ಥ. ಉತ್ತಮ ವಿಷಯಗಳನ್ನು ಮಾತ್ರ ಸೋಸಿ, ಪರಿಷ್ಕರಣೆಗೆ ಒಳಪಡಿಸಿ ವಿದ್ಯಾರ್ಥಿಗಳಿಗೆ ನೀಡುವುದು ಹಿಂದಿನ ಗುರುಕುಲ ಪದ್ದತಿಯ ಮೂಲ ಉದ್ದೇಶವಾಗಿತ್ತು. ನೀತಿಯ ನೆಲೆಗಟ್ಟಿನಲ್ಲಿ ನಿಂತ ಶಿಕ್ಷಣ ಸಂಪತ್ತನೂ ಕೊಡುತ್ತದೆ. ಜೊತೆಗೆ ವಿನಯ ವಿಧೇಯವನ್ನೂ ಕಲಿಸುತ್ತದೆ. ಸಮಾಜವನ್ನು ನೈತಿಕತೆ ಮುಂದುರೆಸಿದರೆ ಸಮಾಜ ಸುಂದರವಾಗುತ್ತದೆ. ಇಲ್ಲದಿದ್ದರೆ ನಾಗರಿಕಸಮಾಜ ಎನಿಸಿಕೊಳ್ಳಬಹುದು. ಇತ್ತಮ ಸಮಾಜದ ನಿರೀಕ್ಷೆ ಶಿಕ್ಷಣದಲ್ಲಿ ನೀಡುವ ನೈತಿಕತೆಯನ್ನೇ ಅವಲಂಬಿಸಿದರೆ ತಪ್ಪಾಗಲಾರದು. ಅದಕ್ಕೆ ಉದಾಹರಣೆ ‘ಕುರುಡನಿಂದ ಮುನ್ನಡೆಸಲ್ಪಡುವ ದೋಣಿ ಸುರಕ್ಷಿತವಲ್ಲ’.
 ಹಿಂದಿನ ಶಿಕ್ಷಣ ಪದ್ದತಿಯನ್ನೇ ನೋಡಿದಾಗ, ಗೋವಿನ ಹಾಡಿನಲ್ಲಿ ಪುಣ್ಯಕೋಟಿಗೆದುರಾದ ಕೋಟಲೆಗಳ ನೆನೆದು ಕಣ್ಣಿರು ಹಾಕದವರಿಲ್ಲ. ಆದರೆ ಕೊನೆಯಲ್ಲಿ ಗೆಲ್ಲಿವುದು ಪುಣ್ಯಕೋಟಿಯ ಸತ್ಯಸಂಧತೆ. ಸದ್ವಿಚಾರ ಅಚ್ಚಳಿಯದೆ ಉಳಿಯುತ್ತದೆ ಎಂಬುದಕ್ಕೆ ಇದಕ್ಕಿಂತ ಉತ್ತಮವಾದ ನಿದರ್ಶನ ಬೇರೆ ಇಲ್ಲ. ನೀತಿ ನಿಯಮಗಳನ್ನೊಳಗೊಂಡ ಶಿಕ್ಷಣ ಹಿಂದಿನಂತೆ. ಹಿರಿಯರನ್ನು ಗೌರವಿಸು, ನಾಲ್ಕು ಜನರಿಗೆ ಕೈಲಾದ ಸಹಾಯ ಮಾಡು, ದಿನಕ್ಕೊಂದು ಒಳ್ಳೆಯ ಕೆಲಸ ಮಾಡು ಎಂದ ನೈತಿಕ ವಿಚಾರಗಳು.
ಭೌತಿಕ ಹಣ ಮಾಯವಾಗಬಹುದು, ದರೆ ನೈತಿಕತೆಯಲ್ಲ, ವಿದ್ಯೆಯಲ್ಲ. ಇಂಗ್ಲೀಷಿನಲ್ಲಿ ಒಂದು ಮಾತಿದೆ “ಇಫ್‍ವೆಲ್ತ ಈಸ್‍ಲೊಸ್ಟ ನಥಿಂಗ್ ಲೊಸ್ಟ, ಇಫ್‍ಹೆಲ್ತ ಈಸ್ ಲೊಸ್ಟ ಸಮ್ ಥಿಂಗ್ ಲೊಸ್ಟ, ಬಟ್ ಇಫ್ ಕ್ಯಾರೆಕ್ಟರ ಈಸ್ ಲೊಸ್ಟ ಎವ್ರಿಥಿಂಗ್ ಲೊಸ್ಟ” ಸಂಪತ್ತು ನಷ್ಟ ಹೊಂದಿತೆಂದಾದರೆ  ಏನೂ ನಷ್ಟವಾದಂತಲ್ಲ, ಆರೋಗ್ಯ ಇಲ್ಲವಾದರೆ ಏನೋ ಸ್ವಲ್ಪ ಕಳೆದುಕೊಂಡತೆ, ಆದರೆ ಮನುಷ್ಯ ಚಾರಿತ್ರ್ಯವನ್ನು ಕಳೆದುಕೊಂಡನೆಂದಾದರೆ ಎಲ್ಲವನ್ನು ಕಳೆದುಕೊಂಡಂತೆ.
ರಾಷ್ಟ್ರಕವಿ ಕುವೆಂಪು ಹೇಳಿದ್ದರು ‘ವಿದ್ಯಾರ್ಥಿಗಳು ಭತ್ತವನ್ನು ತುಂಬುವ ಚೀಲಗಳಾಗಬಾರದು, ಅದನ್ನು ಬೆಳೆಯುವ ಗದ್ದೆಗಳಾಗಬೇಕು’. ಈಗ ನಾಗರಿಕತೆ ಬೆಳೆದಿದೆ. ಆದರೆ ನೈತಿಕತೆ ಕುಸಿದಿದೆ. ಗಾಂಧೀಜಿ, ಭಗತ್ ಸಿಂಗ್, ನೆಲ್ಸನ್ ಮಂಡೇಲಾ, ಮದರ್ ತೆರೆಸಾ  ಜೀವನದಲ್ಲಿ ವೈಯಕ್ತಿಕ ನೀತಿಯಿತ್ತು. ಆದರ್ಶ  ಇತ್ತು. ಇವರೆಲ್ಲಾ ನಮಗೆ ಮಾದರಿಯಾಗಲಿ ಶಿಕ್ಷಣ ನಮಗೆ ಇದನ್ನು ಕಲಿಸಲಿ ಅಲ್ಲವೇ?
ವಿಶ್ವನಾಥ ಹೆಗಡೆ
ಪತ್ರಿಕೋದ್ಯಮ ವಿಭಾಗ

Categories: ಜಿಲ್ಲಾ ಸುದ್ದಿ,ಹರಿತ ಲೇಖನಿ

Leave A Reply

Your email address will not be published.