ಸೈಕಲ್ ತುಳಿದರೆ ತಿರುಗುತ್ತೆ ಆರೋಗ್ಯದ ಚಕ್ರ..!

ರಾಜೇಶ ದುಗ್ಗುಮನೆ– ಪುಟ್ಟ ಚಕ್ರ. ಕುಳಿತುಕೊಳ್ಳಲು ಸೀಟು. ಗೆಳೆಯನನ್ನು ಕೂರಿಸಿಕೊಂಡು ಹೋಗಲು ಅಥವಾ ಏನನ್ನಾದರೂ ಇಟ್ಟುಕೊಂಡು ಸಾಗಲು ಪುಟ್ಟದಾದ ಕ್ಯಾರಿಯರ್. ಪುಕ್ಕಟೆಯಾಗಿ ಸಿಗುವ ಗಾಳಿ ಟೈರ್‍ಗಳಿಗೆ ಊಟ. ಸೀಟ್‍ಮೇಲೆ ಕೂತು ಗಟ್ಟಿ ಪೆಡಲ್ ತುಳಿದರೆ ಕಲ್ಲು, ಮುಳ್ಳಿನ ಹಾದಿಯನ್ನೂ ಲೆಕ್ಕಿಸದೇ ಸಾಗುತ್ತದೆ ಸೈಕಲ್. ಮಕ್ಕಳ ಪಾಲಿಗಂತೂ ಇದುವೇ ಐರಾವತ. ಪೇಪರ್ ಹಾಕುವವರಿಗೆ ಇದರಿಂದಲೇ ಜೀವನ. ಆದರೆ ಈ ಸೈಕಲ್ ಇಂದು ತುಕ್ಕು ಹಿಡಿದು ಮನೆಯ ಹಳೆಯ ಕಂಬಕ್ಕೆ ಒರಗಿ ನಿಂತಿದೆ. ಸೈಕಲ್ ಟೈರ್ ಸೇರಿದ್ದ ಗಾಳಿ ಮತ್ತೆ ವಾತಾವರಣ ಸೇರಿ ಟೈರ್ ಮುಖವನ್ನು ಸಪ್ಪಗಾಗಿಸಿದೆ. ಗಂಟೆಗೆ 200 ಕಿ.ಮೀ ಓಡುವ ಬೈಕ್‍ಗಳಿಂದ ಹಿಡಿದು ಗೇರ್ ಹಾಕದೆಯೇ ಸಾಗುವ ಕಾರುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಈ ಭರಾಟೆ ನಡುವೆಯೇ ಯುವಕರಲ್ಲಿ ಸೈಕಲ್ ಕ್ರೇಜ್ ಹೆಚ್ಚುತ್ತಿದೆ. ಮರೆಯಾಗುತ್ತಿದ್ದ ಸೈಕಲ್ ಮತ್ತೆ ತೆರೆಗೆ ಬರುತ್ತಿದೆ. ಕಚೇರಿಗೆ ನಿತ್ಯ ಕಾರಿನಲ್ಲಿ ಹೋಗಿ ಬಂದರೆ ಬೊಜ್ಜು ಬಂದು ಬಿಡಬಹುದು ಎಂಬ ಭಯಕ್ಕೆ, ಸೈಕಲ್ ತುಳಿದರೆ ವ್ಯಾಯಾಮವಾಗುತ್ತದೆ, ಸೈಕಲ್ ಬಳಸಿದರೆ ತಿಂಗಳಿಗೆ ಸಾವಿರ ರೂಪಾಯಿವರೆಗೆ ಉಳಿತಾಯ ಮಾಡಬಹುದು, ಸೈಕಲ್ ಇಟ್ಟುಕೊಂಡರೆ ಬೆಳಗ್ಗೆ ಪೇಪರ್ ಹಾಕಲು ಸಹಾಯವಾಗುತ್ತದೆ, ಸೈಕಲಿದ್ದರೆ ಪರಿಸರ ರಕ್ಷಣೆಗೆ ನಮ್ಮದೊಂದು ಸಣ್ಣ ಕೊಡುಗೆ ನೀಡಿದಂತಾಗುತ್ತದೆ ಹೀಗೆ ವಿವಿಧ ಕಾರಣಗಳಿಂದ ಇಂದು ಸೈಕಲ್ ಬಳಕೆ ಮಾಡಲಾಗುತ್ತಿದೆ.

