ಈತ ಗಣರಾಜ್ಯದ ಕನಸು ಕಂಡ ಮೊಟ್ಟ ಮೊದಲ ಕ್ರಾಂತಿ ಪುರುಷ

ವ್ಯಕ್ತಿ-ವಿಶೇಷ: 1857ರಲ್ಲಿ ನಡೆದ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮದ ನಂತರ ಮತ್ತೊಮ್ಮೆ ಭಾರತೀಯರಲ್ಲಿ ಸ್ವಾತಂತ್ರ್ಯದ ಹುಚ್ಚನ್ನು ಹಿಡಿಸಿ, ಅದಕ್ಕಾಗಿಯೇ ತನ್ನ ಪೂರ್ಣ ಬದುಕನ್ನು ಸಮರ್ಪಿಸಿದ ವೀರ ವಾಸುದೇವ ಬಲವಂತ ಫಡ್ಕೆ. ತನ್ನ ಗೇರಿಲ್ಲಾ ಯುದ್ಧ ತಂತ್ರದ ಮೂಲಕ ಬ್ರಿಟಿಷರ ಹುಟ್ಟನ್ನಡಗಿಸಿದ ಫಡ್ಕೆ, ಹುಟ್ಟಿದ್ದು ಮಹಾರಾಷ್ಟ್ರದ ಕೊಲೊಬಾ ಜಿಲ್ಲೆಯ ಶಿರಡೋಣದಲ್ಲಿ. ಮಿಲಿಟರಿ ಅರ್ಥವಿಭಾಗದಲ್ಲಿ ನೌಕರಿ ಮಾಡುತ್ತಿದ್ದ ಈತ, ತನ್ನ ತಾಯಿ ಕೊನೆಯುಸಿರೆಳದಾಗ ಹುಟ್ಟೂರಿಗೆ ತೆರಳಲು ಬ್ರಿಟಿಷ್ ಅಧಿಕಾರಿಗಳಿಂದ ಪರವಾನಗಿ ದೊರೆಯದ ಹಿನ್ನಲೆಯಲ್ಲಿ ಅವರ ಎದುರು ಕಿಡಿಕಾರುತ್ತಿದ್ದ. ನಂತರದ ದಿನದಲ್ಲಿ ತಾಯಿ ಭಾರತಿಯೇ ಈತನ ಮನದಲ್ಲಿ ತುಂಬಿಕೊಂಡಿದ್ದರ ಪರಿಣಾಮವಾಗಿ ಬ್ರಿಟಿಷರ ಕಡುವಿರೋಧಿಯಾದನೆಂದರೆ ತಪ್ಪಾಗಲಾರದು. ಬ್ರಿಟಿಷ್ ವ್ಯವಸ್ಥೆಯಲ್ಲಿ ಸಂಬಳದ ಕುರಿತಾಗಿದ್ದ ತಾರತಮ್ಯ ನೀತಿಯನ್ನು ವಿರೋಧಿಸುವುದರ ಜೊತೆಗೆ ಸಂಘಟನೆಯ ಮೂಲಕ ಸ್ವಾತಂತ್ರ್ಯದ ರುಚಿಯನ್ನು ಜನರಿಗೆ ಹೆಚ್ಚಿಸುವ ಪ್ರಯತ್ನ ಮಾಡಿದ. ಪರಿಣಾಮವಾಗಿ 1879ರಲ್ಲಿ ಯಾತ್ರಿಕರ ಗುಂಪಿನಲ್ಲಿ ಮೈ ಸುಡುವ ಜ್ವರ ಬಂದು ನಿದ್ರಿಸುತ್ತಿರುವ ಸಂದರ್ಭದಲ್ಲಿ ಬ್ರಿಟಿಷ್ ವಿಶೇಷಾಧಿಕಾರಿ ಮೇಜರ್ ಡೇನಿಯಲ್ ತಂಡ ಈತನನ್ನು ಬಂಧಿಸಿ ಕಾರಾಗೃಹಕ್ಕೆ ನೂಕಿತು. ಗಣರಾಜ್ಯದ ಕನಸು ಕಂಡ ಮೊಟ್ಟ ಮೊದಲ ಕ್ರಾಂತಿ ಪುರುಷನ ಪ್ರಾಣಪಕ್ಷಿ ಸೆರೆಮನೆಯಲ್ಲಿಯೇ 1883ರಲ್ಲಿ ಹಾರಿಹೋಯಿತು. ಆದರೆ ಭಾರತೀಯರ ಜನಮಾನಸದಲ್ಲಿ ಆತ ಮಾತ್ರ ಹಿಮಗಿರಿದೆತ್ತರಕ್ಕೆ ಬೆಳೆದು ನಿಂತಿದ್ದ.

– ಗುರುಪ್ರಸಾದ ಶಾಸ್ತ್ರಿ

Categories: ವ್ಯಕ್ತಿ-ವಿಶೇಷ

Leave A Reply

Your email address will not be published.