ಇದರ ಜತೆಗೆ ಹಲವರು ಸೈಕಲ್‍ ಇಟ್ಟುಕೊಂಡು ದೇಶ ಪರ್ಯಟನೆಯನ್ನೂ ಮಾಡುತ್ತಿದ್ದಾರೆ. ಸೈಕಲ್‍ನಲ್ಲೇ ದೇಶ ಪರ್ಯಟನೆ ಸೈಕಲ್ ಬಳಕೆಯಿಂದ ಆರೋಗ್ಯಕ್ಕೆ ಉಂಟಾಗುವ ಲಾಭಗಳ ಕುರಿತು ಜನರಿಗೆ ಮಾಹಿತಿ ನೀಡಿ ಅವರಲ್ಲಿ ಜಾಗೃತಿ ಮೂಡಿಸಲು ಮುಂದಾದ ಬೆಂಗಳೂರಿನ ಅನಿಲ್ ಪ್ರಭಾಕರ್, ಸೈಕಲ್‍ನಲ್ಲೇ ದೇಶ ಪರ್ಯಟನೆ ಆರಂಭಿಸಿದ್ದಾರೆ. ಇವರು 6 ತಿಂಗಳಲ್ಲಿ ಬರೋಬ್ಬರಿ 12 ಸಾವಿರ ಕಿ.ಮೀ ಸೈಕಲ್ ತುಳಿಯಲಿದ್ದಾರೆ. ರನ್ ಎಡಿಟಕ್ಟ್ ್ಸ ಕ್ಲಬ್‍ನ ಸದಸ್ಯರಾಗಿರುವ ಅನಿಲ್, ಜುಲೈ 30ರಂದು ಬೆಂಗಳೂರಿನಿಂದ ಸೈಕ್ಲಿಂಗ್ ಆರಂಭಿಸಿದ್ದಾರೆ. ಹೈದರಾಬಾದ್, ಮಧ್ಯಪ್ರದೇಶ, ಮಹಾರಾಷ್ಟ್ರ, ದೆಹಲಿ, ಹರಿಯಾಣ, ಚಂಡೀಗಢ ಮೂಲಕ ಜಮ್ಮು-ಕಾಶ್ಮೀರಕ್ಕೆ ಹೋಗಲಿದ್ದಾರೆ. ಪಂಜಾಬ್, ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ, ಗೋವಾ ಮೂಲಕ ಕರ್ನಾಟಕಕ್ಕೆ ವಾಪಾಸಾಗಲಿದ್ದಾರೆ. ಅನಿಲ್ ಕೇವಲ ಸೈಕಲ್‍ನಲ್ಲಿ ದೇಶ ಪರ್ಯಟನೆ ಮಾಡುವುದು ಮಾತ್ರವಲ್ಲ ಮಾರ್ಗ ಮಧ್ಯದಲ್ಲಿ ಸಿಗುವ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳಿಗೆ ಸೈಕಲ್ ಬಳಕೆಯಿಂದ ಆರೋಗ್ಯಕ್ಕೆ ಸಿಗುವ ಲಾಭಗಳ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ ಮತ್ತು ಹೆಚ್ಚೆಚ್ಚು ಸೈಕಲ್ ಬಳಕೆ ಮಾಡುವಂತೆ ಇವರು ಪ್ರೇರೇಪಿಸಲಿದ್ದಾರೆ. ಇವರಿಗೆ ಇವರೇ ಸ್ಫ್ಪೂರ್ತಿ ಸಾಧಕರಿಗೆ ಕೆಲವು ಘಟನೆಗಳು, ಕೆಲ ಮಹಾನ್ ವ್ಯಕ್ತಿಗಳು ಸ್ಫೂರ್ತಿಯಾಗುತ್ತಾರೆ. ಆದರೆ ಅನಿಲ್‍ರಿಗೆ ಅವರ ಸಾಧನೆಯೇ ಸ್ಫೂರ್ತಿ. ಇವರು ಈ ಮೊದಲು ಹಾಸನ-ಬೆಂಗಳೂರು, ಕಾರವಾರ-ಶಿವಮೊಗ್ಗದ ನಡುವೆ ಸೈಕಲ್ ತುಳಿದಿದ್ದರಂತೆ. ಕಳೆದ ವರ್ಷ ಕನ್ಯಾಕುಮಾರಿಯಿಂದ ಬೆಂಗಳೂರಿಗೆ ಸೈಕಲ್‍ನಲ್ಲಿ ಆಗಮಿಸಿದ್ದರಂತೆ. ಇದರಿಂದ ಸ್ಫೂರ್ತಿ ಪಡೆದ ಇವರ ಸಂಬಂಧಿಕರಲ್ಲಿ ಹಲವರು ಸೈಕಲ್ ಬಳಕೆ ಆರಂಭಿಸಿದ್ದರು. ಇಷ್ಟು ಚಿಕ್ಕ ಸಾಧನೆಗೆ ಹಲವರು ಸ್ಫೂರ್ತಿ ಪಡೆದಿರುವಾಗ ದೇಶದಾದ್ಯಂತ ಸೈಕಲ್‍ನಲ್ಲಿ ತೆರಳಿ ತಾನೇಕೆ ಹಲವರಿಗೆ ಸ್ಪೂರ್ತಿಯಾಗಬಾರದು ಎಂದುಕೊಂಡ ಇವರು ದೇಶಪರ್ಯಟನೆ ಆರಂಭಿಸಿದ್ದಾರೆ. ಸ್ಫೂರ್ತಿದಾಯಿಯಾಗಲು ಕೆಲಸವನ್ನೇ ತೊರೆದರು ಖಾಸಗಿ ಕಂಪನಿಯಲ್ಲಿ ನೌಕರಿ ಮಾಡಿಕೊಂಡಿದ್ದ ಇವರಿಗೆ ಕೈತುಂಬ ಸಂಬಳ ಬರುತ್ತಿತ್ತು. ಆದರೆ ಸೈಕಲ್‍ನಲ್ಲಿ ದೇಶಪರ್ಯಟನೆ ಮಾಡಬೇಕು ಎಂಬ ಉದ್ಧೇಶದಿಂದ ಇವರು ಕೆಲಸವನ್ನೇ ಬಿಟ್ಟಿದ್ದಾರೆ. 400 ದಿನ 17 ದೇಶ ಹೆಸರು ಸುನಿಲ್ ವಿ ಕೌಶಿಕ. ಇವರ ಪತ್ನಿ ಹೆಸರು ಯುಕಾ ಯೊಕೊಜಾವಾ. ಸುನೀಲ್ ಬೆಂಗಳೂರು ಮೂಲದವರಾಗಿದ್ದು, ಇವರ ಪತ್ನಿ ಯುಕಾ ಜಪಾನ್ ಮೂಲದವರು. ಇವರು ಸೈಕಲ್‍ನಲ್ಲೇ ವಿಶ್ವಪರ್ಯಟನೆಗೆ ಹೊರಟಿದ್ದು, ಜನವರಿವರೆಗೆ 26 ಸಾವಿರ ಕಿ.ಮೀ ಚಲಿಸಿದ್ದಾರೆ. 17 ದೇಶಗಳಿಗೆ ಭೇಟಿ ನೀಡಿದ್ದಾರೆ. ಕೆಲ ವರ್ಷಗಳ ಹಿಂದೆ ಸುನಿಲ್ ಅವರು ಲಡಾಕ್‍ಗೆ ಸೈಕಲ್‍ನಲ್ಲಿ ತೆರಳಿದ್ದರು. ಇಲ್ಲಿ ನಡೆದ ದಲಾಯಿಲಾಮನ ಕಾರ್ಯಕ್ರಮವೊಂದರಲ್ಲಿ ಇವರಿಬ್ಬರು ಭೇಟಿಯಾಗಿದ್ದರು. ಪರಿಚಯ ಪ್ರೀತಿಗೆ ತಿರುಗಿ ಇಬ್ಬರು ಮದುವೆಯಾಗಿದ್ದರು. ನಂತರದಲ್ಲಿ ಆರಂಭವಾಗಿತ್ತು ಇವರ ಸೈಕಲ್ ಪ್ರಯಾಣ. ಈವರೆಗೆ ಥೈಲೆಂಡ್, ಕಾವೋಸ್, ವಿಯೆಟ್ನಾಂ, ಉಜಕಿಸ್ತಾನ್, ಇರಾನ್ ಸೇರಿದಂತೆ ಹಲವು ರಾಷ್ಟ್ರಗಳನ್ನು ಸುತ್ತಿದ್ದಾರೆ. ಇವರ ಪ್ರಯಾಣ ಇಂದಿಗೂ ಮುಂದುವರೆದಿದೆ.

ಸೈಕಲ್ ಬಗ್ಗೆ ಒಂದಿಷ್ಟು.. ಸೈಕಲ್ ತುಳಿಯಲು ವಯಸ್ಸಿನ ಮಿತಿ ಇಲ್ಲ. ಚಿಕ್ಕ ಮಕ್ಕಳಿಂದ ಹಿಡಿದು, ಅಜ್ಜ-ಅಜ್ಜಿಂದಿರವರೆಗೆ ಸೈಕಲ್ ತುಳಿಯಬಹುದು. ಸೈಕಲ್ ಕಡಿಮೆ ಬೆಲೆಗೆ ದೊರೆಯುತ್ತದೆ. ಹೀಗಾಗಿ ವಾಹನ ಖರೀದಿಸಲು ಲೋನ್ ಮಾಡಬೇಕೆಂಬ ಸಮಸ್ಯೆ ಇಲ್ಲ. ಆರ್ಥಿಕ ತೊಂದರೆಯಿಂದ ಬಸ್‍ನಲ್ಲಿ ಹೋಗಲು ಕಷ್ಟಪಡುವವರು ಹಲವರಿದ್ದಾರೆ. ಅಂಥವರ ಪಾಲಿಗೆ ಸೈಕಲ್ ಉಪಕಾರಿ. ಬೆಳಗ್ಗೆ ಪೇಪರ್ ಹಾಕಲು ಹಾಗೂ ಇನ್ನಿತರ ಪಾರ್ಟ್‍ಟೈಮ್ ಕೆಲಸಕ್ಕೆ ಸೈಕಲ್ ಸಹಕಾರಿ. ಇದರಿಂದ ದುಡ್ಡು ಗಳಿಸಬಹುದು. ಸೈಕಲ್ ಇಟ್ಟುಕೊಂಡು ಗೆಳೆಯಯರ ಜತೆ ಹತ್ತಿರದ ಪ್ರವಾಸಿ ಸ್ಥಳಗಳಿಗೆ ಆರಾಮಾಗಿ ಜಾಲಿ ರೈಡ್ ಮಾಡಬಹುದು. ಅದೂ ಹಣವಿಲ್ಲದೇ. ಇತರ ವ್ಯಾಯಾಮಗಳಿಂದ ಸುಸ್ತು ಮತ್ತು ಗಾಯ ಉಂಟಾಗುವ ಸಾಧ್ಯತೆ ಹೆಚ್ಚು. ಆದರೆ ಸೈಕಲ್‍ನಿಂದ ಇಂಥ ಯಾವ ತೊಂದರೆಯೂ ಇರಲಾರದು. ಸೈಕಲ್ ಕಲಿಯಲು ಹೆಚ್ಚು ಸ್ಕಿಲ್ ಬೇಕೆಂಬುದಿಲ್ಲ. ಯಾವ ವಯಸ್ಸಿನಲ್ಲಾದರೂ ಸುಲಭವಾಗಿ ಕಲಿತು ಬಿಡಬಹುದು.

ಸೈಕಲ್‍ನಿಂದ ಆರೋಗ್ಯ: ಬೊಜ್ಜು, ಹೃದಯ ಸಂಬಂಧಿ ಕಾಯಿಲೆಗಳು ಇಂದು ಹೆಚ್ಚುತ್ತಿವೆ. ಇವುಗಳಿಂದ ದೂರ ಉಳಿಯಲು ಹಲವರು ಬೆಳಗ್ಗೆ ವಾಕ್ ಹೋದರೆ, ಇನ್ನೂ ಕೆಲವರು ಜಿಮ್ ಸೇರುತ್ತಾರೆ. ಈ ರೀತಿ ಮಾಡುವ ಬದಲು ನಿತ್ಯ ಕಚೇರಿಗೆ, ಶಾಲೆಗೆ ತೆರಳುವಾಗ ಅಥವಾ ನಿತ್ಯದ ಓಡಾಟಕ್ಕೆ ಸೈಕಲ್ ಬಳಕೆ ಮಾಡಿಕೊಂಡರೆ ಆರೋಗ್ಯ ದೃಷ್ಟಿಯಿಂದ ಉತ್ತಮ. ಸೈಕಲ್‍ನಿಂದ ಬೊಜ್ಜು, ಹೃದಯ ಸಂಬಂಧಿ ಕಾಯಿಲೆ, ಕ್ಯಾನ್ಸರ್, ಮಾನಸಿಕ ಅಸ್ವಸ್ಥತೆ, ಮಧುಮೇಹದಂಥ ಸಮಸ್ಯೆಯಿಂದ ದೂರ ಇರಬಹುದು ಎನ್ನುತ್ತಾರೆ ವೈದ್ಯರು. ಇತರೆ ಲಾಭಗಳು: ಹೃದಯ ರಕ್ತನಾಳದ ಆರೋಗ್ಯ ಹೆಚ್ಚಿಸುತ್ತದೆ. ಮಾಂಸಖಂಡಗಳನ್ನು ದೃಢವಾಗಿಸುತ್ತದೆ. ಸಂದುಗಳ ಚಲನಶೀಲತೆಯನ್ನು ವೃದ್ಧಿಸುತ್ತದೆ. ಮನಸ್ಸಿನ ಒತ್ತಡ ಕಡಿಮೆ ಮಾಡುತ್ತದೆ. ಮೂಳೆ ಗಟ್ಟಿಯಾಗುತ್ತದೆ. ಆತಂಕ ಮತ್ತು ಖಿನ್ನತೆ ಕಡಿಮೆಯಾಗುತ್ತದೆ.

ಬೊಜ್ಜು ಮತ್ತು ತೂಕ ಇಳಿಕೆ..ನಿಮ್ಮ ದೇಹದ ತೂಕ ಇಳಿಸಿಕೊಳ್ಳಲು ಸೈಕಲ್ ಉತ್ತಮ ಮದ್ದು. ಇದರ ಜತೆಗೆ ದೇಹದಲ್ಲಿ ಶೇಖರಣೆಯಾಗುವ ಬೊಜ್ಜನ್ನು ಕರಗಿಸುವಲ್ಲಿಯೂ ಸೈಕಲ್ ಬಹುಮುಖ್ಯ ಪಾತ್ರವಹಿಸಯತ್ತದೆ.

ಗಂಟೆಗೆ 1,200 ಕ್ಯಾಲೋರಿ..ಚಟುವಟಿಕೆ ಮೂಲಕ ವಾರಕ್ಕೆ ಕನಿಷ್ಠ 2,000 ಕ್ಯಾಲರಿ ಶಕ್ತಿಯನು ವ್ಯಯಿಸಬೇಕು ಎನ್ನುತ್ತಾರೆ ವೈದ್ಯರು. ಸೈಕಲ್ ತುಳಿದರೆ ಗಂಟೆಗೆ 300ಕ್ಯಾಲೋರಿ ಶಕ್ತಿ ವ್ಯಯವಾಗುತ್ತದೆ. ಹೀಗಾಗಿ ಆರೋಗ್ಯ ದೃಷ್ಟಿಯಿಂದ ಇದು ಉತ್ತಮ. ಹೃದ್ರೋಗಕ್ಕೆ ಮದ್ದು..ಬೊಜ್ಜು ಹೃದ್ರೋಗಕ್ಕೆ ಮೂಲಕ ಕಾರಣ. ಸೈಕಲ್ ತುಳಿಯುವುದರಿಂದ ಹೃದಯದ ಆರೋಗ್ಯ ಉತ್ತಮಗೊಳ್ಳುತ್ತದೆ. ಇಷ್ಟೇ ಅಲ್ಲದೇ ಹೆಚ್ಚಿನ ರಕ್ತದೊತ್ತಡ, ಪಾಶ್ರ್ವವಾಯುವಿನಂಥ ಸಮಸ್ಯೆಗಳೂ ದೂರವಾಗುತ್ತವೆ. ನಿತ್ಯ ಸೈಕಲ್ ತುಳಿದರೆ ಸ್ತನ ಕ್ಯಾನ್ಸರ್, ಕೊಲೊನ್ ಕ್ಯಾನ್ಸರ್ ನಿಮ್ಮ ಮೇಲೆ ದಾಳಿ ನಡೆಸುವ ಸಾಧ್ಯತೆ ಕಡಿಮೆ. ಪರಿಸರ ರಕ್ಷಣೆಯಲ್ಲಿ ಸೈಕಲ್: ಕಚೇರಿಗೆ ವಾಹನ ತೆಗೆದುಕೊಂಡು ಹೋಗುವ ಬದಲು ಸೈಕಲ್ ತೆಗೆದುಕೊಂಡು ಹೋದರೆ ಹಸಿರು ಮನೆ ಅನಿಲ ಪರಿಸರಕ್ಕೆ ಸೇರುವುದು ಕನಿಷ್ಠ ಶೇ. 06 ಕಡಿಮೆಯಾಗುತ್ತದೆ. ಕಾರಿನಿಂದ ಹೊರ ಬರುವ ಮಾಲಿನ್ಯಕಾರರಕಗಳು ವಾತಾವರಣ ಸೇರಿದರೆ ಪರಿಸರ ಹಾಳಾಗುತ್ತದೆ. ಆದರೆ ಸೈಕಲ್ ಪರಿಸರ ಸ್ನೇಹಿ. ಸೈಕಲ್ ಬಳಕೆಯಿಂದ ಟ್ರಾಫಿಕ್ ಜ್ಯಾಮ್ ಕಿರಿಕಿರಿ ಇರಲಾರವು. ಚಿಕ್ಕ ಚಿಕ್ಕ ರಸ್ತೆಗಳಲ್ಲೂ ಸುಲಭವಾಗಿ ಸಾಗಬಹುದು. ಸೈಕಲ್‍ನಿಂದ ಆರೋಗ್ಯ ಉತ್ತಮವಾಗಿರುತ್ತದೆ. ಹೀಗಾಗಿ ಆರೋಗ್ಯ ಕಾಪಾಡಿಕೊಳ್ಳಲು ನೀವು ಪ್ರತ್ಯೇಕ ಹಣ ವೆಚ್ಛ ಮಾಡಬೇಕೆಂದಿಲ್ಲ. ಸೈಕಲ್ ಟೈರ್‍ಗಳ ಉತ್ಪಾದನೆಗೆ ಕಡಿಮೆ ರಬ್ಬರ್ ಸಾಕು. ಹೀಗಾಗಿ ರಬ್ಬರ್ ಪ್ಲಾಂಟೇಷನ್ ಮಾಡಲು ಪ್ರತಿ ವರ್ಷ ಅರಣ್ಯ ನಾಶ ಮಾಡುವುದು ತಪ್ಪಲಿದೆ. ಇತರ ವಾಹನಗಳು ಹೋಗುವಾಗ ಶಬ್ದ ಉಂಟಾಗುತ್ತದೆ. ಆದರೆ ಸೈಕಲ್‍ನಿಂದ ಈ ಸಮಸ್ಯೆ ಇರಲಾರದು. ಹೀಗಾಗಿ ಶಬ್ದ ಮಾಲಿನ್ಯ ತಡೆಗಟ್ಟಬಹುದು. ಪ್ರತಿ ವರ್ಷ ಕಾರು ಅಪಘಾತದಲ್ಲಿ 33 ಸಾವಿರ ಜನರು ಸಾಯುತ್ತಿದ್ದಾರೆ. ಆದರೆ ಸೈಕಲ್ ಸಂಬಂಧಿತ ಅಪಘಾತದಲ್ಲಿ ಸಾಯುವವರ ಸಂಖ್ಯೆ ಕೇವಲ 500.

ಯುವಕರಲ್ಲಿ ಹೆಚ್ಚುತ್ತಿದೆ ಕ್ರೇಜ್: ಇಂದು ಯುವಕರಲ್ಲಿ ಸೈಕಲ್ ಕ್ರೇಜ್ ಹೆಚ್ಚುತಿದೆ. ಇಂದು ಸಾವಿರ ರೂಪಾಯಿಯಿಂದ ಹಿಡಿದು ಲಕ್ಷ ರೂಪಾಯಿವರೆಗಿನ ಸೈಕಲ್‍ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಇದರ ಜತೆಗೆ ಸ್ಟೈಲಿಶ್ ಮಾಡೆಲ್‍ನ ಸೈಕಲ್‍ಗಳು ಬಂದಿವೆ. ನಿಮ್ಮ ಆಶಯಕ್ಕೆ ತಕ್ಕಂತೆ ಸೈಕಲ್‍ಗಳನ್ನು ನಿರ್ಮಾಣ ಮಾಡಿಕೊಡಲಾಗುತ್ತದೆ. ಗಿಯರ್ ಸೈಕಲ್‍ಗಳಿಂದ ಹಲವು ದೂರ ನಿರಾಯಾಸವಾಗಿ ಸಾಗಬಹುದಾಗಿದೆ. ಈ ಎಲ್ಲ ಕಾರಣಗಳಿಂದ ಯುವಕರಲ್ಲಿ ಸೈಕಲ್ ಕ್ರೇಜ್ ಹೆಚ್ಚುತ್ತಿದೆ.

Categories: ಹರಿತ ಲೇಖನಿ

Leave A Reply

Your email address will not be published.